ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಮಾನವನ ಸಂಸ್ಕೃತಿಯ ಬೆಳವಣಿಗೆಯಲ್ಲಿ ರೈತನ ಪಾಲು ಅತ್ಯಧಿಕವಾಗಿದೆ. ರೈತ ನಮ್ಮ ಮನುಕುಲದ ಹಾಗೂ ಜಾಗತಿಕ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದಾನೆ ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಸಿದ್ರಾಮಯ್ಯ ಸ್ವಾಮಿ ನುಡಿದರು.ಕೃಷಿ ವಿಜ್ಞಾನ ಕೇಂದ್ರ, ಬೀದರ್ ಕೃಷಿ ಇಲಾಖೆ ಹಾಗೂ ಬೀದರ್ ತಾಲೂಕು ಕೃಷಿಕ ಸಮಾಜ ಕಾರ್ಯಕಾರಣಿ ಮತ್ತು ಮೈರಾಡ್ ಸಂಸ್ಥೆ ಆಯೋಜಿದ್ದ ರಾಷ್ಟ್ರೀಯ ರೈತ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ರೈತರು ನಮ್ಮ ದೇಶದ ಬೆನ್ನೆಲುಬು ಎಂದು ಕರೆಯಲ್ಪಡುವ ರೈತನನ್ನು ಪ್ರತಿದಿನ ನಾವು ಸ್ಮರಿಸಬೇಕಾಗುತ್ತದೆ. ಇಂದು ರೈತರಿಗೆ ನಾವು ಹೆಚ್ಚಿನ ಗೌರವ ನೀಡಬೇಕಾಗುತ್ತದೆ ಎಂದರು.
ರೈತರನ್ನು ಹಾಗೂ ಅವರ ಕೆಲಸವನ್ನು ಸ್ಮರಿಸುವ ನಿಟ್ಟಿನಲ್ಲಿ ನಮ್ಮ ದೇಶದ 5ನೇ ಪ್ರಧಾನಿ ಚೌದರಿ ಚರಣಸಿಂಗ್ ಅವರ ಜನ್ಮದಿನಾಚರಣೆ ನಿಮಿತ್ತ ರಾಷ್ಟ್ರೀಯ ರೈತ ದಿನಾಚರಣೆ ಆಚರಿಸಲಾಗುತ್ತಿದೆ. ಅವರು ರೈತರ ಶ್ರೇಯೋಭಿವೃದ್ಧಿಗಾಗಿ ಅನೇಕ ಕಾನೂನುಗಳನ್ನು ತಂದು ರೈತರು ಅದರಲ್ಲೂ ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೃಷಿಯಲ್ಲಿ ಸುಧಾರಣೆ ತಂದಿದ್ದಾರೆ. ಮುಂದಿನ ವರ್ಷ ಈ ಕಾರ್ಯಕ್ರಮ ಅದ್ಧೂರಿಯಾಗಿ ಬೀದರ್‌ನ ರಂಗಮಂದಿರದಲ್ಲಿ ಆಚರಿಸುವಂತಾಗಬೇಕೆಂದರು.ನಾಗಯ್ಯ ಸ್ವಾಮಿ ಮಾತನಾಡಿ, ಸಾವಯವ ಕೃಷಿಗೆ ಹೆಚ್ಚಿನ ಮಹತ್ವ ನೀಡಿ, ಜೊತೆಗೆ ಮಣ್ಣು ಪರೀಕ್ಷೆ ಮಾಡುವುದರ ಮೂಲಕ ಕಡಿಮೆ ಖರ್ಚು ಮಾಡಿ ಹೆಚ್ಚಿನ ಆದಾಯ ಗಳಿಸಲು ರೈತರಲ್ಲಿ ಮನವಿ ಮಾಡಿದರು. ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ಎಂಎಕೆ ಅನ್ಸಾರಿ, ಪ್ರಗತಿಪರ ರೈತರಾದ ವೈಜಿನಾಥ ಭುಯ್ಯಾ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಿಲೇನಿಯರ್ ರೈತ ರಾಷ್ಟ್ರ ಪ್ರಶಸ್ತಿ ವಿಜೇತ ಬಸವಕಲ್ಯಾಣ ತಾಲೂಕಿನ ಗೊಗ್ಗ ಗ್ರಾಮದ ನಾಮದೇವ್ ಮೇತ್ರೆ ಅವರನ್ನು ಸನ್ಮಾನಿಸಲಾಯಿತು. ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಸುನಿಲಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.ರೈತರು, ವಿಜ್ಞಾನಿಗಳು ಹಾಗೂ ಕೃಷಿ ಅಧಿಕಾರಿಗಳೊಂದಿಗೆ ಚರ್ಚೆಯನ್ನ ರೈತರ ಹೊಲದಲ್ಲಿಯೇ ಏರ್ಪಡಿಸುವ ವಿನೂತನ ಕಾರ್ಯಕ್ರಮ ರೈತರೊಂದಿಗೆ ನಾವು ಎನ್ನುವ ಶೀರ್ಷಿಕೆಯಡಿ ಪ್ರಾರಂಭಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಸುಮಾರು 80ಕ್ಕೂ ಅಧಿಕ ರೈತ ಬಾಂಧವರು ಜಿಲ್ಲೆಯ ವಿವಿಧೆಡೆಯಿಂದ ಭಾಗವಹಿಸಿದ್ದರು.