ರಾಮಮೂರ್ತಿ ನವಲಿ ಗಂಗಾವತಿ

ಸಮೀಪದ ನವಲಿಯಿಂದ ಕರಡೋಣಿಗೆ ಹೋಗುವ ರಸ್ತೆ ಕಾಟಾಚಾರಕ್ಕೆ ದುರಸ್ತಿಗೊಳಿಸಿದ್ದು, ಆಟಕ್ಕುಂಟು ಲೆಕ್ಕಕ್ಕೆ ಇಲ್ಲದಂತಾಗಿದೆ. ಕಳೆದ ವರ್ಷದಿಂದ ಆಮೆಗತಿಯಲ್ಲಿ ಸಾಗಿದ ರಸ್ತೆಗೆ ಅಲ್ಲಲ್ಲಿ ಡಾಂಬರೀಕರಣ, ತಗ್ಗು-ದಿನ್ನೆಗಳಿಗೆ ತ್ಯಾಪೆ ಹಚ್ಚುವ ಕಾಮಗಾರಿ ಮಾಡಿ ಕೈತೊಳೆದುಕೊಂಡಿದ್ದಾರೆ.

ಲೋಕೋಪಯೋಗಿ ಇಲಾಖೆಯಿಂದ ಸುಮಾರು ₹2 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗಿದೆ. ಆದರೆ ರಸ್ತೆಯ ಪಕ್ಕದಲ್ಲಿರುವ ಸೇತುವೆಗಳಿಗೆ ತಡೆಗೋಡೆಗೆ ಅನುದಾನ ಇಲ್ಲದಿರುವುದರಿಂದ ದಿನ ನಿತ್ಯ ಅವಘಡ ಸಂಭವಿಸುತ್ತಿರುವುದು ಸಾಮಾನ್ಯವಾಗಿದೆ.

ನವಲಿಯಿಂದ–ಕರಡೋಣಿಗೆ ಸುಮಾರು 4 ಕಿಮೀ ಮಾತ್ರ ರಸ್ತೆ ಡಾಂಬರೀಕರಣ ಮಾಡಿದ್ದು, ಈ ಮಾರ್ಗದಲ್ಲಿ ತಾಂಡಾ, ಪ್ರಾಥಮಿಕ ಶಾಲೆ, ಐತಿಹಾಸಿಕ ನವಲಿ ಭೋಗಾಪುರೇಶ ದೇವಸ್ಥಾನ ಹಾಗೂ ಐತಿಹಾಸಿಕ ಕೋಟಿ ಲಿಂಗಪುರ ಗ್ರಾಮ, ರೈತರು ಹೊಲ-ಗದ್ದೆಗಳಿಗೆ ಸಂಪರ್ಕಿಸುವ ರಸ್ತೆಯಾಗಿದೆ.

ಬ್ಯಾರಿಕೇಡ್ ನಿರ್ಮಾಣ: ನವಲಿಯಿಂದ ಕರಡೋಣಿಗೆ ಹೋಗುವ ರಸ್ತೆಯ ಪಕ್ಕದಲ್ಲಿ ಸೇತುವೆ ಬದಲು ಬ್ಯಾರಿಕೇಡ್ ನಿರ್ಮಿಸಿದ್ದಾರೆ. ರಸ್ತೆಯ ಒಂದು ಭಾಗದಲ್ಲಿ ಹಳೆಯ ಸೇತುವೆ ಇದ್ದರೆ ಇನ್ನೊಂದು ಭಾಗದಲ್ಲಿ ಸೇತುವೆಗೆ ತಡೆಗೋಡೆ ನಿರ್ಮಾಣ ಮಾಡದೇ ಬ್ಯಾರಿಕೇಡ್ ಅಳವಡಿಸಿದ್ದಾರೆ.


ಗ್ರಾಮಸ್ಥರು ತಡೆಗೋಡೆ ನಿರ್ಮಿಸಬೇಕೆಂದು ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಇತ್ತೀಚೆಗೆ ನವಲಿಯಲ್ಲಿ ಜರುಗಿದ ಜಾತ್ರೆ ಸಂದರ್ಭದಲ್ಲಿ ಸಾವಿರಾರು ಭಕ್ತರು ಆಗಮಿಸಿದ್ದ ಸಂದರ್ಭದಲ್ಲಿ ಎಷ್ಟೋ ಜನರು ಅವಘಡಕ್ಕೆ ಸಿಲುಕಿದ ಉದಾಹರಣೆಗಳಿವೆ.

ಗುತ್ತಿಗೆದಾರ ನಾಪತ್ತೆ:ಲೋಕೋಪಯೋಗಿ ಇಲಾಖೆಯಿಂದ ಗುತ್ತಿಗೆ ಪಡೆದ ಗುತ್ತಿಗೆದಾರ ನಾಪತ್ತೆಯಾಗಿದ್ದಾರೆ. ಇಲಾಖೆಯ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನಿಸುತ್ತಿರುವ ಈ ಗುತ್ತಿಗೆದಾರ ರಸ್ತೆ ಕಾಮಗಾರಿ ಹರಕು-ಮುರುಕು ಆಗಿವೆ ಎಂದು ಸ್ವತ ಅಧಿಕಾರಿಗಳೆ ಹೇಳುತ್ತಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಕ್ಷೇತ್ರದ ಪ್ರಮುಖ ಗ್ರಾಮವಾಗಿರುವ ನವಲಿ ಗ್ರಾಮದಲ್ಲಿ ರಸ್ತೆ ದುರಸ್ತಿ ಸೇರಿದಂತೆ ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಿದರೆ ಮುಂದಾಗುವ ಅವಘಡಗಳು ತಪ್ಪಿಸಿದಂತಾಗುತ್ತದೆ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.

ನವಲಿಯಿಂದ ಕರಡೋಣಿ ರಸ್ತೆ ಡಾಂಬರೀಕರಣ ಮಾಡಲಾಗಿದೆ. ಆದರೆ ರಸ್ತೆಯ ಪಕ್ಕದಲ್ಲಿರುವ ಸೇತುವೆಗೆ ತಡಗೋಡೆ ನಿರ್ಮಿಸಬೇಕೆಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರೂ ಕೈಗೆ ಸಿಗುತ್ತಿಲ್ಲ. ತಡಗೋಡೆ ಬದಲು ಬ್ಯಾರಿಕೇಡ್ ಹಾಕಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಎಇಇ ವಿಶ್ವನಾಥ ತಿಳಿಸಿದ್ದಾರೆ.

ಸೇತುವೆ ನಿರ್ಮಿಸಿಕೊಡಬೇಕೆಂದು ಹಲವಾರು ಬಾರಿ ಲೋಕೋಪಯೋಗಿ ಇಲಾಖೆಗೆ ತಿಳಿಸಿದರೂ ಗಮನ ಹರಿಸುತ್ತಿಲ್ಲ, ರೈತರು ದಿನ ನಿತ್ಯ ಚಕ್ಕಡಿ ಮೇಲೆ ಕೃಷಿ ಚಟುವಟಿಕೆಗೆ ಹೋಗುತ್ತಿದ್ದಾರೆ. ಎಷ್ಟೋ ಬಾರಿ ಬೈಕ್, ಚಕ್ಕಡಿ ಬಿದ್ದು ಅಪಘಾತ ಸಂಭವಿಸಿವೆ. ಇಲಾಖೆಯವರಿಗೆ ಹೇಳಿದರೂ ನಿರ್ಲಕ್ಷ್ಯವಹಿಸಿದ್ದಾರೆ ಎಂದು ನವಲಿ ತಾಂಡಾದ ರೈತ ಯಂಕಪ್ಪ ತಿಳಿಸಿದ್ದಾರೆ.