ನಾಪೋಕ್ಲು ಹೋಬಳಿ ವ್ಯಾಪ್ತಿ ಪ್ರವಾಹ, ಜಲಾವೃತ, ಹಾನಿ

| Published : Jul 28 2024, 02:07 AM IST

ಸಾರಾಂಶ

ಮೂರು ದಿನಗಳಿಂದ ಸುರಿದ ಮಳೆಯ ಪರಿಣಾಮ ಕಾವೇರಿ ನದಿ ತುಂಬಿ ಹರಿಯುತ್ತಿದೆ. ಬೊಳಿಬಾಣೆ ಎಂಬಲ್ಲಿ ಸಂಪರ್ಕ ರಸ್ತೆ ಜಲಾವೃತವಾಗಿದೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಹೋಬಳಿ ವ್ಯಾಪ್ತಿಯಲ್ಲಿ ಮೂರು ದಿನಗಳಿಂದ ಸುರಿಯುತ್ತಿದ್ದು ಮಳೆಯ ಪರಿಣಾಮದಿಂದ ಕಾವೇರಿ ನದಿ ತುಂಬಿ ಹರಿಯುತ್ತಿದೆ.

ನಾಪೋಕ್ಲು-ಮೂರ್ನಾಡು ಸಂಪರ್ಕ ರಸ್ತೆಯ ಹೊದ್ದೂರು ಗ್ರಾಮದ ಬೊಳಿಬಾಣೆ ಎಂಬಲ್ಲಿ ಶುಕ್ರವಾರದಿಂದ ರಸ್ತೆಯಲ್ಲಿ ಕಾವೇರಿ ಪ್ರವಾಹದಿಂದ ಜಲಾವೃತವಾಗಿದೆ. ವಾಹನ ಸಂಚಾರ ಸ್ಥಗಿತಗೊಂಡ ಕಾರಣ ನಾಪೋಕ್ಲು ಕೊಟ್ಟಮುಡಿ, ಕೇಮಾಟ್, ಕುಯ್ಯಂಗೇರಿ ಹೊದ್ದೂರು ಮಾರ್ಗವಾಗಿ ಸುತ್ತು ಬಳಸಿ ಮೂರ್ನಾಡಿಗೆ ವಾಹನಗಳ ಸಂಪರ್ಕ ಮಾಡಲಾಗುತ್ತಿದೆ. ಚೆರಿಯಪರಂಬುವಿನಲ್ಲೂ ರಸ್ತೆ ಕಾವೇರಿ ಜಲಾವೃತವಾಗಿ ನಾಪೋಕ್ಲು- ಕಲ್ಲುಮೊಟ್ಟೆ ಸಂಪರ್ಕ ರಸ್ತೆ ಕಡಿತಗೊಂಡು ಶನಿವಾರವು ಮುಂದುವರೆದಿದೆ. ಕಾವೇರಿ ನದಿ ತುಂಬಿ ಹರಿಯುತ್ತಿದ್ದು ಬಹುತೇಕ ಗದ್ದೆಗಳು, ಕಾಫಿ ತೋಟಗಳು ಪ್ರವಾಹದಲ್ಲಿ ಮುಳುಗಿ ಬಹುತೇಕ ಜಲಾವೃತವಾಗಿದೆ.

ಶುಕ್ರವಾರ ಬೆಳಗ್ಗೆಯಿಂದ ಶನಿವಾರ ಬೆಳಗ್ಗೆ ಒಂದು ದಿನದಲ್ಲಿ ನಾಪೋಕ್ಲು:111.4. ಮಿ.ಮೀ., ಬಲ್ಲಮಾವಟಿ ವ್ಯಾಪ್ತಿಯಲ್ಲಿ 4.60,. ಇಂಚು ಮಳೆ, ನಾಲಡಿಯಲ್ಲಿ 172.0.ಮಿ.ಮೀ., ದೊಡ್ಡ ಪೂಲಿಕೋಟ್ 5.43. ಇಂಚು, ಅಯ್ಯಂಗೇರಿ ಯಲ್ಲಿ 5.33. ಇಂಚು ಮಳೆಯಾಗಿದೆ.

ಸಮೀಪದ ಕರಡ ಗ್ರಾಮದ ಉಲ್ಲಾಸ್ ಎಂಬುವವರ ವಾಸದ ಮನೆಯ ಮೆಲ್ ಚಾವಣಿ ಹಾಗೂ ಮನೆಯ ಗೋಡೆ ಭಾರಿ ಮಳೆ ಗಾಳಿಯಿಂದಾಗಿ ಶುಕ್ರವಾರ ರಾತ್ರಿ ಕುಸಿದು ಭಾಗಶ: ಹಾನಿಯಾಗಿರುತ್ತದೆ. ಘಟನಾ ಸ್ಥಳಕ್ಕೆ ನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದರು ಸೂಕ್ತ ಕ್ರಮ ಕೈಗೊಂಡಿದ್ದಾರೆ.

ಇಲ್ಲಿಗೆ ಸಮೀಪದ ಹಳೆ ತಾಲೂಕು ನಿವಾಸಿ ಎಂ ಎಸ್ ಇಬ್ರಾಹಿಂ ಎಂಬವರ ಕಟ್ಟಡದಲ್ಲಿ ಹೋಟೆಲ್ ನಡೆಸುತ್ತಿದ್ದ ಅಬೂಬಕ್ಕರ್ (ಹೌಕು) ಎಂಬವರ ಹೋಟೆಲ್ ರೂಮಿನ ಚಾವಣಿಗೆ ಅಳವಡಿಸಿದ ಸೀಟುಗಳು ಹಾಗೂ ಗೋಡೆ ಗಾಳಿ ಮಳೆಗೆ ಹಾರಿ ಹೋಗಿ ನಷ್ಟ ಸಂಭವಿಸಿದೆ.