ಸಾರಾಂಶ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿ ಹ್ಯಾಟ್ರಿಕ್ ಆಗಿ ಪ್ರಮಾಣ ವಚನ ಸ್ವೀಕರಿಸಿದ ಕ್ಷಣ ಐತಿಹಾಸಿಕ ದಿನವಾಗಿದೆ ಎಂದು ಬಿಜೆಪಿ ತಾಲೂಕು ವಕ್ತಾರ ಬಿ.ಜಗದೀಶ್ಚಂದ್ರ ಹೇಳಿದರು.ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಜೇಸಿ ವೃತ್ತದಲ್ಲಿ ಭಾನುವಾರ ರಾತ್ರಿ ಬಿಜೆಪಿ ಕಾರ್ಯಕರ್ತರು ಆಯೋಜಿಸಿದ್ದ ಸಂಭ್ರಮಾಚರಣೆಯಲ್ಲಿ ಮಾತನಾಡಿದರು.ಸತತ ಮೂರನೇ ಬಾರಿ ದೇಶದ ಪ್ರಧಾನಿ ಪಟ್ಟದ ಗದ್ದುಗೆ ಏರುತ್ತಿರುವುದು ಅಸಾಮಾನ್ಯವಾಗಿದ್ದು, ನರೇಂದ್ರ ಮೋದಿ ಅವರಂತಹ ವಿಶ್ವ ನಾಯಕರಿಂದ ಮಾತ್ರ ಇದು ಸಾಧ್ಯ. ನರೇಂದ್ರ ಮೋದಿ ಜನ ಸಾಮಾನ್ಯರ ದನಿಯಾಗಿರುವ ಹಿನ್ನೆಲೆಯಲ್ಲಿ 3ನೇ ಬಾರಿಗೆ ಪ್ರಧಾನಿ ಪಟ್ಟ ಅಲಂಕರಿಸಲು ಕಾರಣವಾಗಿದೆ.ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ಮುಂದಿನ ದಿನಗಳಲ್ಲಿಯೂ ಮುಂದುವರಿಯಲಿದ್ದು, ದೇಶ ಇನ್ನೂ ಸಹ ಉಚ್ಛ್ರಾಯ ಸ್ಥಿತಿಗೆ ತಲುಪಲಿದೆ. ಮೋದಿ ಅವರ ನೂತನ ಸಚಿವ ಸಂಪುಟ ಬಲಿಷ್ಠವಾಗಿದ್ದು, ದೇಶದ ಸಮಗ್ರತೆ, ಏಕತೆಗಾಗಿ ಕಾರ್ಯನಿರ್ವಹಿಸುವ ವಿಶ್ವಾಸವಿದೆ. ಈ ಬಾರಿ ಮೋದಿ ಅವರ ಸಂಪುಟದಲ್ಲಿ ರಾಜ್ಯಕ್ಕೆ ಸಿಂಹಪಾಲು ದೊರೆತಿದ್ದು, ಇಲ್ಲಿಂದ ಸಂಪುಟ ದರ್ಜೆ, ರಾಜ್ಯ ಖಾತೆ ಯನ್ನು ಪಡೆದಿರುವ ಎಲ್ಲಾ ನೂತನ ಸಚಿವರು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವ ಭರವಸೆ ಯಿದೆ. ದೇಶದ ತಳಸಮುದಾಯಕ್ಕೂ ಸಹ ಎನ್‌ಡಿಎ ಮಿತ್ರಕೂಟದ ಸರ್ಕಾರದಿಂದ ಎಲ್ಲಾ ಸವಲತ್ತುಗಳು ಹಿಂದಿನಂತೆ ಮುಂದುವರಿಯಲಿದೆ ಎಂದರು.
ಬಿ.ಕಣಬೂರು ಗ್ರಾಪಂ ಸದಸ್ಯರಾದ ಕೋಕಿಲಮ್ಮ, ಅಶ್ರಫ್, ಬಿಜೆಪಿ ಯುವ ಮುಖಂಡರಾದ ರಕ್ಷಿತ್ ಸಮುತ್ಕರ್ಷ, ಯೋಗೇಶ್ ಆಚಾರ್ಯ, ಪ್ರಶಾಂತ್ ಪೂಜಾರಿ, ಅರುಣ್ ಆಚಾರ್ಯ, ರಾಘವೇಂದ್ರ, ಸುಧಾಕರ್ ಪೂಜಾರಿ, ಪರಮೇಶ್ ಮತ್ತಿತರರು ಹಾಜರಿದ್ದರು.ಪಟ್ಟಣದ ಜೇಸಿ ವೃತ್ತದಲ್ಲಿ ನಾಸಿಕ್ ಡೋಲಿನೊಂದಿಗೆ ಸಂಭ್ರಮಾಚರಣೆ ನಡೆಸಿದ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಿ.ಕಣಬೂರು ಗ್ರಾಪಂ ವ್ಯಾಪ್ತಿ ವಾಟುಕೊಡಿಗೆ, ಮಸೀದಿಕೆರೆ, ರಂಭಾಪುರಿ ಮಠ, ಮೆಣಸುಕೊಡಿಗೆ, ಸೋಮೇಶ್ವರ ನಗರ, ಬಸವನಕಟ್ಟೆ ಮುಂತಾದ ಕಡೆಗಳಲ್ಲಿಯೂ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.೦೯ಬಿಹೆಚ್‌ಆರ್ ೧:ಭಾರತದ ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಬಾಳೆಹೊನ್ನೂರಿನ ಜೇಸಿ ವೃತ್ತದಲ್ಲಿ ಪಟಾಕಿ ಸಿಡಿಸಿ ನಾಸಿಕ್ ಡೋಲಿನೊಂದಿಗೆ ಸಂಭ್ರಮಾಚರಣೆ ನಡೆಸಿದರು.