ಇಂದಿನ ಯುವ ರಾಜಕಾರಣಿಗಳಿಗೆ ನಂಜುಂಡ ಕೃತಿ ಮಾರ್ಗದರ್ಶಿ

| Published : Sep 06 2024, 01:12 AM IST

ಸಾರಾಂಶ

ನವನಗರದ ಬಾಗಲಕೋಟೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾಭವನದಲ್ಲಿ ಗುರುವಾರ ನಡೆದ ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಅವರ ಆತ್ಮಕಥನ ನಂಜುಂಡ ಕೃತಿ ಲೋಕಾರ್ಪಣೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಬೀಳಗಿ ಶಾಸಕ ಜೆ.ಟಿ.ಪಾಟೀಲ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಎಸ್.ಜಿ.ನಂಜಯ್ಯನಮಠ ಅವರು ಜೀವನಗಾಥೆಯ ಆತ್ಮಕಥನ ನಂಜುಂಡ ಕೃತಿ ಇಂದಿನ ರಾಜಕಾರಣಿಗಳಿಗೆ ಆದರ್ಶವಾಗಿದೆ ಎಂದು ಬೀಳಗಿ ಶಾಸಕ ಜೆ.ಟಿ.ಪಾಟೀಲ ಬಣ್ಣಿಸಿದರು.

ನವನಗರದ ಬಾಗಲಕೋಟೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾಭವನದಲ್ಲಿ ಗುರುವಾರ ನಡೆದ ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಅವರ ಆತ್ಮಕಥನ ನಂಜುಂಡ ಕೃತಿ ಲೋಕಾರ್ಪಣೆ ಮಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವ್ಯಕ್ತಿ ತನ್ನ ಆತ್ಮಕಥನದ ಮೂಲಕ ವ್ಯಕ್ತಿತ್ವ ನೈಜತೆಯನ್ನು ಸಮಾಜದ ಮುಂದೆ ತಾನೇ ಪರಿಚಯಿಸಿಕೊಳ್ಳುವಲ್ಲಿ ಅವರ ಪ್ರಾಮಾಣಿಕತೆ ಕಾರಣವಾಗಿದೆ. ನಂಜಯ್ಯನಮಠ ಅವರು ಕೇವಲ ರಾಜಕಾರಣಿಯಲ್ಲದೇ ಇವರ ವ್ಯಕ್ತಿತ್ವ ಬಹುಮುಖವಾದದ್ದಾಗಿದೆ. ಇವರಲ್ಲಿನ ಧೀಮಂತಿಕೆ ನೇರ ನಡೆನುಡಿಯ ಪ್ರಖರವಾದಿ ಸ್ಥಿತ ಪ್ರಜ್ಞೆ ಇವರಲ್ಲಿ ಕಾಣಲು ಸಾಧ್ಯವಾಗಿದೆ. ಇಂದಿನ ಯುವ ರಾಜಕಾರಣಿಗಳಿಗೆ ಇವರ ನಂಜುಂಡ ಕೃತಿ ಮಾರ್ಗದರ್ಶಿಯಾಗಿದೆ ಎಂದರು.ನವನಗರ ಸ.ಪ್ರ.ದ.ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಜಿ.ಜಿ.ಹಿರೇಮಠ ಕೃತಿ ಅವಲೋಕನ ಮಾಡಿ, ನಂಜುಂಡ ಕೃತಿಯಲ್ಲಿ ಪ್ರತಿಯೊಂದು ಘಟನೆಗಳು ಸ್ವವಿವರವಾಗಿ ತಿಳಿಸುತ್ತ, ನಂಜುಂಡ ಕೃತಿ ಅವರು ಉಂಡ ನಂಜು ಮತ್ತು ಸಿಹಿ ಎರಡನ್ನು ಪುಸ್ತಕದ ಮೂಲಕ ಅಭಿವ್ಯಕ್ತಗೊಳಿಸಿದ್ದಾರೆ. ಸಮರ್ಥನಾಗಲು ಸುದೀರ್ಘ ಕ್ರಮಬೇಕು. ಬುದ್ಧಿವಂತನಾಗಲು ನಿತ್ಯ ಶ್ರಮಬೇಕು. ಅವರ ಈ ನಿತ್ಯ ಶ್ರಮವೇ ಇಂದು ಮಹೋನ್ನತಿ ಸ್ಥಾನಕ್ಕೇರಿಸಿದೆ ಎಂದರು.ನಂಜಯ್ಯನಮಠ ಅವರು ತಮ್ಮ ಜೀವನದಲ್ಲಿ ನಂಜನ್ನು ಉಂಡಿದ್ದರು ಅವರು ಸಮಾಜಕ್ಕೆ ಸಿಹಿಯನ್ನು ಮಾತ್ರ ಹಂಚಿದ್ದಾರೆ. ಅವರ ಪ್ರಗತಿಪರ ವಿಚಾರಧಾರೆಗಳು ಮತ್ತು ಅವರ ನಿರಂತರವಾದ ಕಾರ್ಯಪ್ರವೃತ್ತಿ, ಅವರ ಕೌಟುಂಬಿಕ ನಿರ್ವಹಣೆ, ಸಾಮಾಜಿಕ ಸೇವೆ ಮತ್ತು ಸ್ನೇಹ ವಲಯದ ಅನುಭವಗಳನ್ನು ವರ್ತಮಾನದಲ್ಲಿದ್ದು ಭವಿಷ್ಯತ್ತಿನವರಿಗೆ ಮಾರ್ಗದರ್ಶಿಯಾಗಿದ್ದಾರೆ. ಒಬ್ಬ ಆದರ್ಶ ರಾಜಕಾರಣಿ ಹೇಗಿರಬೇಕು ಎಂಬ ಸ್ಥಿತ ಪ್ರಜ್ಞೆಯನ್ನು ನಂಜುಂಡ ಕೃತಿ ಓದುಗರಲ್ಲಿ ಸ್ಥೈರ್ಯ ತುಂಬುತ್ತದೆ ಎಂಬ ಭರವಸೆ ಇದರಲ್ಲಿದೆ ಎಂದು ತಿಳಿಸಿದರು.ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಪ್ರಾಸ್ತಾವಿಕ ಮಾತನಾಡಿ, ತಮ್ಮ ಜೀವನ ಅನುಭವಗಳನ್ನು ನಂಜುಂಡ ಗ್ರಂಥ ರೂಪದಲ್ಲಿ ದಾಖಲಿಸಿರುವ ಸಂತೃಪ್ತಿ ನನಗಿದೆ ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಸ್ವಾಗತಿಸಿದರು. ಹುನಗುಂದ ತಾಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜನ ಸಜ್ಜನ ಶುಭ ಸಂದೇಶ ವಾಚನ ಮಾಡಿದರು. ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ, ದೇವಾಂಗ ಸಮಾಜದ ರಾಜ್ಯಾಧ್ಯಕ್ಷ ರವೀಂದ್ರ ಕಲಬುರಗಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಮೇಶ ಬದ್ನೂರು, ಯುವ ನಾಯಕ ಮಲ್ಲಿಕಾರ್ಜುನ ಚರಂತಿಮಠ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಸ್.ಜಿ.ನಂಜಯ್ಯನಮಠ ಅಭಿಮಾನಿ ಬಳಗದವರು, ಹಿರಿಯರು, ಕಸಾಪ ಪದಾಧಿಕಾರಿಗಳು ಹಾಜರಿದ್ದರು. ಸಮಾರಂಭದಲ್ಲಿ ಜಾನಪದ ಕಲಾವಿದರಾದ ಪವಿತ್ರಾ ಜಕ್ಕಪ್ಪನವರ ಹಾಗೂ ರಂಗಪ್ಪ ಹಲಕುರ್ಕಿ ತತ್ವಪದ ಹಾಡಿ ಪ್ರಾರ್ಥನೆ ಮಾಡಿದರು. ಜಿಲ್ಲಾ ಕಸಾಪ ಪ್ರತಿನಿಧಿ ಯೋಗೇಶ ಲಮಾಣಿ ವಂದನಾರ್ಪಣೆ ಮಾಡಿದರು. ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ ನಿರೂಪಿಸಿದರು.