ಮುಖ್ಯಮಂತ್ರಿ ಆಗಮನದ ಹಿನ್ನೆಲೆಯಲ್ಲಿ ಪೂರ್ವ ಭಾವಿ ಸಭೆಯಲ್ಲಿ ಉಪ ವಿಭಾಗಾಧಿಕಾರಿ ನಟೇಶ್
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಮುಖ್ಯಮಂತ್ರಿಗಳು ಏ.13 ರಂದು ತಾಲೂಕಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಇಲಾಖೆಗಳಿಗೆ ವಿವಿಧ ಜವಾಬ್ದಾರಿ ಹಂಚಲಾಗಿದ್ದು ಎಲ್ಲಾ ಇಲಾಖಾಧಿಕಾರಿಗಳು ಸಮನ್ವಯ ಸಾಧಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವಂತೆ ಉಪ ವಿಭಾಗಾಧಿಕಾರಿ ನಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶನಿವಾರ ತಾಪಂ ಸಾಮರ್ಥ್ಯಸೌಧದಲ್ಲಿ ಹೊನ್ನೇಕುಡಿಗೆ ಸಂಪರ್ಕ ಸೇತುವೆ ಉದ್ಘಾಟನೆ ಮುಖ್ಯಮಂತ್ರಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಡೆದ ಪೂರ್ವ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಇಲಾಖೆ ಅಧಿಕಾರಿಗಳು ರಜೆ ಹಾಕುವಂತಿಲ್ಲ. ಅಧೀನ ಸಿಬ್ಬಂದಿಗೂ ರಜೆ ನೀಡಬಾರದು. ಸಿಎಂ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖಾಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು. ಈಗಾಗಲೇ ಎಲ್ಲಾ ಇಲಾಖೆಗಳಿಗೆ ಕಾರ್ಯಕ್ರಮದ ವಿವಿಧ ಜವಾಬ್ದಾರಿ ಹಂಚಲಾಗಿದೆ. ಎಲ್ಲರೂ ತಮ್ಮ ತಮ್ಮ ಜವಾಬ್ದಾರಿ ಯಶಸ್ವಿಯಾಗಿ ನಿರ್ವಹಿಸಿ ಎಂದ ಅವರು ವಿಐಪಿ ರೂಂಗಳು ಎಷ್ಟು ಇದೆ ಎಂದು ಮಾಹಿತಿ ನೀಡಬೇಕು ಎಂದರು.ಲೋಕೋಪಯೋಗಿ ಇಲಾಖೆ ಕೊಪ್ಪ ಎಂಜಿನಿಯರ್ ಮಾಹಿತಿ ನೀಡಿ, ಪ್ರವಾಸಿ ಮಂದಿರದಲ್ಲಿ 2 ವಿಐಪಿ ರೂಂ, 2 ಆರ್ಡಿನರಿ ರೂಂ ಹಾಗೂ ವಾಹನ ಚಾಲಕ ಉಳಿಯಲು ಸಿಂಗಲ್ ಬೆಡ್ ರೂಂ ವ್ಯವಸ್ಥೆ ಮಾಡಲಾಗಿದೆ. ಮುಖ್ಯಮಂತ್ರಿ ವಾಸ್ತವ್ಯ ಹೂಡುವ ಕೊಠಡಿಗೆ ಸುಸಜ್ಜಿತ ವ್ಯವಸ್ಥೆ ಮಾಡಲಾಗಿದೆ ಎಂದರು.
ನರಸಿಂಹರಾಜಪುರದ ಗೆಳೆಯರ ಬಳಗ, ಕನ್ಯಾಕುಮಾರಿ ಕಂಫರ್ಟ್ಸ್, ಖಾಂಡ್ಯ ಕ್ಲಬ್, ಭದ್ರಾ ಕ್ಲಬ್ ಸೇರಿ 18 ವಿಐಪಿ ರೂಂಗಳನ್ನು ಕಾಯ್ದಿರಿಸಲಾಗಿದೆ. ಉಳಿದಂತೆ ಆರ್ಡಿನರಿ ರೂಂಗಳನ್ನೂ ಗುರುತಿಸಿ ಬುಕ್ ಮಾಡಲಾಗಿದೆ ಎಂದು ವಿವರಿಸಿದರು. ಎಸಿ ನಟೇಶ್ ಮಾತನಾಡಿ, ಕಾರ್ಯಕ್ರಮ ಜರುಗುವ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಬೇಕು. ಕಾರ್ಯಕ್ರಮದಲ್ಲಿ ಭೋಜನ ವ್ಯವಸ್ಥೆ ಮಾಡಿದ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಕೈ ತೊಳೆಯಲು ಮತ್ತು ಕುಡಿಯುವ ನೀರಿಗೆ ವ್ಯವಸ್ಥೆ ಮಾಡಬೇಕು ಎಂದು ಕುಡಿಯುವ ನೀರಿನ ಎಇಇ ಹಾಗೂ ಪ.ಪಂ. ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.
ತೋಟಗಾರಿಕೆ ಇಲಾಖೆ ಸೇತುವೆ ಬಳಿ, ವೇದಿಕೆ ಮೇಲೆ, ಆಸುಪಾಸಿನಲ್ಲಿ ಪ್ರವಾಸಿ ಮಂದಿರದ ಬಳಿ ಆಕರ್ಷಕ ಹೂವಿನ ಕುಂಡಗಳನ್ನು ಇರಿಸಲು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ತಾಪಂ ಇ.ಓ.ನವೀನ್ ಕುಮಾರ್ ಮಾತನಾಡಿ, ಹಿಂದಿನ ಪೂರ್ವ ಭಾವಿ ಸಭೆಯಲ್ಲಿ ಪ್ರತೀ ಗ್ರಾಪಂನಿಂದ ಕನಿಷ್ಠ 50 ಜನ ಫಲಾನುಭವಿಗಳನ್ನು ಕರೆತರಲು ಸೂಚಿಸಲಾಗಿದೆ. ಅವರನ್ನು ಕರೆತರಲು ಸಾರಿಗೆ ವ್ಯವಸ್ಥೆಗೆ ಸರ್ಕಾರಿ ಬಸ್ಸುಗಳನ್ನು ಒದಗಿಸಿದಲ್ಲಿ ಅನುಕೂಲವಾಗುತ್ತದೆ ಎಂದು ಸಭೆಗೆ ತಿಳಿಸಿದರು.ಎಸಿ ನಟೇಶ್ ಮಾತನಾಡಿ, ಮೂರು ತಾಲೂಕುಗಳ ಬಿಇಒ ತಾಲೂಕಿನಲ್ಲಿ ಲಭ್ಯವಿರುವ ಬಸ್ಸುಗಳ ಪಟ್ಟಿ ಮಾಡಿ, ಕಾರ್ಯಕ್ರಮಕ್ಕೆ ಒದಗಿಸುವಂತೆ ಸಂಬಂಧಪಟ್ಟ ಶಾಲೆ ಮುಖ್ಯಸ್ಥರಿಗೆ ಇಂದೇ ತಿಳಿಸಬೇಕು ಎಂದು ಸೂಚಿಸಿದರು. ಸರ್ಕಾರಿ ಬಸ್ಸುಗಳನ್ನೂ ಒದಗಿಸಲು ಈಗಾಗಲೇ ಜಿಲ್ಲಾ ಮಟ್ಟದ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸರ್ಕಾರಿ ಬಸ್ಸುಗಳನ್ನು ಒದಗಿಸಲಾಗುವುದು. ಸರ್ಕಾರದಿಂದ ಒದಗಿಸಿದ ಸವಲತ್ತುಗಳನ್ನು ಪಡೆದ ಫಲಾನುಭವಿಗಳು ಹಾಗೂ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಸರ್ಕಾರದ ಈ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಆಯಾ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಬೇಕು. ಜನರು ಹಾಗೂ ಫಲಾನುಭವಿಗಳು ಕಾರ್ಯಕ್ರಮಕ್ಕೆ ಬಂದು ಮನೆ ತಲುಪವರೆಗೂ ಸಂಬಂಧಪಟ್ಟ ಇಲಾಖೆಯವರೇ ಜವಾಬ್ದಾರರಾಗಿರುತ್ತಾರೆ. ಯಾವುದೇ ಗೊಂದಲ ಆಗದಂತೆ ನಿರ್ವಹಿಸಲು ಸೂಚಿಸಿದರು.ವಿವಿಧ ಇಲಾಖೆಯಿಂದ ಸರ್ಕಾರದ ಸವಲತ್ತು ಪಡೆದ ಫಲಾನುಭವಿಗಳು ಕಡ್ಡಾಯವಾಗಿ ಸಭೆಗೆ ಹಾಜರಾಗುವಂತೆ ಆಯಾ ಇಲಾಖೆಯವರು ಕ್ರಮವಹಿಸಬೇಕೆಂದು ಒಂದೊಂದು ಇಲಾಖೆಗೆ ಫಲಾನುಭವಿಗಳ ಗುರಿ ನೀಡಲಾಯಿತು. ನಂತರ ತಾಲೂಕಿನ ಎಲ್ಲಾ ಇಲಾಖೆಗಳಿಂದ ಬರುವ ಫಲಾನುಭವಿಗಳ ಅಂಕಿ, ಅಂಶ ಹಾಗೂ ಅವರ ಪಟ್ಟಿಯನ್ನು ಕೃಷಿ ಇಲಾಖೆ ಪಡೆದು ಒಟ್ಟು ಫಲಾನುಭವಿಗಳ ಅಂಕಿ ಅಂಶ ನೀಡಬೇಕು. ಕಾರ್ಯಕ್ರಮದಲ್ಲಿ ಒಂದೊಂದು ಇಲಾಖೆ ಹಾಗೂ ಯೋಜನೆಗಳ ಫಲಾನುಭವಿಗಳಿಗೆ ಪ್ರತ್ಯೇಕ ಬ್ಲಾಕ್ ಮಾಡಿ ಆಸನದ ವ್ಯವಸ್ಥೆ ಮಾಡಲಾಗುವುದೆಂದು ಎಸಿ ನಟೇಶ್ ತಿಳಿಸಿದರು. ವೇದಿಕೆಯಲ್ಲಿ ತರೀಕೆರೆ ಉಪ ವಿಭಾಗಾಧಿಕಾರಿ ನಟೇಶ್, ಎನ್.ಆರ್.ಪುರ ತಾಪಂ ಇ.ಓ. ನವೀನ್ ಕುಮಾರ್, ಕೊಪ್ಪ ಡಿ.ವೈ.ಎಸ್.ಪಿ ಬಾಲಾಜಿ ಸಿಂಗ್, ಎನ್.ಆರ್.ಪುರ ತಹಸೀಲ್ದಾರ್ ಡಾ.ನೂರಲ್ ಹುದಾ, ಕೊಪ್ಪ ತಹಸೀಲ್ದಾರ್ ಲಿಖಿತ ಮೋಹನ್ಸ ಶೃಂಗೇರಿ ತಹಸೀಲ್ದಾರ್ ಅನುಪ್ ಸಂಜೋಗ್ ಇದ್ದರು.