ಧಾರವಾಡದಲ್ಲಿ ಇಂದಿನಿಂದ ನವರಾತ್ರಿ ವೈಭವ ಶುರು

| Published : Sep 22 2025, 01:01 AM IST

ಧಾರವಾಡದಲ್ಲಿ ಇಂದಿನಿಂದ ನವರಾತ್ರಿ ವೈಭವ ಶುರು
Share this Article
  • FB
  • TW
  • Linkdin
  • Email

ಸಾರಾಂಶ

ಧಾರವಾಡ ಜಂಬೂ ಸವಾರಿ ಉತ್ಸವ ಸಮಿತಿ ಮಾತ್ರವಲ್ಲದೇ ನಗರದ ಪ್ರಮುಖ ದೇವಸ್ಥಾನದಲ್ಲಿ ನವರಾತ್ರಿ ವೈಭವವನ್ನು ಭಕ್ತಿಪೂರ್ವಕವಾಗಿ ಮಾಡುತ್ತಿದ್ದು, ಸಾವಿರಾರು ಭಕ್ತರು ಒಂಬತ್ತು ದಿನಗಳ ಕಾಲ ಪಾಲ್ಗೊಳ್ಳುವ ಮೂಲಕ ದಸರೆಯನ್ನು ಯಶಸ್ವಿಗೊಳಿಸುತ್ತಿದ್ದಾರೆ.

ಧಾರವಾಡ: ಸಾಮಾನ್ಯವಾಗಿ ದಸರಾ ಎಂದಾಕ್ಷಣ ಮೈಸೂರು ನೆನಪಾಗುತ್ತದೆ. ಆದರೆ, ಧಾರವಾಡದಲ್ಲೂ ದಸರಾ ಸಂಭ್ರಮವನ್ನು ಅತ್ಯಂತ ವಿಜೃಂಬಣೆಯಿಂದ ಮಾಡುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ "ಧಾರವಾಡ ದಸರಾ " ಸಹ ಎಲ್ಲೆಡೆ ಮನೆ ಮಾಡಿದೆ.

ಧಾರವಾಡ ಜಂಬೂ ಸವಾರಿ ಉತ್ಸವ ಸಮಿತಿ ಮಾತ್ರವಲ್ಲದೇ ನಗರದ ಪ್ರಮುಖ ದೇವಸ್ಥಾನದಲ್ಲಿ ನವರಾತ್ರಿ ವೈಭವವನ್ನು ಭಕ್ತಿಪೂರ್ವಕವಾಗಿ ಮಾಡುತ್ತಿದ್ದು, ಸಾವಿರಾರು ಭಕ್ತರು ಒಂಬತ್ತು ದಿನಗಳ ಕಾಲ ಪಾಲ್ಗೊಳ್ಳುವ ಮೂಲಕ ದಸರೆಯನ್ನು ಯಶಸ್ವಿಗೊಳಿಸುತ್ತಿದ್ದಾರೆ.

ಈಗಾಗಲೇ ಒಂದು ವಾರದಿಂದ ಕಡಪಾ ಮೈದಾನದಲ್ಲಿ ದಸರಾ ವಸ್ತು ಪ್ರದರ್ಶನ ಶುರುವಾಗಿದ್ದು, ಸೆ. 22ರ ಸೋಮವಾರದಿಂದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಕೊನೆ ದಿನ ಗಾಂಧಿನಗರದ ಬಂಡೆಮ್ಮ ದೇವಸ್ಥಾನದ ಆವರಣದಿಂದ ಕಡಪಾ ಮೈದಾನದ ವರೆಗೆ ಜಂಬೂ ಸವಾರಿ ಹಾಗೂ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ಅದ್ಧೂರಿಯಾಗಿ ನಡೆಯಲಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷ ಗುರುರಾಜ ಹುಣಸಿಮರದ ಮಾಹಿತಿ ನೀಡಿದರು.

ನವರಾತ್ರಿ ನಿಮಿತ್ತ ಐತಿಹಾಸಿಕ ಮಹತ್ವವುಳ್ಳ ಇಲ್ಲಿಯ ಜವಳಿ ಪೇಟೆಯಲ್ಲಿರುವ ಲಕ್ಷ್ಮಿನಾರಾಯಣ ಶರನ್ನವರಾತ್ರೋತ್ಸವ ಹಮ್ಮಿಕೊಳ್ಳಲಾಗಿದೆ. ಸೆ. 22ರಂದು ಲಕ್ಷ್ಮಿನಾರಾಯಣಗೆ ಬದರಿ ನಾರಾಯಣ, ಸೆ. 23ರಂದು ಕಾಲಿಯಾ ಮರ್ದನ, 24ರಂದು ವಿಠ್ಠಲ ರುಖಮಾಯಿ, 25ರಂದು ಗಜೇಂದ್ರ ಮೋಕ್ಷ, 26ರಂದು ಸೀತಾ ಸ್ವಯಂವರ, 27ರಂದು ಸುವರ್ಣ ಮೃಗ, 28ರಂದು ರಾಧಾ ಕೃಷ್ಣ, 29ರಂದು ಶಂಕರ ಪಾರ್ವತಿ, 30ರಂದು ಶರವಿದ್ಯಾ, ಅ. 1ರಂದು ಸೀತಾ ಪಾತಿವೃತ್ಯ, 2ರಂದು ಶ್ರೀನಿವಾಸ ಪದ್ಮಾವತಿ ಹಾಗೂ 3ರಂದು ಕೊನೆಯ ದಿನ ಶ್ರೀನಿವಾಸ ಪದ್ಮಾವತಿ ಮತ್ತೊಂದು ಅಲಂಕಾರ ಮಾಡಲಾಗುತ್ತಿದೆ ಎಂದು ಸ್ಥಾನಿಕ ಪಂಚ ಕಮಿಟಿಯ ಅಮರನಾಥ ಟಿಕಾರೆ ಮಾಹಿತಿ ನೀಡಿದ್ದಾರೆ.

ಹಾಗೆಯೇ, ಕಳೆದ 16 ವರ್ಷಗಳಿಂದ ಮಂಗಳವಾರ ಪೇಟೆಯ ಕಟ್ಟಿಮಠದಲ್ಲೂ ಒಂಬತ್ತು ದಿನಗಳ ಕಾಲ ಶಕ್ತಿ ಕಲ್ಪನೆಯಲ್ಲಿ ದೇವಿಗೆ ಅಲಂಕಾರ, ಪೂಜೆ, ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಹಾಗೆಯೇ, ನಗರೇಶ್ವರ ದೇವಸ್ಥಾನದಲ್ಲಿ 52ನೇ ವರ್ಷದ ದಸರಾ ಸಂಭ್ರಮ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಸೆ. 22ರಿಂದ ನಿತ್ಯ ವಿವಿಧ ದೇವಿಯರ ಅಲಂಕಾರಗಳಿಂದ 11 ದಿವಸ ವಿಜೃಭಣೆಯಿಂದ ಪೂಜೆ ಸಲ್ಲಿಸಲಾಗುತ್ತದೆ. ಸೆ. 22ಕ್ಕೆ ಮಹಾಲಕ್ಷ್ಮಿ, 23ರಂದು ರೇಣುಕಾಂಬಾ, 24ರಂದು ನಾಗಲಕ್ಷ್ಮಿ, 2ರಂದು5 ಬನಶಂಕರಿ, 26ರಂದು ಭಗವತಿ ಗಂಗಾ, 27ರಂದು ಶಾರದಾಂಬಾ, 28ರಂದು ಸರಸ್ವತಿ, 29ರಂದು ಭಗವತಿ ಗೌರಿ, 30ರಂದು ದುರ್ಗಾದೇವಿ, ಅಕ್ಟೋಬರ್‌ 1 ಅನ್ನಪೂರ್ಣಾ, 2 ರಾಜರಾಜೇಶ್ವರಿ ದೇವಿಯ ಅಲಂಕಾರ ಮಾಡಲಾಗುವುದು.

ನವರಾತ್ರಿಯಲ್ಲಿ ನಿತ್ಯ ಬೆಳಗ್ಗೆ 9ರಿಂದ ಮಧ್ಯಾಹ್ನ 2ರ ವರೆಗೆ ದೇವಿಗೆ ಪೂಜಾಸೇವೆ ಸಲ್ಲಿಸಲು ಆಸಕ್ತ ಭಕ್ತರಿಗೆ ಅವಕಾಶವಿದೆ. ಸಂಜೆ 5ಕ್ಕೆ ವಾಸವಿ ಮಹಿಳಾ ಮಂಡಳದ ಸದಸ್ಯರಿಂದ ಲಲಿತಾಸಹಸ್ರ ನಾಮಾವಳಿ, ಗೋವಿಂದ ನಾಮಾವಳಿ ಹಾಗೂ ಕನಕಧಾರಾ ಸ್ತೋತ್ರ ಪಠಣವಿದೆ ಎಂದು ಆರ್ಯ ವೈಶ್ಯ ಸಮಾಜದ ಅಧ್ಯಕ್ಷ ಈರಣ್ಣ ಆಕಳವಾಡಿ ತಿಳಿಸಿದ್ದಾರೆ.

ಅದೇ ರೀತಿ ಧಾರವಾಡದ ಪೊಲೀಸ್‌ ಹೆಡ್‌ಕ್ವಾರ್ಟರ್ಸ್‌ನಲ್ಲಿಯ ಐತಿಹಾಸಿಕ ದುರ್ಗಾ ದೇವಸ್ಥಾನದಲ್ಲೂ ನಿತ್ಯ ದೇವಿಗೆ ಅಲಂಕಾರ, ಪೂಜೆ ನಡೆಯಲಿದೆ.

ಹಿಂದೂಗಳಿಗೆ ನವರಾತ್ರಿ ಮತ್ತು ವಿಜಯದಶಮಿ ಮಹತ್ವದ ಹಬ್ಬಗಳು. ವಿಜಯನಗರ ಸಾಮ್ರಾಜ್ಯದ ಸೀಮೋಲ್ಲಂಘನೆಯ ಉತ್ಸವ ಇಂದಿಗೂ ನಮಗೆಲ್ಲ ಆದರ್ಶದ ಸೀಮೆಗಳನ್ನು ವಿಸ್ತಾರ ಮಾಡಿಕೊಳ್ಳಲು ನೆನಪಿಸುವಂತಹದು. ದೇಶದ ವಿವಿಧ ಭಾಗಗಳಲ್ಲಿ ನವರಾತ್ರಿಯನ್ನು ವಿಭಿನ್ನ ರೀತಿಗಳಲ್ಲಿ ಆಚರಿಸಲಾಗುತ್ತದೆ. ನವರಾತ್ರಿಯು ಮುಖ್ಯವಾಗಿ ದೇವೀ ಆರಾಧನೆಯ ಹಬ್ಬ. ಅದರಲ್ಲಿಯೂ ಮೊದಲ ಮೂರು ದಿನಗಳನ್ನು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ಮುಂದಿನ ಮೂರು ದಿನಗಳನ್ನು ವಿದ್ಯಾಬುದ್ಧಿಗಳ ಅಧಿದೇವತೆಯಾದ ಸರಸ್ವತಿ ಮತ್ತು ಮುಂದಿನ ಮೂರು ದಿನಗಳು ಶಕ್ತಿ ದೇವತೆಯ ಆರಾಧನೆಗೆ ಕೇಂದ್ರೀಕೃತವಾಗಿರುತ್ತವೆ ಎಂದು ಧಾರವಾಡ ಅಡಕಿ ಓಣಿಯ ಉದಯ ಮ. ಯಂಡಿಗೇರಿ ಹೇಳಿದರು.