ಮದ್ಯಪಾನ ಮಾಡಿದ ಪ್ರಯಾಣಿಕಗೆ ಮೆಟ್ರೋ ನಿರಾಕರಣೆ

| Published : Apr 11 2024, 01:46 AM IST / Updated: Apr 11 2024, 06:41 AM IST

ಸಾರಾಂಶ

ಮದ್ಯಪಾನ ಮಾಡಿದ್ದರಿಂದ ಆತನ ಪ್ರಯಾಣಕ್ಕೆ ತಡೆ ನೀಡಲಾಗಿತ್ತು ಎಂದು ನಮ್ಮ ಮೆಟ್ರೋ ಸ್ಪಷ್ಟನೆ ನೀಡಿದೆ.

 ಬೆಂಗಳೂರು: ಮದ್ಯಪಾನ ಮಾಡಿಬಂದ ವ್ಯಕ್ತಿಗೆ ಮೆಟ್ರೋ ರೈಲು ಪ್ರಯಾಣಕ್ಕೆ ತಡೆದಿರುವುದಾಗಿ ಬೆಂಗಳೂರು ಮೆಟ್ರೋ ರೈಲ್ವೆ ನಿಗಮ (ಬಿಎಂಆರ್‌ಸಿಎಲ್‌) ತಿಳಿಸಿದೆ.

ಪ್ರಯಾಣಿಕ ಶರ್ಟ್‌ ಬಟನ್ ಸರಿಯಾಗಿ ಧರಿಸದ ಕಾರಣಕ್ಕೆ ನಿಲ್ದಾಣ ಪ್ರವೇಶ ನಿರಾಕರಿಸಲಾಯಿತು ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾದ ಬಳಿಕ ಬಿಎಂಆರ್‌ಸಿಎಲ್‌ ಈ ಸ್ಪಷ್ಟನೆ ನೀಡಿದೆ.

ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಲ್ಲಿ ಈಚೆಗೆ ರಾತ್ರಿ 7.30ರಸುಮಾರಿಗೆ ಬಂದ ವ್ಯಕ್ತಿ ನಿಲ್ದಾಣ ಪ್ರವೇಶಕ್ಕೆ ಮುಂದಾದಾಗ ಆತನನ್ನು ಭದ್ರತಾ ಸಿಬ್ಬಂದಿ ತಡೆದಿದ್ದಾರೆ. ಈ ವೇಳೆ ಇದನ್ನು ವಿಡಿಯೋ ಮಾಡಿದ್ದ ಪ್ರಯಾಣಿಕರೊಬ್ಬರು ‘ಶರ್ಟ್‌ ಬಟನ್‌ ಸರಿಯಾಗಿ ಧರಿಸಿದ ಕಾರಣಕ್ಕೆ ವ್ಯಕ್ತಿಗೆ ಮೆಟ್ರೋ ಪ್ರಯಾಣ ನಿರಾಕರಿಸಲಾಗಿದೆ’ ಎಂದು ಸಾಮಾಜಿಕ ಜಾಲತಾಣ ‘ಎಕ್ಸ್‌’ ನಲ್ಲಿ ಪೋಸ್ಟ್‌ ಮಾಡಿದ್ದರು.

ಈ ವಿಚಾರ ವೈರಲ್‌ ಆಗುತ್ತಿದ್ದಂತೆ ಬೆಂಗಳೂರು ಮೆಟ್ರೋ ರೈಲು ನಿಗಮದ ವಿರುದ್ಧ ವ್ಯಾಪಕ ಟೀಕೆ ಕೇಳಿಬಂದಿತ್ತು. ಫೆಬ್ರವರಿಯಲ್ಲಿ ರೈತನಿಗೆ ಮೆಟ್ರೋ ಪ್ರಯಾಣಕ್ಕೆ ಅವಕಾಶ ನೀಡಿರಲಿಲ್ಲ. ಇದೀಗ ಕಾರ್ಮಿಕ ಎಂಬ ಕಾರಣಕ್ಕೆ ಪ್ರವೇಶ ನಿರಾಕರಿಸಲಾಗಿದೆ. ಶ್ರೀಮಂತರಿಗೆ ಮಾತ್ರ ಬಿಂಎಂಆರ್‌ಸಿಎಲ್‌ ಮೆಟ್ರೋ ಪ್ರಯಾಣಕ್ಕೆ ಅನುವು ಮಾಡಿಕೊಡುತ್ತದೆಯೆ ಎಂದು ನೆಟ್ಟಿಗರು ಪ್ರಶ್ನಿಸಿದ್ದರು.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಎಂಆರ್‌ಸಿಎಲ್‌, ‘ಮದ್ಯಪಾನ ಮಾಡಿರುವುದಾಗಿ ಸ್ವತಃ ವ್ಯಕ್ತಿಯೇ ಒಪ್ಪಿಕೊಂಡಿದ್ದಾನೆ. ಇತರೆ ಪ್ರಯಾಣಿಕರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಭದ್ರತಾ ಸಿಬ್ಬಂದಿ ತಡೆದಿದ್ದರು. ಬಳಿಕ ವ್ಯಕ್ತಿಯ ಸ್ಥಿತಿಯನ್ನು ಮನವರಿಕೆ ಮಾಡಿಕೊಂಡು ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ವ್ಯಕ್ತಿ ಧರಿಸಿದ್ದ ಉಡುಪಿಗೂ ಹಾಗೂ ಆತನಿಗೆ ತಡೆಯೊಡ್ಡಿದ್ದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದೆ.