ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಒಂದು ರಾಷ್ಟ್ರ ಒಂದು ಸಂಸ್ಕೃತಿ, ಒಂದೇ ಜನ ಎಂಬ ಆಶಯದೊಂದಿಗೆ ವೈವಿದ್ಯತೆಯಲ್ಲಿ ಏಕತೆಯನ್ನು ಮೂಡಿಸುವ ಎಬಿವಿಪಿಯ ರಾಷ್ಟ್ರೀಯ ಏಕಾತ್ಮಕ ಯಾತ್ರೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಧಾರವಾಡ ಐಐಐಟಿಯ ನಿರ್ದೇಶಕ ಮಹಾದೇವ ಪ್ರಸನ್ನ ಹೇಳಿದರು.ವಿದ್ಯಾಗಿರಿಯಲ್ಲಿರುವ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಸಭಾಭವನದಲ್ಲಿ ನಡೆದ ಎಬಿವಿಪಿಯ ಸ್ಟೂಡೆಂಟ್ ಎಕ್ಸಪಿರಿಯನ್ಸ್ ಇನ್ ಇಂಟರ್ ಸ್ಟೇಟ್ ಲಿವಿಂಗ್ -2025ರ ರಾಷ್ಟ್ರೀಯ ಏಕಾತ್ಮಕ ಯಾತ್ರೆಯ ಅಭಿನಂಧನಾ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಅಭಿನಂಧಿಸಿ ಮಾತನಾಡಿದರು.
ಈಶಾನ್ಯ ರಾಜ್ಯಗಳಲ್ಲೂ ಬುದ್ದಿವಂತರಿದ್ದಾರೆ. ಸುಮಾರು 5-6 ತಲೆಮಾರು ಪೂರ್ವಜರ ಹೆಸರನ್ನು ಯಾವುದೇ ಬರವಣಿಗೆ ಇಲ್ಲದೆ ಹೇಳಬಲ್ಲರು. ಎಬಿವಿಪಿ ರಾಷ್ಟ್ರೀಯ ಏಕಾತ್ಮಕ ಯಾತ್ರೆಗಳ ಮೂಲಕ ನಾವೆಲ್ಲರೂ ಒಂದು, ನಮ್ಮೆಲ್ಲರ ಸಂಸ್ಕೃತಿ ಒಂದೇ ಎಂಬ ಭಾವನೆಯೊಂದಿಗೆ ಎಲ್ಲರನ್ನೂ ಒಗ್ಗೂಡಿಸುವ ಕಾರ್ಯ ಮೆಚ್ಚುವಂತದ್ದು ಎಂದು ಹೇಳಿದರು.ಮೇಘಾಲಯ ಹಾಗೂ ನಾಗಾಲ್ಯಾಂಡ್ ಉಸ್ತುವಾರಿ ಮತ್ತು ಮಿಜೋರಾಂ ರಾಜ್ಯ ಸಂಘಟನಾ ಕಾರ್ಯದರ್ಶಿ ಮಂಜುನಾಥ ಮಂಗಲಗಿ ಮಾತನಾಡಿ, ಈ ಸೀಲ್ ಯಾತ್ರೆ ಈಶಾನ್ಯ ರಾಜ್ಯಗಳಿಗೆ ಹೊಸ ಹುಮ್ಮಸ್ಸು ಕೊಟ್ಟಿದೆ ಎಂದು ಹೇಳಿದರು.
ಮಾಜಿ ಶಾಸಕ ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಮಾತನಾಡಿ, ಈಶಾನ್ಯ ರಾಜ್ಯಗಳ ಮುಖ್ಯವಾಹಿನಿಗೆ ತರುವ ಪ್ರಯುತ್ನವನ್ನು ರಾಷ್ಟ್ರೀಯ ಏಕಾತ್ಮಕ ಯಾತ್ರೆ ಮಾಡುತ್ತಿದೆ. ಮೋದಿಯವರು ಪ್ರಧಾನಿಯಾದ ನಂತರ ಈಶಾನ್ಯ ರಾಜ್ಯಗಳಿಗೆ ಪ್ರತ್ಯೇಕ ಮಂತ್ರಾಲಯ ಸ್ಥಾಪಿಸಿದ್ದು, ಅವರ ಶ್ರೇಯೋಭಿವೃದ್ಧಿಗೆ ಅನೇಕ ಯೋಜನೆ ರೂಪಿಸಿದ್ದಾರೆ.ರಾಷ್ಟ್ರೀಯ ಏಕಾತ್ಮಕ ಯಾತ್ರೆಯಲ್ಲಿ ಬಾಗಲಕೋಟೆಗೆ ಆಗಮಿಸಿದ 7 ರಾಜ್ಯಗಳ 28 ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅಭಿನಂದಿಸಲಾಯಿತು. ಈ ವೇಳೆ ಯಾತ್ರೆಯಲ್ಲಿ ಆಗಮಿಸಿ ವಿದ್ಯಾರ್ಥಿಗಳು ಹಾಗೂ ಆತಿಥ್ಯ ನೀಡಿದವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ನಗರಸಭೆ ಅಧ್ಯಕ್ಷೆ ಸವಿತಾ ಲಂಕೆನ್ನವರ, ಡಾ.ಅನಂದ ಹೊಸೂರ, ಸಚಿನ ಕುಳಗೇರಿ, ಅಕ್ಷಯ ರಾಜುರಕರ, ಸ್ವಾಗತ ಸಮಿತಿ ಅಧ್ಯಕ್ಷ ಸಿ.ಎಸ್. ಪಾಟೀಲ, ತಂಡದ ಪ್ರತಿನಿಧಿಗಳಾದ ದಿಸ್ಕೆಮ್ಲಂಗ್ ಲಂಡಬಂಗ್ (ಮೇಘಾಲಯ), ರೆಕಂಗಪುಯಿ (ಮಿಜೋರಂ) ವೇದಿಕೆ ಮೇಲಿದ್ದರು, ನಗರಸಭೆ ಉಪಾಧ್ಯಕ್ಷೆ ಶೋಭಾ ರಾವ, ವಿ.ಪಿ. ಗಿರಿಸಾಗರ, ಭಾಸ್ಕರ ಮನಗೂಳಿ ಇತರರು ಉಪಸ್ಥಿತರಿದ್ದರು. ಡಾ.ಬಸವರಾಜ ಕುಂಬಾರ ಸ್ವಾಗತಿಸಿ ಪರಿಚಯಿಸಿದರು. ಬಳಿಕ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಸಾಂಸ್ಕೃತಿಕ ನೃತ್ಯ ನೆರೆದ ಜನರ ಮನ ತಣಿಸಿತು.ನಮ್ಮ ಸಂಘದಿಂದ ಈಶಾನ್ಯ ರಾಜ್ಯಗಳ 50 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಕಾರ್ಯವನ್ನು ಹಿಂದೆ ಮಾಡಿದ್ದೇವು. ಅವರಿಗೆ ಇಲ್ಲಿನ ವಾತಾವಾರಣ ಅನಾನುಕೂಲವಾದ ಕಾರಣ ತಮ್ಮ ರಾಜ್ಯಕ್ಕೆ ಮರಳಿದರು. ದೇಶದ ಎಲ್ಲ ರಾಜ್ಯಗಳ ಸರ್ವತೋಮುಖ ಅಭಿವೃದ್ಧಿ ಹೊಂದಿ ಸಮೃದ್ಧ ಭಾರತ ನಿರ್ಮಾಣವಾಗಲಿ.
- ಡಾ.ವೀರಣ್ಣ ಚರಂತಿಮಠ, ಕಾರ್ಯಾಧ್ಯಕ್ಷರು, ಬವಿವಿ ಸಂಘ