ಸಾರಾಂಶ
ಹಿಂದುಳಿದ ವರ್ಗ ಮೋರ್ಚಾದ ಪ್ರಥಮ ಕಾರ್ಯಾಕಾರಣಿ ಸಭೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುರಾಷ್ಟ್ರ ರಾಜಕಾರಣದಲ್ಲಿ ಮೂರು ಬಾರಿ ಮುಖ್ಯಮಂತ್ರಿ ಹಾಗೂ ಎರಡು ಬಾರಿ ಪ್ರಧಾನ ಮಂತ್ರಿ ಹುದ್ದೆ ಅಲಂಕರಿಸಿರುವ ಹಿಂದುಳಿದ ವರ್ಗದ ನಾಯಕ ನರೇಂದ್ರ ಮೋದಿ ನಮಗೆಲ್ಲಾ ಪ್ರೇರಣೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್ ಶೆಟ್ಟಿ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಹಿಂದುಳಿದ ವರ್ಗ ಮೋರ್ಚಾದ ಪ್ರಥಮ ಕಾರ್ಯಾಕಾರಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷದಲ್ಲಿ ನಿಷ್ಟೆ ಹಾಗೂ ಪ್ರಾಮಾಣಿಕತೆ ಯಿಂದ ಕೆಲಸ ನಿರ್ವಹಿಸಿದರೆ ಉನ್ನತ ಜವಾಬ್ದಾರಿಗಳು ಹಂತ ಹಂತವಾಗಿ ಲಭ್ಯವಾಗಲಿದೆ ಎಂದರು.ದೇಶದಲ್ಲಿ ಭ್ರಷ್ಟಮುಕ್ತ ಹಾಗೂ ಪ್ರಾಮಾಣಿಕತೆಯಿಂದ ಆಡಳಿತ ನಡೆಸುತ್ತಿರುವ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸಲು ಕಾರ್ಯಕರ್ತರು ಮುಂದಾಗಬೇಕು. ಜಾತಿ ರಾಜಕಾರಣಕ್ಕೆ ಹೆಚ್ಚು ಒತ್ತು ನೀಡದೇ ದೇಶದ ಭವಿಷ್ಯ ನಿರ್ಧರಿಸುವ ಈ ಚುನಾವಣೆಯಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದರು.
ಜಿಲ್ಲೆಯಾದ್ಯಂತ ಹಲವಾರು ಮಂಡಲಗಳು, ಪ್ರಕೋಷ್ಟಗಳು ಆಯಾ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಒಬಿಸಿ ಮುಖಂಡರಿಗೆ ನೀಡಿರುವ ಜವಾಬ್ದಾರಿಯನ್ನು ಕಾರ್ಯಕರ್ತರು ಅವಧಿ ಪೂರ್ಣದವರೆಗೂ ಹೆಗಲ ಮೇಲೆತ್ತಿಕೊಂಡು ಸಂಘಟನೆಯಲ್ಲಿ ತೊಡಗಬೇಕು. ಮೋದಿ ಆಡಳಿತದಲ್ಲಿ ಪ್ರತಿ ಕಾರ್ಯಕರ್ತರಿಗೂ ಗೌರವವಿದೆ ಎಂದು ತಿಳಿಸಿದರು.ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳ ಮನೆಗಳಿಗೂ ಕರಪತ್ರ ಹಂಚಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಮತದಾರರಿಗೆ ಮನದಟ್ಟು ಮಾಡಬೇಕು. ಬೂತ್‍ಗಳಲ್ಲಿ ಕಾರ್ಯಕರ್ತರು ತಾವೇ ಅಭ್ಯರ್ಥಿ ಎಂದು ಪರಿಗಣಿಸಿ ಶ್ರಮ ವಹಿಸಿ ನರೇಂದ್ರ ಮೋದಿ ಕೈಬಲಪಡಿಸಬೇಕು. ಆಗ ಮಾತ್ರ ದೇಶದಲ್ಲಿ ಸದೃಢ ಸರ್ಕಾರ ರಚನೆಗೊಂಡು ಆಡಳಿತ ನಡೆಸಲು ಸಹಕಾರಿಯಾಗಲಿದೆ ಎಂದರು.
ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಬಿ.ರಾಜಪ್ಪ ಮಾತನಾಡಿ, ದೇಶದ ಪ್ರಧಾನಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ನಾಯಕ ನರೇಂದ್ರ ಮೋದಿ ಹಿಂದುಳಿದ ವರ್ಗಕ್ಕೆ ಸೇರಿದವರು. ಹೀಗಾಗಿ ಕಾರ್ಯಕರ್ತರು ಎಂದಿಗೂ ಧೃತಿ ಗೆಡದೇ ಪಕ್ಷ ಹಾಗೂ ಸಂಘಟನೆಯಲ್ಲಿ ತೊಡಗಿಸಿಕೊಂಡು ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಶ್ರಮವಹಿಸಬೇಕಿದೆ ಎಂದು ಹೇಳಿದರು.ಬಡವರು, ದಲಿತರು ಹಾಗೂ ಹಿಂದುಳಿದ ವರ್ಗದ ಜನಾಂಗಕ್ಕೂ ಆರ್ಥಿಕವಾಗಿ ಪ್ರಗತಿ ಹೊಂದುವ ದೃಷ್ಟಿಯಿಂದ ಅನೇಕ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ದೇಶದಲ್ಲಿ ಮೋದಿಯವರ ಯೋಜನೆಗಳನ್ನು ಉಪಯೋಗಿಸದ ಫಲಾನುಭವಿಗಳಿಲ್ಲ. ಆ ನಿಟ್ಟಿನಲ್ಲಿ ತಮ್ಮ ಕ್ಷೇತ್ರಗಳಲ್ಲಿ ಮುಖಂಡರು ಕೇಂದ್ರದ ಸಾಧನೆ ಹಾಗೂ ಯುಪಿಎ ವೈಫಲ್ಯತೆ ತಿಳಿಸಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಒಬಿಸಿ ಅಧ್ಯಕ್ಷ ಟಿ.ಆರ್.ಲಕ್ಕಪ್ಪ, ಹಿಂದುಳಿದ ಮೋರ್ಚಾದಲ್ಲಿ ಹಲವಾರು ಮುಖಂಡರು ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅಲ್ಲದೇ ದೇಶದ ಪ್ರಧಾನಿ ಹಿಂದುಳಿದ ವರ್ಗದ ವ್ಯಕ್ತಿಯಾಗಿರುವುದು ನಾವೆಲ್ಲರೂ ಹೆಮ್ಮೆಪಡುವ ವಿಷಯ ಎಂದರು.ಒಬಿಸಿ ರಾಜ್ಯ ಕಾರ್ಯದರ್ಶಿ ನಾರಾಯಣ್ ಹಿಂದುಳಿದ ವರ್ಗಗಳ ಅಭಿವೃದ್ಧಿ ಹಾಗೂ ದೇಶ ಮುನ್ನೆಡೆಸುವ ಕುರಿತು ಘಟಕದ ಮುಖಂಡರಿಗೆ ಮಾಹಿತಿ ನೀಡಿದರು. ಇದೇ ವೇಳೆ ನೂತನ ಒಬಿಸಿ ಘಟಕದ ಮುಖಂಡರಿಗೆ ವಿವಿಧ ಹುದ್ದೆ ನೀಡುವ ಮೂಲಕ ಜವಾಬ್ದಾರಿ ವಹಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಣೇನಹಳ್ಳಿ ರಾಜು, ಯೋಗೀಶ್ ಮೂಡಿಗೆರೆ, ನಗರ ಉಪಾಧ್ಯಕ್ಷೆ ಕೋಮಲಾ, ಚಿತ್ರದುರ್ಗ ಪ್ರಭಾರಿ ಸಿ.ಆರ್.ಪ್ರೇಮ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ, ಉಪಾಧ್ಯಕ್ಷ ಕನಕರಾಜ್, ತಾಪಂ ಮಾಜಿ ಅಧ್ಯಕ್ಷ ಜಯಣ್ಣ, ಮುಖಂಡರಾದ ಕೋಟೆ ರಂಗನಾಥ್ ಹಾಜರಿದ್ದರು 13 ಕೆಸಿಕೆಎಂ 3ಚಿಕ್ಕಮಗಳೂರಿನ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ನಡೆದ ಹಿಂದುಳಿದ ವರ್ಗ ಮೋರ್ಚಾದ ಪ್ರಥಮ ಕಾರ್ಯಕಾರಣಿ ಸಭೆಯಲ್ಲಿ ದೇವರಾಜ್ ಶೆಟ್ಟಿ ಮಾತನಾಡಿದರು. ನಾರಾಯಣ್, ರಾಜಪ್ಪ, ಪ್ರೇಮ್‌ಕುಮಾರ್, ರವೀಂದ್ರ ಬೆಳವಾಡಿ ಇದ್ದರು.