ಸೇವಾ ಚಟುವಟಿಕೆ ನಮ್ಮ ಜೀವನದ ಅವಿಭಾಜ್ಯ ಭಾಗ ಹಾಗೂ ಸ್ವಭಾವವಾಗಬೇಕು.
ಕನ್ನಡಪ್ರಭ ವಾರ್ತೆ ರಾವಂದೂರು
ಸೇವೆ ಎನ್ನುವ ಪದ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಅತ್ಯಂತ ಮಹತ್ವವನ್ನು ಪಡೆದಿದೆ ಎಂದು ಇಲ್ಲಿನ ಮುರುಘಾ ಮಠದ ಮೋಕ್ಷ ಪತಿ ಸ್ವಾಮೀಜಿ ತಿಳಿಸಿದರು.ಗ್ರಾಮದ ಶ್ರೀ ಸಿದ್ದಣ್ಣ ಶೆಟ್ಟರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವತಿಯಿಂದ ಹಂಡಿತವಳ್ಳಿ ಆಯೋಜಿಸಿದ್ದ ಎನ್ಎಸ್ಎಸ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮಲ್ಲಿರುವ ಶ್ರಮ, ವಿದ್ಯೆ, ಬುದ್ಧಿ, ಜ್ಞಾನ, ಕೌಶಲ್ಯ, ಆರ್ಥಿಕ ಸೌಲಭ್ಯ ಇತ್ಯಾದಿಗಳನ್ನು ಸಮಾಜದ, ದೇಶದ ಒಳಿತಿಗಾಗಿ ಫಲಾಪೇಕ್ಷೆ ಇಲ್ಲದೆ ಅರ್ಪಣಾಮನೋಭಾವದಿಂದ ನೀಡುವ ಸಹಾಯವೇ ಸೇವೆ. ಸೇವಾ ಚಟುವಟಿಕೆ ನಮ್ಮ ಜೀವನದ ಅವಿಭಾಜ್ಯ ಭಾಗ ಹಾಗೂ ಸ್ವಭಾವವಾಗಬೇಕು.ರಾಷ್ಟ್ರದ ಅನೇಕ ಕಾಲೇಜಿನ ಸಾವಿರಾರು ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಈಗಾಗಲೇ ಸ್ವಯಂಸೇವಕರಾಗಿ ದೈನಂದಿನ ಮತ್ತು ವಿಶೇಷ ಶಿಬಿರಗಳಲ್ಲಿ ಪಾಲ್ಗೊಂಡು ತಮ್ಮ ಸೇವೆಯನ್ನು ಧಾರೆ ಎರೆಯುತ್ತಿದ್ದಾರೆ ಎಂದರು.
ಮಾಜಿ ಶಾಸಕ ಕೆ, ಮಹಾದೇವ್ ಮಾತನಾಡಿ, ಇಂದು ನಮ್ಮ ಸಮಾಜ ರಾಜಕೀಯ ಸಮಸ್ಯೆಗಳಿಗಿಂತ ಹೆಚ್ಚಾಗಿ ಸಾಮಾಜಿಕ ಸಮಸ್ಯೆಗಳಿಂದ ನಲುಗುತ್ತಿದೆ. ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಕಾನೂನು, ಸಂವಿಧಾನ, ನ್ಯಾಯಾಂಗ, ಕಾರ್ಯಾಂಗದಂತಹ ಉಪಾಯಗಳಿಗಿಂತ ಗಾಂಧಿ ಹೇಳಿದಂತಹ ರಚನಾತ್ಮಕ ಕಾರ್ಯಗಳನ್ನು ದೇಶದ ಏಳು ಲಕ್ಷ ಹಳ್ಳಿಗಳಲ್ಲೂ ಏಕಕಾಲಕ್ಕೆ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು.ಪ್ರಾಂಶುಪಾಲ ಕೋಟೆ ವೆಂಕಟೇಶ್ ಮಾತನಾಡಿ, ಈಗಾಗಲೇ ನಾಲ್ಕೂವರೆ ದಶಕಗಳನ್ನು ದಾಟಿರುವ ಯೋಜನೆಯು, ದೇಶದಾದ್ಯಂತ ಸಾವಿರಾರು ಸ್ವಯಂ ಸೇವಕರು ಸಮಾಜೋದ್ಧಾರಕ ಕಾರ್ಯಕ್ರಮಗಳನ್ನು ನಡೆಸಿದ್ದಾರೆ ಎಂದು ಹೇಳಿದರು.
ಕಿತ್ತೂರು ಕಾಲೇಜಿನ ಪ್ರಾಂಶುಪಾಲ ಜವರೇಗೌಡ ಮಾತನಾಡಿದರು.ಶಿಬಿರದಲ್ಲಿ ಉತ್ತಮ ಸ್ವಯಂಸೇವಕರಾಗಿ ಮಹಾದೇವ್ ಹರ್ಷಿತ ವಿದ್ಯಾರ್ಥಿಗಳನ್ನು ಹಾಗೂ ಸಹಕಾರ ನೀಡಿದ ಗ್ರಾಮಸ್ಥರನ್ನು ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಅಭಿನಂದಿಸಲಾಯಿತು. ಗ್ರಾಪಂ ಮಾಜಿ ಸದಸ್ಯರಾದ ರಾಮಚಂದ್ರ, ಸದಸ್ಯರಾದ ಮಲ್ಲೇಶ್, ಎಚ್.ಆರ್. ದೀಪು, ನಿವೃತ್ತ ಉಪನ್ಯಾಸಕ ಆರ್.ಎಸ್. ದೊಡ್ಡಣ್ಣ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನಾಗರಾಜ್, ಶಂಕರ್, ಉಪನ್ಯಾಸಕರಾದ ಲಕ್ಷ್ಮಿಕಾಂತ್ , ಗಣೇಶ್, ಶಶಿಕಿರಣ್, ಮನೋಜ್, ಪ್ರಮೋದ್, ವಸಂತ, ಶ್ವೇತ, ಸೌಮ್ಯ, ಭಾಗ್ಯ, ನೇತ್ರಾವತಿ, ಪುಟ್ಟಸ್ವಾಮಿಶೆಟ್ಟಿ, ಯೋಜನಾಧಿಕಾರಿ ಸುಭಾಷ್, ಮುಖ್ಯೋಪಾಧ್ಯಾಯ ಕಾಂತಚಾರಿ, ಗ್ರಾಮಸ್ಥರು, ವಿದ್ಯಾರ್ಥಿಗಳು ಇದ್ದರು.