ಸಾರಾಂಶ
ಬಿದರೆಗುಡಿ ಹಾಗೂ ಅಕ್ಕಪಕ್ಕ ಗ್ರಾಮಗಳಾದ ಕರೀಕೆರೆ, ಭೈರಾಪುರ ಮತ್ತಿತರ ಗ್ರಾಮಗಳಿಗೆ ಸಾರ್ವಜನಿಕರು ಪ್ರಯಾಣಿಸಲು ಸರ್ವಿಸ್ ರಸ್ತೆಯಿಲ್ಲದ ಕಾರಣ, ಸುಮಾರು ೨೦೦-೩೦೦ ಮನೆಗಳಿಗೆ ಸಮಸ್ಯೆಯಾಗಿದೆ. ಅಲ್ಲದೇ ಹೊಲ- ತೋಟಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ.
ತಿಪಟೂರು: ಬೆಂಗಳೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 206 ಕಾಮಗಾರಿಯು ಬಿದರೆಗುಡಿಯ ಗ್ರಾಮದಲ್ಲಿ ನಡೆಯುತ್ತಿದ್ದು, ಅಲ್ಲಿನ ಅಕ್ಕ ಪಕ್ಕ ಗ್ರಾಮಗಳಿಗೆ ಸರ್ವಿಸ್ ರಸ್ತೆ ನೀಡದೇ ಕಾಮಗಾರಿ ಮಾಡುತ್ತಿದ್ದ ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗಿದ್ದು, ಸರ್ವಿಸ್ ರಸ್ತೆ ನೀಡುವಂತೆ ಸಾರ್ವಜನಿಕರು ಹಾಗೂ ಗ್ರಾಮಸ್ಥರು ಉಪವಿಭಾಗಾಧಿಕಾರಿ ಬಿ.ಕೆ. ಸಪ್ತಶ್ರೀಗೆ ಮನವಿ ಪತ್ರ ಸಲ್ಲಿಸಿದರು.
ಗ್ರಾಮಸ್ಥರು ಮಾತನಾಡಿ, ಬಿದರೆಗುಡಿ ಹಾಗೂ ಅಕ್ಕಪಕ್ಕ ಗ್ರಾಮಗಳಾದ ಕರೀಕೆರೆ, ಭೈರಾಪುರ ಮತ್ತಿತರ ಗ್ರಾಮಗಳಿಗೆ ಸಾರ್ವಜನಿಕರು ಪ್ರಯಾಣಿಸಲು ಸರ್ವಿಸ್ ರಸ್ತೆಯಿಲ್ಲದ ಕಾರಣ, ಸುಮಾರು ೨೦೦-೩೦೦ ಮನೆಗಳಿಗೆ ಸಮಸ್ಯೆಯಾಗಿದೆ. ಅಲ್ಲದೇ ಹೊಲ- ತೋಟಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಬಿದರೆಗುಡಿಯಲ್ಲಿ ಮೇಲ್ಸೇತುವೆ ನಿರ್ಮಾಣವು ಅವೈಜ್ಞಾನಿಕವಾಗಿ ಕೂಡಿದ್ದು, ಪ್ರತಿನಿತ್ಯ ವಾಹನಗಳ ಅಪಘಾತಗಳು ನಡೆಯುತ್ತಿವೆ. ಈಗಾಗಲೇ ಕಾಮಗಾರಿಯು ಮುಗಿಯುವ ಹಂತಕ್ಕೆ ಬಂದಿದ್ದರೂ ಸಹ ಸರ್ವಿಸ್ ರಸ್ತೆ ನೀಡದೇ ಸಾರ್ವಜನಿಕರಿಗೆ ಬಹಳ ತೊಂದರೆಯಾಗಿದೆ. ಸರ್ವಿಸ್ ರಸ್ತೆಯಿಲ್ಲದ ಕಾರಣ ಪ್ರಯಾಣಿಕರು ಏಕಮುಖ ಸಂಚಾರಕ್ಕೆ ಅನುವು ಮಾಡಿರುವುದರಿಂದ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿದ್ದು, ಕೂಡಲೇ ಕ್ರಮಕೈಗೊಂಡು ಸರ್ವಿಸ್ ರಸ್ತೆಗೆ ವ್ಯವಸ್ಥೆ ಕಲ್ಪಿಸಬೇಕೆಂದು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.ಮನವಿ ಸ್ವೀಕರಿಸಿ ಉಪವಿಭಾಗಾಧಿಕಾರಿ ಬಿ.ಕೆ. ಸಪ್ತಶ್ರೀ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮಕ್ಕೆ ತಿಳಿಸಲಾಗುವುದು ಹಾಗೂ ಸ್ಥಳ ಪರೀಶೀಲನೆ ಮಾಡಲಾಗುವುದು ಎಂದರು.
ಶಿವಶಂಕರ್ ಸಿದ್ದಾಪುರ, ದಿನೇಶ್ ಬಿದರೆಗುಡಿ, ಲಿಂಗರಾಜು ಮತ್ತಿಹಳ್ಳಿ, ಶೇಖರಪ್ಪ ಮತ್ತಿತ್ತರಿದ್ದರು.