14ರಂದು ಜಿಲ್ಲೆ ಕೋರ್ಟ್‌ಗಳಲ್ಲಿ ರಾಷ್ಟ್ರೀಯ ಲೋಕ್‌ ಅದಾಲತ್‌

| Published : Dec 03 2024, 12:30 AM IST

ಸಾರಾಂಶ

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶನದಂತೆ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಡಿ.14ರಂದು ರಾಷ್ಟ್ರೀಯ ಲೋಕ್‌ ಅದಾಲತ್‌ ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಹೇಳಿದ್ದಾರೆ.

- ಕಡಿಮೆ ಖರ್ಚಿನಲ್ಲಿ ಶೀಘ್ರ ನ್ಯಾಯದಾನ ಉದ್ದೇಶ: ನ್ಯಾ. ರಾಜೇಶ್ವರಿ ಹೆಗಡೆ ಮಾಹಿತಿ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶನದಂತೆ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಡಿ.14ರಂದು ರಾಷ್ಟ್ರೀಯ ಲೋಕ್‌ ಅದಾಲತ್‌ ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಜಿಲ್ಲೆಯ ಎಲ್ಲ ನ್ಯಾಯಾಲಯಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಲೋಕ್‌ ಅದಾಲತ್‌ ಆಯೋಜಿಸಲಿವೆ ಎಂದರು.

ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿರುವ ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳನ್ನು ಕಡಿಮೆ ಖರ್ಚಿನಲ್ಲಿ ಶೀಘ್ರವಾಗಿ ಪರಿಹರಿಸಿಕೊಳ್ಳಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ರಾಜಿ ಆಗಬಲ್ಲ ಎಲ್ಲ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣ, ಚೆಕ್ ಅಮಾನ್ಯ ಪ್ರಕರಣ, ಭೂ ಸ್ವಾಧೀನ ಪರಿಹಾರ ಪ್ರಕರಣ, ಬ್ಯಾಂಕ್‌ ಸಾಲ ವಸೂಲಾತಿ ಪ್ರಕರಣ, ಎಂಎಂಆರ್‌ಡಿ ಕಾಯ್ದೆಯಡಿ ಪ್ರಕರಣಗಳನ್ನು ಲೋಕ್ ಅದಾಲತ್‌ನಲ್ಲಿ ಪರಿಹರಿಸಿಕೊಳ್ಳಲು ಅವಕಾಶ ಇದೆ ಎಂದು ತಿಳಿಸಿದರು.

ಕೌಟುಂಬಿಕ ನ್ಯಾಯಾಲಯದ ಪ್ರಕರಣ (ವಿಚ್ಛೇದನ ಹೊರತುಪಡಿಸಿ)ಗಳು, ಪಿಂಚಣಿ ಪ್ರಕರಣ, ವೇತನ ಭತ್ಯೆಗೆ ಸಂಬಂಧಿಸಿದ ಪ್ರಕರಣ, ವಿದ್ಯುತ್ ಹಾಗೂ ನೀರಿನ ಶುಲ್ಕ, ಕೈಗಾರಿಕೆ ಕಾರ್ಮಿಕರ ವೇತನ, ಕಾರ್ಮಿಕ ವಿವಾಹ ಇತ್ಯಾದಿ ಪ್ರಕರಣಗಳನ್ನು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದು. ರಾಜಿ ಬಗ್ಗೆ ಅನುಕೂಲವಾಗಲಿ ಎಂಬುದಾಗಿ ರಾಜಿಪೂರ್ವ ಸಮಾಲೋಚನೆ ಸಹ ಆಯೋಜಿಸಲಾಗಿದೆ. ಸಾರ್ವಜನಿಕರು ರಾಷ್ಟ್ರೀಯ ಲೋಕ್ ಅದಾಲತ್‌ ಸಂಪೂರ್ಣ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.

ಲೋಕ್ ಅದಾಲದ್ ಬಗ್ಗೆ ಹೆಚ್ಚಿನ ಮಾಹಿತಿಗೆ ದಾವಣಗೆರೆ ಹಳೇ ನ್ಯಾಯಾಲಯಗಳ ಸಂಕೀರ್ಣದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ದಾವಣಗೆರೆ (ದೂ-08192 -296364), ತಾಲೂಕು ಕಾನೂನು ಸೇವಾ ಸಮಿತಿಗಳಾದ ಹರಿಹರ (08192- 296885), ಹೊನ್ನಾಳಿ (08188- 251732), ಚನ್ನಗಿರಿ (08189- 229195), ಜಗಳೂರು (08196- 227600) ಈ ಸಂಖ್ಯೆಗಳಿಗೆ ಸಂಪರ್ಕಿಸುವಂತೆ ನ್ಯಾಯಾಧೀಶರು ತಿಳಿಸಿದರು.

ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ, ನ್ಯಾಯಾಧೀಶೆ ಟಿ.ಎಂ.ನಿವೇದಿತಾ, ಜಿಲ್ಲಾ ವಕೀಲರ ಸಂಘದ ಜೆ.ಕೆ.ಬಸವರಾಜ, ಮಂಜುನಾಥ, ಬಸವರಾಜ ಇತರರು ಇದ್ದರು.

- - - -2ಕೆಡಿವಿಜಿ5, 6:

ದಾವಣಗೆರೆ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಲೋಕ್‌ ಅದಾಲತ್‌ ಕಾರ್ಯಕ್ರಮ ಕುರಿತು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.