ಭಾರಿ ಮಳೆಗೆ ರಾಷ್ಟ್ರೀಯ ಹೆದ್ದಾರಿ ಜಲಾವೃತ

| Published : Jul 11 2024, 01:37 AM IST

ಸಾರಾಂಶ

ಬೆಳಗ್ಗೆ ವೇಳೆ ಮೂರು ತಾಸಿಗೂ ಅಧಿಕ ಕಾಲ ಧಾರಾಕಾರ ಮಳೆಯಾಗಿದ್ದು, ಮಧ್ಯಾಹ್ನದ ಬಳಿಕ ಬಿಡುವು ನೀಡಿತ್ತು. ಬೆಳಗ್ಗೆ ಸುರಿದ ಮಳೆಯಿಂದಾಗಿ ಅರಗಾದಲ್ಲಿ ಇರುವ ನೌಕಾನೆಲೆ ಗೇಟ್ ಎದುರು ಹೆದ್ದಾರಿಯಲ್ಲಿ ಸಂಪೂರ್ಣ ನೀರು ನಿಂತು ನದಿಯಂತಾಗಿತ್ತು.

ಕಾರವಾರ: ತಾಲೂಕಿನಲ್ಲಿ ಬುಧವಾರ ಬೆಳಗ್ಗೆ ವೇಳೆ ಸುರಿದ ಭಾರಿ ಮಳೆಗೆ ಅರಗಾ ನೌಕಾನೆಲೆ ಎದುರು ರಾಷ್ಟ್ರೀಯ ಹೆದ್ದಾರಿ 66 ಜಲಾವೃತವಾಗಿ ವಾಹನಗಳ ಸಂಚಾರಕ್ಕೆ ಸಾಕಷ್ಟು ತೊಂದರೆ ಉಂಟಾಯಿತು.

ಬೆಳಗ್ಗೆ ವೇಳೆ ಮೂರು ತಾಸಿಗೂ ಅಧಿಕ ಕಾಲ ಧಾರಾಕಾರ ಮಳೆಯಾಗಿದ್ದು, ಮಧ್ಯಾಹ್ನದ ಬಳಿಕ ಬಿಡುವು ನೀಡಿತ್ತು. ಬೆಳಗ್ಗೆ ಸುರಿದ ಮಳೆಯಿಂದಾಗಿ ಅರಗಾದಲ್ಲಿ ಇರುವ ನೌಕಾನೆಲೆ ಗೇಟ್ ಎದುರು ಹೆದ್ದಾರಿಯಲ್ಲಿ ಸಂಪೂರ್ಣ ನೀರು ನಿಂತು ನದಿಯಂತಾಗಿತ್ತು. ಇದು ಗೋವಾ- ಕಾರವಾರ-ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಾಗಿದ್ದು, ಗುಡ್ಡಬೆಟ್ಟದಿಂದ ಹರಿದು ಬಂದ ಮಳೆಯ ನೀರು ಸರಾಗವಾಗಿ ಸಮುದ್ರ ಸೇರಲು ವ್ಯವಸ್ಥೆ ಇಲ್ಲದೇ ರಸ್ತೆಯಲ್ಲೇ ಶೇಖರಣೆಗೊಂಡಿತ್ತು. ಪರಿಣಾಮ ಅರ್ಧ ದಿನ ಸಂಚಾರ ಅಸ್ತವ್ಯಸ್ತವಾಗಿತ್ತು.

ಜಿಲ್ಲೆಯ ಉಳಿದ ತಾಲೂಕಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಭಟ್ಕಳದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದು, ಆಗಾಗ ರಭಸದಿಂದ ಸುರಿದಿದ್ದು, ಜಲಾವೃತ ಪ್ರದೇಶಗಳಲ್ಲಿ ನೀರು ಇಳಿಮುಖವಾಗುತ್ತಿದೆ. ಹೊನ್ನಾವರ, ಕುಮಟಾ ಭಾಗದಲ್ಲೂ ಮಳೆರಾಯ ತುಸು ಬಿಡುವು ನೀಡಿದ್ದಾನೆ. ಘಟ್ಟದ ಮೇಲಿನ ತಾಲೂಕಿನ ಬಹುತೇಕ ಕಡೆ ಬಿಸಿಲ ವಾತಾವರಣ ಮೂಡಿದೆ. ಜೋಯಿಡಾದಲ್ಲಿ ಬೆಳಗ್ಗೆ ಉತ್ತಮ ಮಳೆಯಾಗಿದ್ದು, ಮಧ್ಯಾಹ್ನದ ನಂತರ ಕಡಿಮೆಯಾಗಿದೆ. ಶಿರಸಿ ತಾಲೂಕಿನ ಪೂರ್ವಭಾಗದಲ್ಲಿ ಬೆಳಗ್ಗೆ ಬಿಸಿಲು ಮೂಡಿತ್ತು. ಮಧ್ಯಾಹ್ನ ಏಕಾಏಕಿ ಮೋಡ ಕವಿದು ಕೆಲಹೊತ್ತು ಮಳೆಯಾಗಿದ್ದು, ಬಳಿಕ ಬಿಡುವು ನೀಡಿತ್ತು. ಉಳಿದೆಡೆ ಸಾಧಾರಣ ಮಳೆಯಾಗಿದೆ. ಕಾಳಜಿ ಕೇಂದ್ರಗಳಿಂದ ಮನೆಗಳಿಗೆ ತೆರಳಿದ ಸಂತ್ರಸ್ತರು

ಹೊನ್ನಾವರ ತಾಲೂಕಿನ 3 ಮತ್ತು ಕುಮಟಾದ 2 ಸೇರಿದಂತೆ ಒಟ್ಟೂ 5 ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದ ಎಲ್ಲ ಸಂತ್ರಸ್ತರು ತಮ್ಮ ಮನೆಗಳಿಗೆ ತೆರಳಿದ್ದಾರೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. ತಿಳಿಸಿದ್ದಾರೆ.ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ್ದು, ಕಳೆದ 24 ಗಂಟೆಗಳಲ್ಲಿ 2 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಜೂ. 1ರಿಂದ ಇದುವರೆಗೆ ಮಳೆಯಿಂದಾಗಿ 1ಜೀವಹಾನಿ, 8 ಮನೆಗಳು ಸಂಪೂರ್ಣ ಹಾನಿ, 18 ಮನೆಗಳು ತೀವ್ರ ಹಾನಿ, 119 ಮನೆಗಳಿಗೆ ಭಾಗಶಃ ಹಾನಿ ಹಾಗೂ 2 ಜಾನುವಾರು ಸಾವು ಸಂಭವಿಸಿದೆ. 830 ಮನೆಗಳು ನೀರಿನಿಂದ ಜಲಾವೃತವಾಗಿದೆ. 809 ಜನರಿಗೆ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ನೀಡಿ, ವೈದ್ಯಕೀಯ ನೆರವು ಮತ್ತು ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ವಿವರಿಸಿದ್ದಾರೆ.