ಸಾರಾಂಶ
ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಪಂ ವತಿಯಿಂದ ಪರಪುರ ಕೆರೆಯಲ್ಲಿ ಕೈಗೆತ್ತಿಕೊಂಡಿರುವ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿಯೇ ನರೇಗಾ ಕೂಲಿಕಾರ್ಮಿಕರ ಸಭೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ದೇವದುರ್ಗ
ವಿವಿಧ ಗ್ರಾಪಂಗಳಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡುವ ಪ್ರತಿಯೊಬ್ಬರೂ ಸಹ ಅಗತ್ಯ ಸೌಲಭ್ಯ ಪಡೆದುಕೊಳ್ಳಬೇಕಾದರೆ ಸಂಘಟಿತರಾಗಬೇಕೆಂದು ಪ್ರಾಂತ ಕೃಷಿ ಕೂಲಿಕಾರರ ಸಂಘಟನೆ ಜಿಲ್ಲಾ ಸಮಿತಿ ಕಾರ್ಯದರ್ಶಿ ಸಂಗಮೇಶ ಮೂಲಮನಿ ಹೇಳಿದರು.ತಾಲೂಕಿನ ಜಾಲಹಳ್ಳಿ ಗ್ರಾಪಂಯಿಂದ ಪರಪುರ ಕೆರೆಯಲ್ಲಿ ಕೈಗೆತ್ತಿಕೊಂಡಿರುವ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿಯೇ ಹಮ್ಮಿಕೊಂಡ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಹಿಂದೆ ತಾಲೂಕಿನಲ್ಲಿ ನರೇಗಾದಲ್ಲಿ ಸಾಕಷ್ಟು ಭ್ರಷ್ಟಾಚಾರವಾಗಿದ್ದು, ಅದು ಮರುಕಳಿಸದಂತೆ ಎಚ್ಚರಿಕೆವಹಿಸಬೇಕಾಗಿದೆ ಎಂದರು.
ನರೇಗಾ ಕಾರ್ಮಿಕರಿಗೆ ಕನಿಷ್ಟ ಕೂಲಿ 400 ರು. ನೀಡಬೇಕು. ಕೆಲಸಕ್ಕೆ ಬರುವ ಪ್ರತಿಯೊಬ್ಬರಿಗೂ ಅನಿಷ್ಟ ಸೌಲಭ್ಯ ನೀಡಬೇಕು ಎನ್ನುವ ಅನೇಕ ಬೇಡಿಕೆ ಈಡೇರಿಸುವಂತೆ ಸಂಘಟನೆ ಹೋರಾಟ ನಡೆಸುತ್ತಿದ್ದು, ಪಪಂಗಳಿಗೂ ನರೇಗಾ ವಿಸ್ತರಿಸುವಂತೆ ಆಗ್ರಹಿಸುತ್ತಿದೆ ಎಂದು ಹೇಳಿದರು.ಮುಂದಿನ ಒಂದು ತಿಂಗಳ ಅವಧಿಯಲ್ಲಿಯೇ ಪ್ರತಿಯೊಂದು ಕುಟುಂಬದಿಂದ ಹೆಚ್ಚಿನ ಮಾನವ ದಿನ ಬಳಕೆ ಮಾಡುವಂತೆ ಅಧಿಕಾರಿಗಳು ಕೆಲಸ ನೀಡಬೇಕು. ಕಾರಣ ಬೇಸಿಗೆ ಇರುವುದರಿಂದ ಕೂಲಿಕಾರರಿಗೆ ಯಾವುದೇ ಕೃಷಿ ಕೆಲಸ ಇಲ್ಲದೇ ಇರುವುದರಿಂದ ರೈತರು ಸಹ ಈ ಯೋಜನೆಯಡಿ ಕೆಲಸ ಮಾಡಬಹುದು. ಅಲ್ಲದೇ ರೈತರ ಕೆಲಸಕ್ಕೂ ಅಡ್ಡಿ ಅಗುವುದಿಲ್ಲ. ನಿತ್ಯ ಕೆಲಸಕ್ಕೆ ಬರುವ ಪ್ರತಿಯೊಬ್ಬರಿಗೆ 349 ರು. ಕೂಲಿ ಇದ್ದು, ಈ ಕೆರೆಯಲ್ಲಿ ಕಳೆದ 12 ದಿನಗಳಿಂದ ಸುಮಾರು 500 ಜನ ಕೆಲಸ ಮಾಡುತ್ತಿದ್ದು, ಅಗತ್ಯವಾಗಿ ಕೂಲಿಕಾರರಿಗೆ ನೆರಳಿನ ವ್ಯವಸ್ಥೆ ಹಾಗೂ ಶುದ್ಧ ಕುಡಿಯುವ ನೀರಿನ ಸೌಲಭ್ಯ ಒದಗಿಸದೇ ಇರುವುದರಿಂದ ಕೂಲಿಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ತಾಲೂಕು ಸಮಿತಿ ಅಧ್ಯಕ್ಷ ಲಿಂಗಣ್ಣ ನಾಯಕ ಮಕಾಶಿ, ಯಲ್ಲಪ್ಪ ಗಚ್ಚಿನಮನಿ, ಸುರೇಶ ಗೌಡ ಹಂಪರಗುಂದಿ, ನರೇಶ, ಅನಂದ, ಶಾಂತಕುಮಾರ, ನರಸಪ್ಪ,ಶರಣಪ್ಪ ಸಾಲಿ, ಗಣೇಶ, ಗೋವಿಂದ ಉಪಸ್ಥಿತರಿದ್ದರು.