ಸ್ಮಶಾನಗಳ ಅಭಿವೃದ್ಧಿಗೆ ನೆರವಾದ ನರೇಗಾ

| Published : Oct 17 2024, 12:04 AM IST

ಸಾರಾಂಶ

ಇಷ್ಟು ವರ್ಷ ಸ್ಮಶಾನದಲ್ಲಿ ಮೂಲ ಸೌಕರ್ಯದ ಕೊರತೆ ಇತ್ತು.

ಬಿ.ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ: ನರೇಗಾ ಯೋಜನೆಯಲ್ಲಿ ತಾಲೂಕಿನ 221 ಸ್ಮಶಾನಗಳು ಅಭಿವೃದ್ಧಿಯತ್ತ ಮುಖ ಮಾಡಿವೆ.

ಇಷ್ಟು ವರ್ಷ ಸ್ಮಶಾನದಲ್ಲಿ ಮೂಲ ಸೌಕರ್ಯದ ಕೊರತೆ ಇತ್ತು. ಅಂತ್ಯಕ್ರಿಯೆಗೆ ಹೋಗುವವರಿಗೆ ನೆರಳು, ನೀರು ಇರಲಿಲ್ಲ. ಅನೇಕ ಸ್ಮಶಾನಗಳ ಭೂಮಿ ಒತ್ತುವರಿಯಾಗಿತ್ತು.

ಇದನ್ನೆಲ್ಲ ಮನಗಂಡ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ತಾಪಂ ನರೇಗಾ ಅಧಿಕಾರಿಗಳ ತಂಡ ಅಭಿವೃದ್ಧಿಗೆ ಕ್ರಿಯಾ ಯೋಜನೆ ತಯಾರಿಸಿ ಕ್ರಮ ಕೈಗೊಂಡಿತು.

ಆ ಪ್ರಕಾರ ತಾಲೂಕಿನಲ್ಲಿರುವ 221 ಸ್ಮಶಾನದಲ್ಲಿ 191 ಸ್ಮಶಾನಗಳ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿದೆ. ಪ್ರತಿಯೊಂದು ಗ್ರಾಮದ ಸ್ಮಶಾನದಲ್ಲಿ ನೆರಳಿನ ಶೆಡ್‌, ಮುಂಭಾಗ ಗೇಟ್‌ ಅಳವಡಿಕೆ, ನೀರಿನ ತೊಟ್ಟಿ, ಸ್ಮಶಾನದ ಸುತ್ತಲು 5 ಅಡಿ ಅಗಲ, 3 ಅಡಿ ಆಳದ ಟ್ರಂಚ್‌ ಹೊಡೆದು ಅದರಲ್ಲಿ ಹಾಗೂ ಸುತ್ತಲು ಸಾಮಾಜಿಕ ಅರಣ್ಯ ಹಾಗೂ ಗ್ರಾಪಂ ಸಹಯೋಗದಲ್ಲಿ ಸಸಿ ನೆಡುವ ಯೋಜನೆ ಆರಂಭಗೊಂಡಿದೆ.

ಪ್ರತಿಯೊಂದು ಸ್ಮಶಾನದ ಅಭಿವೃದ್ಧಿಗೆ ₹4.60 ಲಕ್ಷ ಅನುದಾನ ನಿಗದಿಯಾಗಿದೆ, ಇದರಲ್ಲಿ ಶೇ.60ರಷ್ಟು ಕೂಲಿಕಾರರಿಗೆ ಕೂಲಿ ಹಣ ಹಾಗೂ ಶೇ.40ರಷ್ಟು ಸಾಮಗ್ರಿಗಳಿಗೆ ಮೀಸಲಿಡಲಾಗಿದೆ.

ಕಂಚಿಕೇರಿ, ಗುಂಡಗತ್ತಿ, ತಲುವಾಗಲು, ಕಂಬಟ್ರಹಳ್ಳಿ, ಪುಣಭಗಟ್ಟ, ಹಲುವಾಗಲು, ನಂದಿಬೇವೂರು, ಮಾಡ್ಲಗೇರಿ ಉಚ್ಚಂಗಿದುರ್ಗ ಸೇರಿದಂತೆ ಒಟ್ಟು 221 ಗ್ರಾಮಗಳ ಸ್ಮಶಾನ ಅಭಿವೃದ್ದಿ ಬರದಿಂದ ಸಾಗಿದೆ.

ತಾಲೂಕಿನಲ್ಲಿ ನರೇಗಾ ದಡಿ ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ, 3 ಸಾವಿರ ಕೃಷಿ ಹೊಂಡಗಳ ನಿರ್ಮಾಣ, ಕೆರೆ ಹೂಳೆತ್ತುವುದು, ಬದು ನಿರ್ಮಾಣ ಹೀಗೆ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳುತ್ತಾ ಇದೀಗ ಸ್ಮಶಾನಗಳ ಅಭಿವೃದ್ದಿ ಸಹ ನರೇಗಾದ ಹೆಗಲಿಗೆ ಬಂದಿದೆ.

ಉತ್ತಮ ಮಳೆಯಾಗುತ್ತಿರುವುದರಿಂದ ನರೇಗಾದಡಿ ಕೈಗೊಂಡಿರುವ ಕೃಷಿ ಹೊಂಡಗಳು, ಗೋಕಟ್ಟೆಗಳು ತುಂಬಿ ನಳನಳಿಸುತ್ತಿವೆ. ನರೇಗಾ ಯೋಜನೆ ಕೂಲಿಕಾರರಿಗೆ ಹಣಕಾಸಿನ ನೆರವಾಗುವುದರ ಜೊತೆಗೆ ವಿವಿಧ ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕೆ ನೆರವಾಗಿದೆ.

ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ ಸ್ಮಶಾನಗಳ ಅಭಿವೃದ್ಧಿ ಕುರಿತು ಅನೇಕ ಸಭೆಗಳಲ್ಲಿ ಪ್ರಸ್ತಾಪಿಸಿದ್ದರು. ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ, ತಾಪಂ ಇಒ ಚಂದ್ರಶೇಖರ, ನರೇಗಾ ಸಹಾಯಕ ನಿರ್ದೆಶಕ ಸೋಮಶೇಖರ ಅವರ ಆಸಕ್ತಿಯಿಂದ ಸ್ಮಶಾನಗಳು ತಾಲೂಕಿನಲ್ಲಿ ಅಭಿವೃದ್ಧಿಗೊಳ್ಳುತ್ತಿವೆ.

ನರೇಗಾ ಯೋಜನೆ ಬಡ ಕೂಲಿಕಾರರಿಗೆ ವರದಾನವಾಗಿದೆ. ವಿವಿಧ ಕ್ಷೇತ್ರಗಳ ಅಭಿವೃದ್ಧಿಯಾಗುತ್ತಲಿದೆ. ಶಾಸಕಿ ಎಂ.ಪಿ.ಲತಾ ಹಾಗೂ ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ, ಇಒ ಚಂದ್ರಶೇಖರ ಅವರ ಸಹಕಾರದಿಂದ ಇಷ್ಟೊಂದು ಕೆಲಸ ವಾಗುತ್ತಿವೆ ಎನ್ನುತ್ತಾರೆ ನರೇಗಾ ಸಹಾಯಕ ನಿರ್ದೇಶಕ ಯು.ಎಚ್. ಸೋಮಶೇಖರ.