ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ವಿದ್ಯೆಯಿಂದ ಪ್ರಭುದ್ಧರಾಗಿ, ಸಂಘಟನೆಯಿಂದ ಬಲಿಷ್ಠರಾಗಿ ಎಂಬ ಸಂದೇಶವನ್ನು ನೀಡಿದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಮತ್ತು ಸಂದೇಶಗಳು ಮನುಕುಲಕ್ಕೆ ಮಾರ್ಗದರ್ಶಿಯಾಗಿವೆ ಎಂದು ಮಲೆನಾಡು ಸಿರಿ ಸೇವಾ ಟ್ರಸ್ಟ್ ಅಧ್ಯಕ್ಷ ರಾಜು ಹಿರಿಯಾವಲಿ ಹೇಳಿದರು.ಪಟ್ಟಣದ ಹೊಸಪೇಟೆ ಬಡಾವಣೆಯ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಲ್ಲಿ ಮಂಗಳವಾರ ಮಲೆನಾಡು ಸಿರಿ ಸೇವಾ ಟ್ರಸ್ಟ್ ಹಾಗೂ ಬಿಎಸ್‌ಎನ್‌ಡಿಪಿ ಸಂಘಟನೆ ಸಹಯೋಗದಲ್ಲಿ ಹಮ್ಮಿಕೊಂಡ ನಾರಾಯಣ ಗುರು ಜಯಂತಿ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಕ್ಷಣದ ಜತೆಗೆ ಆಧುನಿಕ ವಿಜ್ಞಾನಕ್ಕೂ ಸಹ ನಾರಾಯಣ ಗುರುಗಳು ಪ್ರೋತ್ಸಾಹ ನೀಡಿದರು. ಅಂದಿನ ಕಾಲಘಟ್ಟದಲ್ಲಿದ್ದ ಸಮಾಜದ ಅನಿಷ್ಟ ಪದ್ಧತಿಗಳ ವಿರುದ್ಧವಾಗಿ ಹೋರಾಡುವ ಮೂಲಕ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿದರು. ಈ ನಿಟ್ಟಿನಲ್ಲಿ ಕೇರಳ ರಾಜ್ಯ ಪ್ರಸ್ತುತ ದೇಶದಲ್ಲಿಯೇ ಅತಿ ಹೆಚ್ಚು ವಿದ್ಯಾವಂತರನ್ನು ಹೊಂದಿದ ನಾಡಾಗಿದೆ ಎಂದು ಹೇಳಿದರು.ನಾರಾಯಣ ಗುರುಗಳು ಮಾನವೀಯ ಮೌಲ್ಯಗಳ ಆಧಾರದ ಮೇಲೆ ಸಮಾಜವನ್ನು ಒಗ್ಗೂಡಿಸಲು ಹಾಗೂ ಸರ್ವರ ಏಳಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದರು ಎಂದ ಅವರು, ನಾರಾಯಣಗುರುಗಳ ಜಯಂತಿಯ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಾ ಇರುವವರನ್ನು ಗುರುತಿಸುವ ಕೆಲಸವನ್ನು ಸಂಘಟನೆಯಿಂದ ಮಾಡಲಾಗುತ್ತಿದೆ ಎಂದರು.
ಜಿಲ್ಲಾ ಕ್ರಿಯಾಶೀಲ ಪ್ರಶಸ್ತಿ ಪುರಸ್ಕೃತ, ಕನ್ನಡಪ್ರಭ ವರದಿಗಾರ ಎಚ್.ಕೆ.ಬಿ.ಸ್ವಾಮಿ ಮಾತನಾಡಿ, ನಾರಾಯಣ ಗುರುಗಳು ಸಮಸಮಾಜದ ನಿರ್ಮಾಣದ ಜೊತೆಗೆ ಸಮಾಜದ ಡೊಂಕುಗಳನ್ನು ತಿದ್ದುವ ಕೆಲಸ ಮಾಡಿದರು. ಒಂದು ಸಮುದಾಯದವರು ಇತರೆ ಸಮುದಾಯದವರನ್ನು ಗುರುತಿಸಿ ಸನ್ಮಾನಿಸುವುದು ವಿರಳ. ಇಂಥಹ ಬೆಳವಣಿಗೆ ಇತರೆ ಸಮುದಾಯದಲ್ಲಿಯೂ ನಡೆದರೆ ನಾರಾಯಣ ಗುರುಗಳ ಸಮಾನತೆ ಪರಿಕಲ್ಪನೆ ಸಾರ್ಥಕವಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಪತ್ರಕರ್ತರಾದ ಎಚ್.ಕೆ.ಬಿ.ಸ್ವಾಮಿ, ನೋಪಿ ಶಂಕರ್, ಪ್ರಗತಿಪರ ಯುವ ಕೃಷಿಕ ಅರುಣಕುಮಾರ್ ಕೊಡಕಣಿ, ಬಿಎಸ್‌ಎನ್‌ಡಿಪಿ ಸಂಘಟನೆ ಮಹಿಳಾ ಜಿಲ್ಲಾಧ್ಯಕ್ಷೆ ರೇಣುಕಾ ಲೋಕೇಶ್, ನಾರಾಯಣಗುರು ಪತ್ತಿನ ಸಹಕಾರ ಸಂಘದ ಸಂಸ್ಥಾಪಕ ನಾರಾಯಣರಾವ್ ಹುಲ್ತಿಕೊಪ್ಪ, ಶಿಕ್ಷಕ ಈರಪ್ಪಯ್ಯರನ್ನು ಸನ್ಮಾನಿಸಲಾಯಿತು.
ಜಿಪಂ ಮಾಜಿ ಉಪಾಧ್ಯಕ್ಷ ಪಾಣಿ ರಾಜಪ್ಪ, ಮಾಜಿ ಸದಸ್ಯ ತಬಲಿ ಬಂಗಾರಪ್ಪ, ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ. ಶೇಖರ್, ಈಡಿಗ ಸಮಾಜದ ತಾಲೂಕು ಮಾಜಿ ಅಧ್ಯಕ್ಷ ಕೆ. ಅಜ್ಜಪ್ಪ ಕಾಸರಗುಪ್ಪೆ, ಪುರಸಭೆ ಅಧ್ಯಕ್ಷ ಪ್ರಭು ಮೇಸ್ತಿç, ಮುಖ್ಯಾಧಿಕಾರಿ ಎಚ್.ವಿ. ಚಂದನ್, ಹಳೇಸೊರಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್ ಜೆ. ಹಳೇಸೊರಬ, ಬುಕ್ಕೇಶ್ ಯಲಸಿ, ಕೆರಿಯಪ್ಪ ಹಳೇಸೊರಬ, ವೇಣುಗೋಪಾಲ್, ನಾಗರಾಜ್ ಜಯಂತಿಗ್ರಾಮ, ಎಸ್.ಡಿ. ನಾಯ್ಕ್, ಗ್ರಾಪಂ ಅಧ್ಯಕ್ಷೆ ಅನುಸೂಯ ಹರೀಶಿ, ಜಯಮ್ಮ ತಡಗಣಿ, ಸುಮಂಗಲ ಕೆಂಚಿಕೊಪ್ಪ ಇತರರು ಇದ್ದರು.