ಕಳೆಂಜ ಗೋಶಾಲೆಯಲ್ಲಿ 26ರಂದು ನಂದಗೋಕುಲ ದೀಪೋತ್ಸವ ಕಾರ್ಯಕ್ರಮ

| Published : May 17 2024, 12:39 AM IST / Updated: May 17 2024, 12:40 AM IST

ಸಾರಾಂಶ

ತಾಲೂಕಿನ ಪ್ರತಿ ಗ್ರಾಮದಿಂದ ಅಂದು ಮಧ್ಯಾಹ್ನ 2 ಗಂಟೆ ಬೆಳ್ತಂಗಡಿ ಎಪಿಎಂಸಿಗೆ ಗೋಗ್ರಾಸವನ್ನು ತರಲಿದ್ದಾರೆ. ಅಲ್ಲಿಂದ ವಾಹನ ಮೆರವಣಿಗೆ ಮೂಲಕ ಅದನ್ನು ಕಳೆಂಜ ಗೋಶಾಲೆಗೆ ಸಮರ್ಪಿಸಲಾಗುತ್ತದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ದೇಶಿ ಗೋ ತಳಿಗಳ ರಕ್ಷಣೆ, ಪಾರಂಪರಿಕ ಗೋ ಆಧಾರಿತ ಹಾಗೂ ಸಾವಯವ ಕೃಷಿ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಸ್ಥಾಪನೆಗೊಂಡಿರುವ ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್‌ ಆಶ್ರಯದಲ್ಲಿ ಕಳೆಂಜ ಗ್ರಾಮದಲ್ಲಿ ನಡೆಯುತ್ತಿರುವ ನಂದಗೋಕುಲ ಗೋ ಶಾಲೆಯಲ್ಲಿ ಮೇ 26ರಂದು ಸಂಜೆ ‘ನಂದ ಗೋಕುಲ ದೀಪೋತ್ಸವ’ ಪುಣ್ಯಕೋಟಿಗೆ ಕೋಟಿ ನಮನ ವಿಶಿಷ್ಟ ಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಸುಬ್ರಹ್ಮಣ್ಯ ಕುಮಾ‌ರ್ ಅಗರ್ತ ಹೇಳಿದರು.ಅವರು ಗುರುವಾರ ಬೆಳ್ತಂಗಡಿ ಟ್ರಸ್ಟ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಗೋ ಶಾಲೆಯಲ್ಲಿ ಪ್ರಸ್ತುತ 240ಕ್ಕಿಂತಲೂ ಹೆಚ್ಚು ಅನಾಥ ಹಾಗೂ ಕಸಾಯಿಖಾನೆಗೆ ಸಾಗಿಸಲ್ಪಡುತ್ತಿದ್ದ ಗೋವುಗಳು ಆಶ್ರಯ ಪಡೆದಿವೆ. ಗೋವುಗಳಿಗೆ ಮೇವಿನ ಅಗತ್ಯವಿದ್ದು, ಅದಕ್ಕಾಗಿ ಬೆಳ್ತಂಗಡಿ ತಾಲೂಕಿನ ಎಲ್ಲ ಗ್ರಾಮಗಳಿಂದಲೂ ಗೋಮಾತೆಗೆ ಗೋಗ್ರಾಸ ಸಂಗ್ರಹದ ‘ಗೋಗ್ರಾಸ ಹೊರೆಕಾಣಿಕೆ ಅರ್ಪಣೆ’ಯ ಬೃಹತ್ ಶೋಭಾಯಾತ್ರೆ ಕಾರ್ಯಕ್ರಮವನ್ನು ಮೇ 19ರಂದು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ತಾಲೂಕಿನ ಪ್ರತಿ ಗ್ರಾಮದಿಂದ ಅಂದು ಮಧ್ಯಾಹ್ನ 2 ಗಂಟೆ ಬೆಳ್ತಂಗಡಿ ಎಪಿಎಂಸಿಗೆ ಗೋಗ್ರಾಸವನ್ನು ತರಲಿದ್ದಾರೆ. ಅಲ್ಲಿಂದ ವಾಹನ ಮೆರವಣಿಗೆ ಮೂಲಕ ಅದನ್ನು ಕಳೆಂಜ ಗೋಶಾಲೆಗೆ ಸಮರ್ಪಿಸಲಾಗುವುದು. ಉಜಿರೆ, ಧರ್ಮಸ್ಥಳ, ನಿಡ್ಲೆ, ಕೊಕ್ಕಡದ ಭಾಗದವರು ಅಲ್ಲಲ್ಲಿ ಶೋಭಾಯಾತ್ರೆಯಲ್ಲಿ ಸೇರಿಕೊಳ್ಳಲಿದ್ದಾರೆ. ಗೋ ಪ್ರೇಮಿಗಳು ಹಸಿ ಹುಲ್ಲು, ಒಣಹುಲ್ಲು ಪಶು ಆಹಾರ, ಕೃಷಿ ಉತ್ಪನ್ನಗಳಾದ ಅಡಕೆ, ತೆಂಗಿನಕಾಯಿ, ಅಕ್ಕಿ ಇತ್ಯಾದಿಗಳನ್ನು ಹೊರೆಕಾಣಿಕೆಯಾಗಿ ಅರ್ಪಿಸಬಹುದಾಗಿದೆ ಎಂದು ತಿಳಿಸಿದರು. 26ರಂದು ನಂದಗೋಕುಲ ದೀಪೋತ್ಸವ: ಮೇ 26 ರಂದು ಸಂಜೆ 4 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಇಳಿಸಂಜೆ 6.30ಕ್ಕೆ ಗೋ ಶಾಲೆಯಲ್ಲಿ ನಂದಗೋಕುಲ ದೀಪೋತ್ಸವ ನಡೆಯಲಿದೆ. ದೀಪೋತ್ಸವ ಸಂಚಾಲನಾ ಸಮಿತಿಯ ಗೌರವಾಧ್ಯಕ್ಷ, ಉದ್ಯಮಿ ಶಶಿಧರ ಶೆಟ್ಟಿ ನನೇತೃತ್ವದಲ್ಲಿ ಗೋಮಾತೆಗೆ ನಮಿಸುವ ವಿಶಿಷ್ಟ ಕಾರ್ಯಕ್ರಮ ನಡೆಯಲಿದೆ ಎಂದು ಸುಬ್ರಹ್ಮಣ್ಯ ಕುಮಾರ್‌ ಅಗರ್ತ ಹೇಳಿದರು. ಸಮಿತಿ ಪ್ರಧಾನ ಸಂಚಾಲಕ ಶಶಿರಾಜ್‌ ಶೆಟ್ಟಿ ಮಾತನಾಡಿ, ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಲು ಎಲ್ಲ ತಯಾರಿ ನಡೆಸಲಾಗುತ್ತಿದೆ. ಸುಮಾರು ಐದು ವರ್ಷಕ್ಕೆ ಬೇಕಾದಷ್ಟು ಗೋ ಗ್ರಾಸ ಸಂಗ್ರಹಿಸುವ ಗುರಿ ಇಟ್ಟು ಕೊಳ್ಳಲಾಗಿದೆ. ತಾಲೂಕಿನ ಪ್ರತಿ ಮನೆಗೆ ಆಮಂತ್ರಣ ಪತ್ರಿಕೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ನಾರಾಯಣ ಗೌಡ ಪಂಚಶ್ರೀ, ಪದ್ಮಕುಮಾರ್ ಎಚ್. ಇದ್ದರು.