ಸಾರಾಂಶ
ಪಟ್ಟಣದಲ್ಲಿ ಆಟೋ ಚಾಲಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಪರಿಹಾರಕ್ಕಾಗಿ ಗ್ರಾಮ ಪಂಚಾಯಿತಿ, ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಡಿ.30ರಂದು ಬೆಳಗ್ಗೆ ಆಟೋ ಚಾಲಕರು ಗ್ರಾಮ ಪಂಚಾಯಿತಿ ಎದುರು ಆಟೋಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸುವರು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಪಟ್ಟಣದಲ್ಲಿ ಆಟೋ ಚಾಲಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಪರಿಹಾರಕ್ಕಾಗಿ ಗ್ರಾಮ ಪಂಚಾಯಿತಿ, ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಡಿ.30ರಂದು ಬೆಳಗ್ಗೆ ಆಟೋ ಚಾಲಕರು ಗ್ರಾಮ ಪಂಚಾಯಿತಿ ಎದುರು ಆಟೋಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸುವರು ಎಂದು ಆಟೋ ಚಾಲಕರ ಸಂಘ ಅಧ್ಯಕ್ಷ ಟಿ.ಪಿ.ಸುಕುಮಾರ್ ಹೇಳಿದರು.ಪಟ್ಟಣದಲ್ಲಿ ಆಯೋಜಿಸಿದ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಟ್ಟಣದಲ್ಲಿ ಆಟೋ ಚಾಲಕರು ಸೂಕ್ತ ನಿಲ್ದಾಣ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಇಲ್ಲಿನ ಅಪ್ಪಚ್ಚ ಕವಿ ರಸ್ತೆಯಲ್ಲಿ ಆಟೋ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಇಲ್ಲಿ 120 ಮೀ. ಸ್ಥಳದಲ್ಲಿ 40 ಆಟೋಗಳನ್ನು ನಿಲ್ಲಿಸಬಹುದಾಗಿದೆ. ಎನ್‌ಪಿಕೆ ಸಂಖ್ಯೆ ಹೊಂದಿರುವ 160ಕ್ಕೂ ಅಧಿಕ ಆಟೋಗಳು ಪಟ್ಟಣದಲ್ಲಿ ಸಂಚರಿಸುತ್ತಿವೆ. ಉಳಿದ 120 ಆಟೋಗಳಿಗೆ ನಿಲುಗಡೆಗೆ ಅವಕಾಶವಿಲ್ಲದಾಗಿದೆ. ಇನ್ನು 40ಕ್ಕೂ ಅಧಿಕ ಎನ್‌ಪಿಕೆ ಸಂಖ್ಯೆ ಇಲ್ಲದ ಆಟೋಗಳೂ ಇದೆ. ಪ್ರತಿನಿತ್ಯ ಖಾಸಗಿ ವಾಹನಗಳ ಮಾಲೀಕರೊಂದಿಗೆ ಗಲಾಟೆ ಮಾಡುವ ಪರಿಸ್ಥಿತಿ ಇದೆ. ಇಲ್ಲಿ ಖಾಸಗಿ ವಾಹನಗಳು ನಿಲುಗಡೆ ಮಾಡುತ್ತಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ ಎಂದರು.ಆಟೋಗಳ ನಿಲುಗಡೆಗಾಗಿ ನಾಪೋಕ್ಲು -ಮಡಿಕೇರಿ ಮುಖ್ಯರಸ್ತೆಯಲ್ಲಿ 120 ಮೀಟರ್ ಅಂತರದಲ್ಲಿ ಅವಕಾಶ ಕಲ್ಪಿಸಿ ಕೊಡುವಂತೆ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಗ್ರಾಮ ಪಂಚಾಯಿತಿಯು ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಸೂಕ್ತ ಆಟೋ ನಿಲ್ದಾಣದ ವ್ಯವಸ್ಥೆ ಕಲ್ಪಿಸಿ ಕೊಡಬೇಕು. ಬೇತು ರಸ್ತೆಯಲ್ಲಿ 120 ಮೀಟರ್ ಉದ್ದದ ಆಟೋ ನಿಲುಡೆಗೆ ಸ್ಥಳಾವಕಾಶ, ಸಂತೆ ಮೈದಾನದ ಬಳಿ ಕನಿಷ್ಠ 20 ಆಟೊಗಳಿಗೆ ನಿಲ್ಲಿಸಲು ಅವಕಾಶ ಕಲ್ಪಿಸಿ ಕೊಡಬೇಕು ಎಂದು ಅವರು ಒತ್ತಾಯಿಸಿದರು.ಸಂಘದ ಗೌರವ ಅಧ್ಯಕ್ಷ ರಜಾಕ್ ಎಂ.ಇ., ಅಧ್ಯಕ್ಷರ ಮಾತಿಗೆ ಸಹಮತ ವ್ಯಕ್ತಪಡಿಸಿ ಪ್ರತಿಭಟನೆಯ ನಿರ್ಧಾರಕ್ಕೆ ಎಲ್ಲ ಸದಸ್ಯರೂ ಧ್ವನಿಗೂಡಿಸಿದರು.ಈ ಸಂದರ್ಭ ಸಂಘದ ಸಭೆಯಲ್ಲಿ ಸಂಘದ ಕಾರ್ಯದರ್ಶಿ ಪ್ರತೀಶ್, ಖಾಜಾಂಜಿ ಹಂಸ ಕೂರಳಿ, ಆಟೋ ಚಾಲಕರ ಸಂಘದ ಸದಸ್ಯರು ಪಾಲ್ಗೊಂಡಿದ್ದರು.