ಸಾರಾಂಶ
ಅಪ್ಪಾರಾವ್ ಸೌದಿ
ಕನ್ನಡಪ್ರಭ ವಾರ್ತೆ ಬೀದರ್ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿನ ಸಕ್ಕರೆಯನ್ನು ಒತ್ತೆಯಾಗಿಟ್ಟು ಪಡೆದ 78 ಕೋಟಿ ರು. ಸಾಲದ ಹೊರತಾಗಿಯೂ ಸದರಿ ಸಕ್ಕರೆಯನ್ನು ಮಾರಾಟ ಮಾಡಿ ಅಕ್ರಮವಾಗಿ ಬೇರೆಡೆ ಹಣ ವರ್ಗಾಯಿಸಲಾಗಿದೆ ಎಂಬ ದೂರು ಕಾರ್ಖಾನೆ ಅಧ್ಯಕ್ಷರನ್ನು ಜೈಲು ಪಾಲಾಗುವಂತೆ ಮಾಡಿದ್ದಷ್ಟೇ ಅಲ್ಲ, ಪ್ರಕರಣ ಸಿಒಡಿ ತನಿಖೆಯತ್ತಲೂ ಸಾಗಿ ಪ್ರಕರಣ ಮತ್ತಷ್ಟು ವರ್ಷಗಳ ಹಳೆಯ ಕಡತಗಳ ಆಳಕ್ಕೆ ಇಳಿದರೂ ಅಚ್ಚರಿಯಿಲ್ಲ.ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಹಣಕಾಸು ದುರುಪಯೋಗ ವಿಷಯ ಕೆಲ ವರ್ಷಗಳಿಂದ ಚರ್ಚೆಯಲ್ಲಿತ್ತಾದರೂ ಇದೀಗ ಸಾಲ ನೀಡಿದ್ದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಿಇಒ ಮಂಜುಳಾ ಅವರು ಜನವಾಡಾ ಪೊಲೀಸ್ ಠಾಣೆಗೆ ನೀಡಿದ ದೂರು ಕಾರ್ಖಾನೆಯ ಅಧ್ಯಕ್ಷ ಡಿ.ಕೆ ಸಿದ್ರಾಮ್ ಅವರನ್ನೇ ಬಂಧಿಸುವಂಥ ಸ್ಥಿತಿ ನೂಕಲ್ಪಟ್ಟಿದೆ, ಹೀಗೆಯೇ ದೂರು ಆಧರಿಸಿ ಬಂಧಿಸುವುದಕ್ಕೆ ಅವಕಾಶವಿದೆಯಾ ಎಂಬ ಪ್ರಶ್ನೆಗಳು ಭುಗಿಲೆದ್ದಿವೆ.
ಬೀದರ್ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ ಒತ್ತೆಯಾಗಿಟ್ಟು ಸಾಲ ಪಡೆದಿದ್ದ ಸಕ್ಕರೆಯನ್ನೇ ಬ್ಯಾಂಕ್ ಪರವಾನಿಗೆ ಇಲ್ಲದೆ ಮಾರಾಟ ಮಾಡಿ ಬಂದ ಹಣ ಪಡೆದ ಸಾಲಕ್ಕೆ ಪಾವತಿಸದೇ ಬೇರೆ ಕಡೆ ವರ್ಗಾಯಿಸಲಾಗಿದೆ ಎಂದು ದೂರಲಾಗಿದೆಯಾದರೆ ಇದು ರೈತರಿಗೇ ಪಾವತಿಯಾದದದ್ದು ಎಂಬುವದು ಕಾರ್ಖಾನೆಯವರ ವಾದ.ಚಿನ್ನ ಮಾರಿದ್ರೆ ಸುಮ್ಮನಿರ್ತೀರಾ..?
ಅಷ್ಟಕ್ಕೂ ಬ್ಯಾಂಕ್‌ನಲ್ಲಿ ಒತ್ತೆಯಿಡಲಾಗಿದ್ದ ಸಕ್ಕರೆ ಮಾರಾಟ ಮಾಡುವುದು ಬ್ಯಾಂಕಿಗೆ ಮೋಸ ಮಾಡಿದಂತೆ. ಇನ್ನು ಕಬ್ಬು ಪೂರೈಸಿದ ರೈತರಿಗೆ ಹಿಂದಿನ ವರ್ಷದ ಸಕ್ಕರೆ ಮಾರಾಟದಿಂದ ಬಂದ ಹಣದಲ್ಲಿ ಬಾಕಿ ಪಾವತಿಸಬಹುದಾಗಿತ್ತಲ್ಲ, ನೀವು ಯಾವುದೋ ಬ್ಯಾಂಕ್‌ನಲ್ಲಿ ಅಡಿವಿಟ್ಟ ಚಿನ್ನವನ್ನು ಆ ಬ್ಯಾಂಕ್‌ನವರು ನಿಮ್ಮ ಪರವಾನಿಗೆ ಇಲ್ಲದೆ ಮಾರಾಟ ಮಾಡಿ ತನ್ನ ಗ್ರಾಹಕರಿಗೆ ಸಾಲದ ರೂಪದಲ್ಲಿಯೋ, ಎಫ್‌ಡಿ ರೂಪದಲ್ಲಿಯೋ ಹಂಚಿದರೆ ಸುಮ್ಮನಿರ್ತೀರಾ ಎಂದು ಬ್ಯಾಂಕಿನ ಸಿಇಒ ಮಂಜುಳಾ ಅವರು ಕನ್ನಡಪ್ರಭದೊಂದಿಗೆ ಮಾತನಾಡುತ್ತಾ ಕಾರ್ಖಾನೆಯವರನ್ನು ಪ್ರಶ್ನಿಸಿದ್ದಾರೆ.ಒಂದಂತೂ ಸ್ಪಷ್ಟ ಕಾರ್ಖಾನೆಯ ಆಡಳಿತ ಮಂಡಳಿ ಮೇಲೆರೆಗಿರುವ ಈ ಕೋಟ್ಯಂತರ ರುಪಾಯಿ ಸಾಲದ ಅಕ್ರಮ ತನಿಖೆಯನ್ನು ಸ್ಥಳೀಯ ಪೊಲೀಸರಿಗೆ ತಾಂತ್ರಿಕ ತೊಡಕುಗಳು ಎದುರಾಗಿ ಇದನ್ನು ಸಿಒಡಿ ತನಿಖೆಗೆ ವಹಿಸೋದ್ರಲ್ಲಿ ಕಾಲ ದೂರವೇನಿಲ್ಲ. ಹೀಗೆಯೇ ಸಿಒಡಿ ತನಿಖೆಗಳಿದರೆ ಕಾರ್ಖಾನೆಯ ಪ್ರತಿಯೊಂದು ವ್ಯವಹಾರವನ್ನೂ ಜಾಲಾಡುವದರಲ್ಲಿ ಸಂದೇಹವಿಲ್ಲ.ಸೂಕ್ತ ತನಿಖೆಯಾಗಲಿ:
ಸದರಿ ಸಕ್ಕರೆ ಒತ್ತೆ ಸಾಲ ಪ್ರತಿ ವರ್ಷವೂ ನಡೆದುಕೊಂಡು ಬಂದ ರೂಢಿ ಪದ್ಧತಿ ಎಂಬಂತಾಗಿದ್ದರೆ ಸದರಿ ಕಾರ್ಖಾನೆಯಲ್ಲಿ ಯಾವ ವರ್ಷ ಸಕ್ಕರೆ ದಾಸ್ತಾನು ಕಡಿಮೆಯಾಗಿತ್ತು ಎಂಬುವದನ್ನು ಆಯಾ ವರ್ಷದ ಆಡಿಟ್‌ನಲ್ಲಿ ಆಡಿಟರ್‌ಗಳು ತಮ್ಮ ವರದಿಯಲ್ಲಿ ತಿಳಿಸದೇ ಇದ್ದಲ್ಲಿ ಅದರ ಹೊಣೆಯನ್ನು ಆಡಿಟರ್‌ಗಳೂ ಹೊರಬೇಕಾಗುತ್ತದೆ. ಇನ್ನು ಅದನ್ನು ತನ್ನ ವರದಿಯಲ್ಲಿ ಪ್ರಸ್ತಾಪಿಸಿದ್ದರೆ ಯಾವ ವರ್ಷದಿಂದ ಇಂಥ ಒತ್ತೆ ಸಕ್ಕರೆಯನ್ನು ಮಾರಾಟ ಮಾಡಲಾಗಿದೆ ಮತ್ತು ಮಾಡಲಾಗುತ್ತಿತ್ತು ಎಂಬುವದು ಬಹಿರಂಗವಾಗಲು ತಡವೇನಿಲ್ಲ.ಬಾಕ್ಸ್--------
ಹೈಕೋರ್ಟ್‌ಗೆ ಒತ್ತೆ ಸಕ್ಕರೆ ಮಾಹಿತಿ ನೀಡಿದ್ದರೇ?ಬ್ಯಾಂಕ್‌ನಲ್ಲಿ ಒತ್ತೆಯಿಡಲಾದ ಸಕ್ಕರೆಯನ್ನು ಹೈಕೋರ್ಟ್ ಆದೇಶದ ಮೇರೆಗೆ ಮಾರಾಟ ಮಾಡಿ ರೈತರಿಗೆ ಬಾಕಿ ಪಾವತಿಸಲಾಗಿದೆ ಎಂದು ಹೇಳುತ್ತಿರುವ ಕಾರ್ಖಾನೆ ಅಧ್ಯಕ್ಷ ಡಿ.ಕೆ ಸಿದ್ರಾಮ್ ಹೈಕೋರ್ಟ್ ಆದೇಶವನ್ನು ಬಹಿರಂಗಪಡಿಸಲಿ ಎಂಬುವದು ಹಲವರ ಆಗ್ರಹ. ಕೋರ್ಟ್ ಸಕ್ಕರೆ ಮಾರಾಟ ಮಾಡಿ ಬಾಕಿ ತೀರಿಸಲು ಅನುಮತಿಸಿರಬಹುದೇ ವಿನಹ ಬ್ಯಾಂಕ್‌ವೊಂದರಲ್ಲಿ ಅಡವಿಟ್ಟ ಸಕ್ಕರೆಯನ್ನು ಮಾರಾಟ ಮಾಡಿ ಬಂದ ಹಣವನ್ನು ರೈತರಿಗೆ ಪಾವತಿಸುವಂತೆ ಹೇಳುವದಾದರೂ ಹೇಗೆ, ಇಲ್ಲಿ ಕೋರ್ಟ್ ಆದೇಶವನ್ನು ತಿರುಚಲಾಗಿದೆ, ಹೈಕೋರ್ಟ್‌ಗೆ ಸಕ್ಕರೆ ಒತ್ತೆ ಇಟ್ಟಿರುವ ಮಾಹಿತಿಯನ್ನು ನೀಡದೇ ಮುಚ್ಚಿಟ್ಟಿದ್ದರೆ ಅದು ಅಪರಾಧವೇ ಸರಿ ಎಂಬ ಆರೋಪವೂ ಪ್ರಸಕ್ತ ಆಡಳಿತ ಮಂಡಳಿ ಮೇಲಿದೆ. ಏನೇಯಾಗಲಿ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರ ಹಿತ ಕಾಪಾಡುವದು ಬಹುಮುಖ್ಯ. ಕಬ್ಬಿನ ಬಾಕಿ ಪಾವತಿಸುವದಕ್ಕೆ ತಕ್ಷಣ ಕ್ರಮವಾಗಬೇಕು ಇಲ್ಲವಾದಲ್ಲಿ ರೈತರಲ್ಲಿ ಆತಂಕ ಸೃಷ್ಟಿ ಖಂಡಿತ.