ಕೃಷ್ಣಮಠದಲ್ಲಿ ನಡೆದ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಉಡುಪಿ ನಗರದ ಮುಖ್ಯ ರಸ್ತೆಯಲ್ಲಿ ಸುಮಾರು 15 ನಿಮಿಷಗಳ ರೋಡ್ ಶೋ ನಡೆಸಿದರು.

ಮುಗಿಲು ಮಟ್ಟಿದ ಅಭಿಮಾನಿಗಳ ಸಂತಸ, ದಾರಿಯುದ್ದಕ್ಕೂ ಮೋದಿಗೆ ಪುಷ್ಪಾರ್ಚನೆ

ಉಡುಪಿ: ಶುಕ್ರವಾರ ಉಡುಪಿಯಲ್ಲಿ ಪ್ರಧಾನ ಮಂತ್ರಿಯೊಬ್ಬರ ಪ್ರಪ್ರಥಮ ರೋಡ್‌ ಶೋ ನಡೆಯಿತು. ಕೃಷ್ಣಮಠದಲ್ಲಿ ನಡೆದ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಉಡುಪಿ ನಗರದ ಮುಖ್ಯ ರಸ್ತೆಯಲ್ಲಿ ಸುಮಾರು 15 ನಿಮಿಷಗಳ ರೋಡ್ ಶೋ ನಡೆಸಿದರು. ಪ್ರಥಮ ಬಾರಿಗೆ ತಮ್ಮ ಅತ್ಯಾಭಿಮಾನಿ ನಾಯಕರನ್ನು ಕೆಲವೇ ಅಡಿ ಅಂತರದಲ್ಲಿ ಕಂಡು ಕೈಬೀಸಿ ಜೈಕಾರು ಕೂಗಿ ಮೋದಿ ಅಭಿಮಾನಿಗಳು ರೋಮಾಂಚಿತರಾದರು.

11.10ಕ್ಕೆ ಸರಿಯಾಗಿ ಬನ್ನಂಜೆ ನಾರಾಯಣಗುರು ವೃತ್ತದಲ್ಲಿ ಆರಂಭವಾದ ರೋಡ್‌ ಶೋ ಕಲ್ಸಂಕ ವೃತ್ತದವರೆಗೆ ಸುಮಾರು 1 ಕಿ.ಮೀ. ಮಾರ್ಗದುದ್ದಕ್ಕೂ ತಮ್ಮ ನೆಚ್ಚಿನ ನಾಯಕ ನರೇಂದ್ರ ಮೋದಿ ಅವರನ್ನು ಕಣ್ತುಂಬಿಕೊಳ್ಳಲು 50 ಸಾವಿರಕ್ಕೂ ಅಧಿಕ ಮಂದಿ ಕಿಕ್ಕಿರಿದು ನೆರೆದಿದ್ದರು. ದಾರಿಯುದ್ದಕ್ಕೂ ಜನರು ಹಳದಿ ಕೆಂಪು ಸೇವಂತಿ, ಗೊಂಡೆ ಹೂವಿನ ಪಕಳೆಗಳನ್ನು ಎಸೆದು ಮೋದಿಗೆ ಪುಷ್ಪಾಭಿಷೇಕವನ್ನೇ ಮಾಡಿಬಿಟ್ಟರು. ಮೋದಿ 11 ಗಂಟೆಗೆ ಉಡುಪಿಗೆ ಬಂದಿಳಿದಿದ್ದರೆ, ಜನರು ಬೆಳಗ್ಗೆ 9 ಗಂಟೆಯಿಂದಲೇ ಬಂದು ಮೋದಿ ಅವರನ್ನು ಹತ್ತಿರದಿಂದ ನೋಡುವ ಆಸೆಯಿಂದ ಆಯಾಕಟ್ಟಿನ ಸ್ಥಳಗಳಲ್ಲಿ, ನೆತ್ತಿ ಕಾಯಿಸುತ್ತಿದ್ದ ಬಿರು ಬಿಸಿಲಿನಲ್ಲಿಯೂ ಸುಮಾರು 2 ಗಂಟೆ ಕಾಲ ಕಾದು ನಿಂತಿದ್ದರು.

ಮೋದಿ ನಿಧಾನವಾಗಿ ತಮ್ಮೆದುರು ಕಾರಿನಲ್ಲಿ ಸಾಗುತ್ತಿದ್ದಂತೆ, ಬ್ಯಾರಿಕೇಡ್ ಆಚೆ ಕಾದು ನಿಂತಿದ್ದ ಅಭಿಮಾನಿಗಳ ಉತ್ಸಾಹ ಸಂತೋಷಾತಿರೇಕ ಮೇರೆ ಮೀರಿತ್ತು. ಮೋದಿಯ ಗಮನ ತಮ್ಮೆಡೆಗೆ ಸೆಳೆಯುವುದಕ್ಕಾಗಿ ಕೈಬೀಸುತ್ತಾ ಮೋದಿ ಮೋದಿ ಎಂಬ ಕೂಗು ಮುಗಿಲು ಮುಟ್ಟಿತ್ತು. ನಿರೀಕ್ಷೆಗೂ ಮೀರಿ ನೆರೆದಿದ್ದ ಮೋದಿ ಅಭಿಮಾನಿಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಗಮನಿಸುತಿದ್ದ ಸಾವಿರಾರು ಮಂದಿ ಪೊಲೀಸರು ಕೂಡ ಬಿಸಿಲಿನಲ್ಲಿ ಬಸವಳಿಯುತ್ತಾ ತಮ್ಮ ಕರ್ತವ್ಯವನ್ನು ಕಟ್ಟುನಿಟ್ಟಾಗಿ ನಿಭಾಯಿಸುತ್ತಿದ್ದರು.

ಪೊಲೀಸ್ ಎಸ್ಕಾರ್ಟ್ ಮತ್ತು ಬೆಂಗಾವಲು ವಾಹನಗಳು ಸೇರಿ ಸುಮಾರು 20 ವಾಹನಗಳು 1 ಕಿ.ಮೀ. ಈ ರೋಡ್ ಶೋ ಪೂರೈಸಲು ಸುಮಾರು 20 ನಿಮಿಷ ತೆಗೆದುಕೊಂಡಿತ್ತು.ಬನ್ನಂಜೆ ವೃತ್ತದಲ್ಲಿ ಹಾಕಲಾಗಿದ್ದ ಪುಟ್ಟ ವೇದಿಕೆಯ ಮೇಲೆ ಹತ್ತಾರು ಕೃಷ್ಣ ವೇಷಧಾರಿಗಳು ಮೋದಿ ಅವರನ್ನು ಸ್ವಾಗತಿಸಿದರು, ಮುಂದೆ ಜಯಲಕ್ಷ್ಮೀ ವೃತ್ತದಲ್ಲಿ ಯಕ್ಷಗಾನ ವೇಷಧಾರಿಗಳು ಮತ್ತು ಸಿಟಿ ನಿಲ್ದಾಣದಲ್ಲಿ ಹುಲಿವೇಷಧಾರಿಗಳು ಭರ್ಜರಿಯಾಗಿ ಕುಣಿದು ಮೋದಿ ಅವರನ್ನು ಸ್ವಾಗತ ನೀಡಿದರು. ಈ ವೇಷಧಾರಿಗಳತ್ತ ಮೋದಿ ಕೈಬೀಸಿ ಪ್ರತಿವಂದನೆ ಸಲ್ಲಿಸಿದರು.11.30ಕ್ಕೆ ಕಲ್ಸಂಕ ವೃತ್ತದಲ್ಲಿ ರೋಡ್ ಸಂಪನ್ನಗೊಂಡು, ಮೋದಿ ಕೃಷ್ಣಮಠದ ರಥ ಬೀದಿಗೆ ತೆರಳಿದರು. ಅಲ್ಲಿ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಮೋದಿ ಅವರಿಗೆ ವೇದಘೋಷ ಸಹಿತ ಪೂರ್ಣ ಕುಂಭ ಸ್ವಾಗತ ನೀಡಲಾಯಿತು.