- ಕಾರ್ಮಿಕರಿಗೆ ಮಾರಕವಾದ ನಾಲ್ಕೂ ಕಾರ್ಮಿಕ ಮಸೂದೆ, ಭೂ ಕಬಳಿಕೆಯ ರೈತವಿರೋಧಿ ಕಾಯ್ದೆ ರಾಜ್ಯ ಸರ್ಕಾರ ಕೈಬಿಡಲಿ: ಮುಖಂಡರ ಒತ್ತಾಯ- - -
ಕನ್ನಡಪ್ರಭ ವಾರ್ತೆ ದಾವಣಗೆರೆಕಾರ್ಮಿಕರಿಗೆ ಮಾರಕವಾದ ನಾಲ್ಕೂ ಕಾರ್ಮಿಕ ಕೋಡ್‌ಗಳನ್ನು ಹಿಂಪಡೆಯಲು ಒತ್ತಾಯಿಸಿ ಫೆ.12ರಂದು ಹಮ್ಮಿಕೊಂಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ, ಸ್ವಯಂಪ್ರೇರಿತ ಬಂದ್ ಹಿನ್ನೆಲೆ ರೈತ, ಕಾರ್ಮಿಕ, ಕೃಷಿ ಕೂಲಿಕಾರರು, ಮಹಿಳಾ, ವಿದ್ಯಾರ್ಥಿ, ಯುವಜನರು, ದಲಿತ ಹಾಗೂ ಕನ್ನಡಪರ ಸಂಘಟನೆಗಳಿಂದ ನಗರದಲ್ಲಿ ಮಂಗಳವಾರ ಬೈಕ್ ರ್ಯಾಲಿ ನಡೆಸಲಾಯಿತು.
ನಗರದ ಶ್ರೀ ಜಯದೇವ ವೃತ್ತದಲ್ಲಿ ರೈತ-ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಆರಂಭವಾದ ಬೈಕ್ ರ್ಯಾಲಿಯು ಹದಡಿ ರಸ್ತೆ, ವರ್ತುಲ ರಸ್ತೆ, ನಿಟುವಳ್ಳಿ ದುರ್ಗಾಂಬಿಕಾ ದೇವಿ ರಸ್ತೆ, ಎಚ್‌ಕೆಆರ್ ವೃತ್ತ, ಕೆಟಿಜೆ ನಗರ ರಸ್ತೆ, ಭಗತ್ ಸಿಂಗ್ ನಗರ, ಕೆಎಸ್ಸಾರ್ಟಿಸಿ ಹಿಂಭಾಗದ ರಸ್ತೆ, ಎಪಿಎಂಸಿ ಮೇಲ್ಸೇತುವೆ, ಬಂಬೂ ಬಜಾರ್, ಅರಳಿ ಮರ ವೃತ್ತ, ಹಗೇದಿಬ್ಬ ವೃತ್ತ, ಕಾಳಿಕಾ ದೇವಿ ರಸ್ತೆ, ವೀರ ಮದಕರಿ ನಾಯಕ ವೃತ್ತ, ಬಾರ್ ಲೈನ್ ರಸ್ತೆ, ಹಳೇ ಪಿ.ಬಿ. ರಸ್ತೆ, ವಿನೋಬ ನಗರ, ಹರಳೆಣ್ಣೆ ಕೊಟ್ರ ಬಸಪ್ಪ ವೃತ್ತ ಇತರೆಡೆ ಸಾಗಿತು.ಇದಕ್ಕೂ ಮುನ್ನ ಹಿರಿಯ ಕಾರ್ಮಿಕ ಮುಖಂಡ ಆವರಗೆರೆ ಎಚ್.ಜಿ.ಉಮೇಶ ಬಹಿರಂಗ ಸಭೆಯಲ್ಲಿ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಂಪತ್ತನ್ನು ಸೃಷ್ಟಿಸುವ ಕಾರ್ಮಿಕರನ್ನು ಸಂಪೂರ್ಣ ಗುಲಾಮರನ್ನಾಗಿಸಲು 29 ಕಾರ್ಮಿಕ ಕಾನೂನನ್ನು ರದ್ದುಗೊಳಿಸಿ, 4 ಕಾರ್ಮಿಕ ಸಂಹಿತೆಗಳಾಗಿ 21.11.2025 ರಂದು ಅಂತಿಮ ಪ್ರಕಟಣೆ ಹೊರಡಿಸಿದೆ. ಈ ಸಂಹಿತೆಗಳು 2019, 2020 ರಲ್ಲಿ ಲೋಕಸಭೆಯಲ್ಲಿ ಪಾಸಾಗಿದ್ದರೂ, ದೇಶದ ಕಾರ್ಮಿಕ ವರ್ಗ, ನಡೆಸಿದ 5 ಮುಷ್ಕರ ರೈತರ ಮತ್ತು ಇತರೆ ಪ್ರಜಾಸತ್ತಾತ್ಮಕ ಚಳವಳಿಗಳು ಜಾರಿ ಮಾಡಲು ಬಿಟ್ಟಿರಲಿಲ್ಲ ಎಂದರು.
ಕಾರ್ಪೊರೇಟ್ ಕಂಪನಿ ಮತ್ತು ಬಂಡವಾಳಗಾರರ ಪರ ಕೇಂದ್ರ ಸರ್ಕಾರ ತನ್ನ ಆದ್ಯತೆ ನೀಡುತ್ತಿದೆ. ಪರಿಣಾಮ ಸಾರ್ವಜನಿಕ ಸ್ವತ್ತನ್ನು ಪಿಪಿಪಿ ಮಾದರಿ, ರಾಷ್ಟ್ರೀಯ ಹಣ ಗಳಿಕೆ ಎನ್‌ಎಂಪಿ ಮೂಲಕ ವಿದ್ಯುತ್, ದೂರ ಸಂಪರ್ಕ, ಕಲ್ಲಿದ್ದಲು ಗಣಿಗಾರಿಕೆ, ರೈಲ್ವೆ, ಹೆದ್ದಾರಿ, ಬಂದರು, ಹಡಗು ಕಟ್ಟೆ, ನಗರಾಭಿವೃದ್ಧಿ, ತೈಲ ಮುಂತಾದವನ್ನು ಖಾಸಗಿ ಕಾರ್ಪೊರೇಟ್ ಕಂಪನಿಗಳಿಗೆ ವರ್ಗಾಯಿಸಲಾಗಿದೆ. 2026-30ರ ತನಕ ₹10 ಲಕ್ಷ ಕೋಟಿ ಗಳಿಕೆಗಾಗಿ ಎನ್.ಎಂ.ಪಿ.ಯನ್ನು ನವೀಕರಿಸಲಾಗಿದೆ ಎಂದು ದೂರಿದರು.
ಕೆ.ರಾಘವೇಂದ್ರ ನಾಯರಿ ಮಾತನಾಡಿ, ಕೃಷಿಯನ್ನು ಕಾರ್ಪೊರೇಟೀಕರಣಗೊಳಿಸಲು ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರುವ ಮುಖಾಂತರ ಭೂಮಿ ಕಸಿದುಕೊಂಡು ಶೇ.70 ಉದ್ಯೋಗಸ್ಥರಾದ ಕೃಷಿಕರು ನಿರುದ್ಯೋಗಿಗಳನ್ನಾಗಿ ಬದಲಾಯಿಸಲಾಗಿದೆ. ಮೇಕ್ ಇನ್ ಇಂಡಿಯಾ ಹೆಸರಲ್ಲಿ ಸ್ಟಾರ್ಟ್ ಅಪ್ ಯೋಜನೆ ತಂದು ಮಾಲೀಕರನ್ನು ಪ್ರೋತ್ಸಾಹಿಸಲಾಗುತ್ತಿದೆ. ವ್ಯಾಪಾರದ ಸುಲಭೀಕರಣದ ಹೆಸರಲ್ಲಿ ಯೂನಿಯನ್ ಮುಕ್ತ ವಾತಾವರಣ ಕಲ್ಪಿಸಲು ಕೇಂದ್ರವು ಸರ್ವಾಧಿಕಾರಿ ವರ್ತನೆಯೊಂದಿಗೆ ಕಾರ್ಮಿಕ ಸಂಹಿತೆ ಜಾರಿ ಮಾಡಿ ಹೊಸ ಶ್ರಮಿಕ ನೀತಿ ಜಾರಿಗೊಳಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಭಾರತವನ್ನು ಪರಿವರ್ತಿಸಲು ಪರಮಾಣು ಶಕ್ತಿಯ ಸುಸ್ಥಿರ ಬಳಕೆ ಮತ್ತು ಪ್ರಗತಿ (ಶಾಂತಿ) ಕಾಯ್ದೆ, ಖಾಸಗಿ ಮತ್ತು ವಿದೇಶಿ ಬಂಡವಾಳಗಾರರು ಲಾಭದ ಉದ್ದೇಶದಿಂದ ಹೆಚ್ಚು ಅಪಾಯಕಾರಿ ಮತ್ತು ಅಪಾಯಕಾರಿ ಪರಮಾಣು ವಿದ್ಯುತ್ ಉತ್ಪಾದನೆಯನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಮನರೇಗಾ ಕಾಯ್ದೆಯನ್ನು ವಿಬಿ ಜಿ ರಾಮ್ ಜಿ ಯೋಜನೆ, ಅಜೀವಿಕಾ ಮಿಷನ್ (ಗ್ರಾಮೀಣ) ಕಾಯ್ದೆ-2025 ಎಂದು ಬದಲಾಯಿಸಿದ್ದರಿಂದ ಹಕ್ಕು ಆಧಾರಿತ ಗ್ರಾಮೀಣ ಉದ್ಯೋಗ ಖಾತ್ರಿ ಬದಲಿಸುತ್ತದೆ ಮತ್ತು ಹಣಕಾಸಿನ ಹೊರೆ ರಾಜ್ಯಗಳ ಮೇಲೆ ವರ್ಗಾಯಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ರೈತ-ಕಾರ್ಮಿಕ ಮುಖಂಡರಾದ ಸೋಮಶೇಖರ್, ಹೊನ್ನೂರು ಮುನಿಯಪ್ಪ, ಕೆ.ಎಚ್.ಆನಂದರಾಜು ಇತರರು ಮಾತನಾಡಿದರು. ಮಧು ತೊಗಲೇರಿ, ಇ.ಶ್ರೀನಿವಾಸ, ವಿ.ಲಕ್ಷ್ಮಣ, ಸತೀಶ ಅರವಿಂದ, ಹನುಮಂತಪ್ಪ, ಮಲ್ಲೇಶ, ರಮೇಶ ದಾಸರ್, ಇಪ್ಟಾದ ಐರಣಿ ಚಂದ್ರು, ಪವಿತ್ರಾ, ಶಿವಾಜಿರಾವ್, ಮಂಜುನಾಥ ಕೈದಾಳೆ, ಮಂಜುನಾಥ ಕುಕ್ಕವಾಡ, ಗುಮ್ಮನೂರು ಬಸವರಾಜ, ಬುಳ್ಳಾಪುರ ಹನುಮಂತಪ್ಪ, ಅಷ್ಫಕ್, ಜಬೀನಾ ಖಾನಂ, ಎಂ.ಕರಿಬಸಪ್ಪ, ಮರುಳಸಿದ್ದಪ್ಪ, ನರೇಗಾ ರಂಗನಾಥ, ಎಚ್‌ಕೆಆರ್ ಸುರೇಶ ಇತರರು ಇದ್ದರು.
- - -(ಕೋಟ್ಸ್)ಜಾರಿಯಲ್ಲಿರುವ ಬಲವಂತದ ಭೂ ಸ್ವಾಧೀನ, ಭೂ ಸುಧಾರಣಾ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು, ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ಶಾಸನ ಭದ್ರತೆ ನೀಡಬೇಕು. ಕರ್ನಾಟಕ ಸರ್ಕಾರವು 4 ಲೇಬರ್ ಕೋಡ್‌ಗಳಿಗೆ ನಿಯಮಾವಳಿಗಳನ್ನು ಯಾವುದೇ ಕಾರಣಕ್ಕೂ ರಚಿಸಬಾರದು.
- ಮಂಜುನಾಥ ಕೈದಾಳೆ, ಕಾರ್ಮಿಕ ಮುಖಂಡ.- - - ಕೇಂದ್ರ ಸರ್ಕಾರ ಕರಡು ಬೀಜ ಮಸೂದೆ ಮತ್ತು ಕರಡು ವಿದ್ಯುತ್ (ತಿದ್ದುಪಡಿ) ಮಸೂದೆ-2025ನ್ನು ಮಂಡಿಸಿದೆ. ಈ ಮಸೂದೆಗಳನ್ನು ಮಂಡಿಸಿ ಅಂಗೀಕರಿಸಿದರೆ, ಕೃಷಿ, ಗೃಹಬಳಕೆ ಮತ್ತು ಎಂಎಸ್ ಎಂಇ ವಿದ್ಯುತ್ ಗ್ರಾಹಕರು ಮತ್ತು ನಮ್ಮ ದೇಶದ ಸಾರ್ವಜನಿಕ ವಿದ್ಯುತ್ ಕ್ಷೇತ್ರದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ.
- ಕೆ.ಎಚ್.ಆನಂದರಾಜು, ಹಿರಿಯ ಕಾರ್ಮಿಕ ಮುಖಂಡ.- - -
(-ಫೋಟೋ ಇದೆ.)