ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕಲ್ಯಾಣ ಕರ್ನಾಟಕ ವಿಮೋಚನಾ ದಿನದ ಪ್ರಯುಕ್ತ ಚಾಮರಾಜನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ತಮಿಳುನಾಡಿನಲ್ಲೂ ಐದು ನಂದಿನಿ ಮಾರಾಟ ಮಳಿಗೆಗಳು ಬುಧವಾರ ಏಕ ಕಾಲಕ್ಕೆ ವಿದ್ಯುಕ್ತವಾಗಿ ಚಾಲನೆ ಗೊಂಡಿವೆ.ಚಾಮುಲ್ ವ್ಯವಸ್ಥಾಪಕ ನಿರ್ದೇಶಕ ಕೆ.ರಾಜಕುಮಾರ್ ಮಾತನಾಡಿ, ತಮಿಳುನಾಡಿನ ಕೊಯಮತ್ತೂರು ನಗರದಲ್ಲಿ 3 ನಂದಿನಿ ಮೂರು ಮಾರಾಟ ಮಳಿಗೆ, ಊಟಿ ನಗರದಲ್ಲಿ 2 ನಂದಿನಿ ಮಾರಾಟ ಮಳಿಗೆಗಳು ಉದ್ಘಾಟನೆಗೊಂಡಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮೌಖಿಕ ಸೂಚನೆ ನಂತರ ಕೆಎಂಎಫ್ ನಿರ್ದೇಶನಂತೆ ರಾಜ್ಯಾದ್ಯಂತ 500 ನಂದಿನಿ ಪಾರ್ಲರ್, ಫ್ರಾಂಚೈಸಿ ಹಾಗೂ ಜಿಲ್ಲಾ ಹಾಲು ಒಕ್ಕೂಟದ ಮಾರುಕಟ್ಟೆ ವ್ಯಾಪ್ತಿಯಲ್ಲಿ 15 ನಂದಿನಿ ಮಾರಾಟ ಮಳಿಗೆ ಉದ್ಘಾಟನೆಗೊಂಡಿವೆ ಎಂದರು.
ಚಾಮರಾಜನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ 2024-25 ನೇ ಸಾಲಿನಲ್ಲಿ ₹498 ಕೋಟಿ ವಹಿವಾಟು ನಡೆಸಿದೆ. 2024-25 ನೇ ಸಾಲಿನಲ್ಲಿ ₹3.34 ಕೋಟಿ ನಿವ್ವಳ ಲಾಭಗಳಿಸಿದ್ದು, ಚಾಮುಲ್ ಉದಯವಾದ ಬಳಿಕ ಇಷ್ಟು ಲಾಭ ಬಂದಿದ್ದು ಇದೇ ಮೊದಲು. ಹಾಲು ಜಿಲ್ಲೆಯಲ್ಲಿ ಮಾತ್ರವಲ್ಲದೆ ತಮಿಳುನಾಡು, ಕೇರಳದಲ್ಲಿಯೂ ದಿನ ನಿತ್ಯ 30 ಸಾವಿರ ಲೀಟರ್ ಮಾರಾಟವಾಗುತ್ತಿದ್ದು, ಪ್ರತಿನಿತ್ಯ ಸರಾಸರಿ 3 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತದೆ ಎಂದರು.ಜಿಲ್ಲೆ ಮತ್ತು ಹೊರ ರಾಜ್ಯಗಳಲ್ಲಿ ಒಟ್ಟು ದಿನ ನಿತ್ಯ 70 ಸಾವಿರ ಲೀಟರ್ ಹಾಲು ಮತ್ತು 15 ಸಾವಿರ ಮೊಸರು ಮಾರಾಟ ಮಾಡುತ್ತದೆ. ದೇಶಾದ್ಯಂತ ಪ್ರತಿ ನಿತ್ಯ ಸರಾಸರಿ 85 ಸಾವಿರ ಲೀಟರ್ ಯುಎಚ್‌ಟಿ ಗುಡ್ ಲೈಫ್ ಹಾಲನ್ನು ಮಾರಾಟ ಮಾಡಲಾಗುತ್ತದೆ ಎಂದರು.
ಐಸ್ ಕ್ರೀಂ ಘಟಕ:ಚಾಮುಲ್ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಒಕ್ಕೂಟ ಐಸ್ಕ್ರೀಂ ಉತ್ಪಾದನಾ ಘಟಕ ಸ್ಥಾಪನೆಗೆ ಒಪ್ಪಿಗೆ ಸೂಚಿಸಿರುವ ಹಿನ್ನಲೆ ಐಸ್ ಕ್ರೀಂ ಘಟಕ ನಿರ್ಮಿಸಲು ಯೋಜನೆ ರೂಪಿಸಿದ್ದು ಶೀಘ್ರದಲ್ಲೇ ಅಗತ್ಯ ಕ್ರಮವನ್ನು ಚಾಮುಲ್ ಕೈಗೊಳ್ಳಲಿದೆ ಎಂದರು.
ಜಿಲ್ಲೆಯಲ್ಲಿ 33 ಸಾವಿರ ರೈತರು ಒಕ್ಕೂಟಕ್ಕೆ ಹಾಲನ್ನು ಪೂರೈಸುತ್ತಿದ್ದಾರೆ. ಗುಣ ಮಟ್ಟಕ್ಕೆ ತಕ್ಕಂತೆ ಉತ್ತಮ ಬೆಲೆಯನ್ನು ಕೂಡ ಒಕ್ಕೂಟ ನೀಡುತ್ತಿದೆ. ಒಕ್ಕೂಟವು ಸಂಘಗಳ ಕಟ್ಟಡ ದುರಸ್ತಿಗೆ ₹3 ಲಕ್ಷ, ನೂತನ ಕಟ್ಟಡಕ್ಕೆ ₹4 ಲಕ್ಷ ಅನುದಾನ ನೀಡಲಾಗುತ್ತಿದೆ ಎಂದರು.ನಂಬಿಕೆ ಅರ್ಹ:
ಕೋಟ್ಯಾಂತರ ಜನರ ನಂಬಿಕೆಗೆ ಅರ್ಹ ನಂದಿನಿ ಬ್ರಾಂಡ್ ಆಗಿದ್ದು, ನಂದಿನಿ ಉತ್ಪನ್ನಗಳು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಸರಬರಾಜು ಮಾಡುವುದೇ ಒಕ್ಕೂಟದ ಮುಖ್ಯ ಉದ್ದೇಶ. ಜಿಲ್ಲೆಯ ಹಾಲು ಉತ್ಪಾದಕರು ಖಾಸಗಿ ಡೈರಿಗಳಿಗೆ ಹಾಲನ್ನು ಸರಬರಾಜು ಮಾಡದೆ ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲನ್ನು ಸರಬರಾಜು ಮಾಡಿದರೆ ಸರ್ಕಾರ ಹಾಗೂ ಒಕ್ಕೂಟದಿಂದ ದೊರೆಯುವ ಸೌಲಭ್ಯ ಸಿಗಲಿವೆ ಎಂದರು.ಚಾಮುಲ್ ಮಾರುಕಟ್ಟೆ ಅಧಿಕಾರಿಗಳಾದ ರಾಘವೇಂದ್ರ ರಾವ್, ಮಹಮದ್, ತಮಿಳುನಾಡಿನ ಡಿಸ್ಟ್ರಿಬೂಟರ್ ರವಿಪ್ರಕಾಶ್ ಇದ್ದರು.