ಸಾರಾಂಶ
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕ್ರೀಡಾಂಗಣ ಮೈದಾನದಲ್ಲಿ ಗುರುವಾರದಂದು ಬೆಳಿಗ್ಗೆ ಆಯೋಜಿಸಲಾಗಿದ್ದ 78ನೇ ಸ್ವಾತಂತ್ರ‍್ಯ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲೂಕು ದಂಡಾಧಿಕಾರಿ ವಿ. ಎಸ್. ನವೀನ್ ಕುಮಾರ್ ಅವರು ಧ್ವಜಾರೋಹಣ ನೆರವೇರಿಸಿದರು. ಪೊಲೀಸರು ಮತ್ತು ಹೋಂ ಗಾರ್ಡ್‌ಗಳು ಹಾಗೂ ವಿವಿಧ ಶಾಲೆಯ ವಿದ್ಯಾರ್ಥಿಗಳ ತಂಡದ ಬಳಿ ತೆರೆದ ವಾಹನದಲ್ಲಿ ಸಾಗಿ ಪಥ ಸಂಚಲನ ನಡೆಸುವ ತುಕಡಿಗಳ ಪರಿಚಯ ಮಾಡಿಕೊಂಡರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕ್ರೀಡಾಂಗಣ ಮೈದಾನದಲ್ಲಿ ಗುರುವಾರದಂದು ಬೆಳಿಗ್ಗೆ ಆಯೋಜಿಸಲಾಗಿದ್ದ 78ನೇ ಸ್ವಾತಂತ್ರ‍್ಯ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲೂಕು ದಂಡಾಧಿಕಾರಿ ವಿ. ಎಸ್. ನವೀನ್ ಕುಮಾರ್ ಅವರು ಧ್ವಜಾರೋಹಣ ನೆರವೇರಿಸಿದರು.ಕಾರ್ಯಕ್ರಮಕ್ಕೆ ಗಣ್ಯ ವ್ಯಕ್ತಿಗಳೆಲ್ಲ ಸೇರಿ ಮಹಾತ್ಮ ಗಾಂಧೀಜಿ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ಪೊಲೀಸರು ಮತ್ತು ಹೋಂ ಗಾರ್ಡ್‌ಗಳು ಹಾಗೂ ವಿವಿಧ ಶಾಲೆಯ ವಿದ್ಯಾರ್ಥಿಗಳ ತಂಡದ ಬಳಿ ತೆರೆದ ವಾಹನದಲ್ಲಿ ಸಾಗಿ ಪಥ ಸಂಚಲನ ನಡೆಸುವ ತುಕಡಿಗಳ ಪರಿಚಯ ಮಾಡಿಕೊಂಡರು. ನಂತರ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಸಿ. ಎನ್. ಬಾಲಕೃಷ್ಣ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಎಲ್ಲಾ ವರ್ಗದ ಜನರ ವಿಶ್ವಾಸಕ್ಕೆ ತೆಗೆದುಕೊಂಡು ಸಿಕ್ಕಿದ ಸ್ವಾತಂತ್ರವನ್ನು ನಾವೆಲ್ಲಾ ಅನುಭವಿಸುತ್ತಾ ಬಂದಿದ್ದೇವೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿಕೊಟ್ಟ ಸಂವಿಧಾನದ ನೀತಿ ನಿಯಮಗಳನ್ನು ಈ ದೇಶದ ಆಳ್ವಿಕೆಯನ್ನು ನಡೆಸುತ್ತಾ ಬಂದಿದ್ದೇವೆ, ಅಂಬೇಡ್ಕರ್ ಅವರ ಆಶಯವಾದ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಸಿದ್ಧಾಂತವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಸಾಗಬೇಕಾಗಿದೆ ಎಂದರು.ಇದೇ ವೇಳೆ ಪೊಲೀಸ್, ಗೃಹ ರಕ್ಷಕ ದಳ, ಎನ್.ಸಿ.ಸಿ. ಭಾರತ ಸೇವಾದಳ, ವಿವಿಧ ಶಾಲಾ ಕಾಲೇಜುಗಳ ತುಕಡಿಗಳು ಆಕರ್ಷಕ ಪಥಸಂಚಲ ನಡೆದು ಗೌರವ ರಕ್ಷೆ ಸ್ವೀಕರಿಸಿದರು. ಕೊನೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮಹನೀಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದಾದ ಬಳಿಕ ಜ್ಞಾನಸಾಗರ ಶಾಲೆ, ಸರ್ಕಾರಿ ಪ್ರೌಢಶಾಲೆ, ಶ್ರೀ ವಿವೇಕಾನಂದ ಶಾಲೆ, ನವೋದಯ ಶಾಲೆ, ಎಸ್ ವಿ ಎಸ್ ಶಾಲೆ, ಜ್ಯೋತಿ ಕಾನ್ವೆಂಟ್, ಸೇರಿದಂತೆ ಹಲವು ಶಾಲೆಯ ವಿದ್ಯಾರ್ಥಿಗಳು ಸ್ವಾತಂತ್ರ‍್ಯ ಹೋರಾಟದ ಕುರಿತು ನೃತ್ಯ ರೂಪಕವನ್ನು ಪ್ರದರ್ಶಿಸಿದರು.
ಇದೇ ವೇಳೆ ರಾಜ್ಯ ಮಟ್ಟದ ಅಥ್ಲೆಟಿಕ್ ಕ್ರೀಡಾಪಟು ಚನ್ನರಾಯಪಟ್ಟಣದ ಸಿ. ಎ. ಸೃಜನ್ ಅವರಿಗೆ 25 ಸಾವಿರ ರು.ಗಳ ಚೆಕ್‌ನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಟಿಎಪಿಎಂಎಸ್ ಚಂದ್ರಕಲಾ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ಜಿ.ಆರ್. ಮೂರ್ತಿ, ಕಸಾಪ ಅಧ್ಯಕ್ಷ ಲೋಕೇಶ್, ತಾ.ಪಂ. ಇಒ ಜಿ.ಆರ್. ಹರೀಶ್, ಡಿವೈಎಸ್ಪಿ ರವಿ ಪ್ರಸಾದ್ , ಬಿಇಒ ದೀಪಾ, ತಾಲೂಕು ವೈದ್ಯಾಧಿಕಾರಿ ವಿ.ಮಹೇಶ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ. ಮಂಜಪ್ಪ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಮುರಾರ್ಜಿ ಮಂಜಣ್ಣ, ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿ ಎನ್ ಅಶೋಕ್, ಕೆಂಪೇಗೌಡ ವೇದಿಕೆ, ಅಧ್ಯಕ್ಷರಾದ ಕಾಳೇನಹಳ್ಳಿ ಆನಂದ ಸೇರಿದಂತೆ ಇತರರು ಹಾಜರಿದ್ದರು.