ನಮ್ಮ ಸಂಸ್ಕೃತಿಯ ಪ್ರತೀಕವಾದ ನವರಾತ್ರಿ ಹಬ್ಬಕ್ಕೆ ವಿದ್ಯುಕ್ತ ಚಾಲನೆ ದೊರಕಿದೆ. ಕಾಂಗ್ರೆಸ್ ಕಚೇರಿಯಲ್ಲೂ ಶ್ರೀ ಚಾಮುಂಡೇಶ್ವರಿಯನ್ನು ಪ್ರತಿಷ್ಠಾಪಿಸಿದ್ದೇವೆ. ಅದರಂತೆ ಮಹಿಳೆಯರಿಗೆ ಮಡಿಲಕ್ಕಿ ಸಮರ್ಪಣೆ ಮಾಡಿದ್ದೇವೆ. ಮುಸಲ್ಮಾನ ಮಹಿಳೆಯರಿಗೂ ಮಡಿಲಕ್ಕಿ ಅರ್ಪಿಸಿ ಸೌಹಾರ್ದತೆ ಮೆರೆದಿದ್ದೇವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ನಿಂದ ನವರಾತ್ರಿ ಹಬ್ಬದ ಆರಂಭದ ದಿನದ ಅಂಗವಾಗಿ ಮಹಿಳೆಯರಿಗೆ ಮಡಿಲಕ್ಕಿ ಸಮರ್ಪಣೆ ಮಾಡಲಾಯಿತು.

ಮಹಿಳಾ ಅಧ್ಯಕ್ಷೆ ಎಚ್.ಬಿ.ಶುಭದಾಯಿನಿ ಮಾತನಾಡಿ, ನಮ್ಮ ಸಂಸ್ಕೃತಿಯ ಪ್ರತೀಕವಾದ ನವರಾತ್ರಿ ಹಬ್ಬಕ್ಕೆ ವಿದ್ಯುಕ್ತ ಚಾಲನೆ ದೊರಕಿದೆ. ಕಾಂಗ್ರೆಸ್ ಕಚೇರಿಯಲ್ಲೂ ಶ್ರೀ ಚಾಮುಂಡೇಶ್ವರಿಯನ್ನು ಪ್ರತಿಷ್ಠಾಪಿಸಿದ್ದೇವೆ. ಅದರಂತೆ ಮಹಿಳೆಯರಿಗೆ ಮಡಿಲಕ್ಕಿ ಸಮರ್ಪಣೆ ಮಾಡಿದ್ದೇವೆ. ಮುಸಲ್ಮಾನ ಮಹಿಳೆಯರಿಗೂ ಮಡಿಲಕ್ಕಿ ಅರ್ಪಿಸಿ ಸೌಹಾರ್ದತೆಯನ್ನು ಮೆರೆದಿರುವುದಾಗಿ ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರಿಂದ ನಾಡಹಬ್ಬ ದಸರಾ ಉದ್ಘಾಟಿಸಿದ್ದಾರೆ. ಸಾಮರಸ್ಯ ಮತ್ತು ಸೌಹಾರ್ದತೆಗೆ ಇದೊಂದು ಮಾದರಿಯಾಗಿದೆ. ಅದೇ ರೀತಿಯಲ್ಲಿ ನಾವೂ ಕೂಡ ಹಿಂದೂ-ಮುಸ್ಲಿಂ ಎಂಬ ತಾರತಮ್ಯವಿಲ್ಲದೆ ಮುಸಲ್ಮಾನ ಮಹಿಳೆಯರಿಗೂ ಮಡಿಲಕ್ಕಿ ಸಮರ್ಪಿಸಿದ್ದೇವೆ. ಇದು ಭಾವೈಕ್ಯತೆಯ ಪ್ರತೀಕ ಎಂದರು.

ಹಿಂದೂ-ಮುಸ್ಲಿಂ ಎಂಬ ದ್ವೇಷ ಭಾವನೆಯನ್ನೂ ಬೆಳೆಸಿಕೊಳ್ಳದೆ ಪರಸ್ಪರ ಆತ್ಮೀಯತೆಯಿಂದ ಸಹಜೀವನ ನಡೆಸಬೇಕು. ಭಾರತ ಭ್ರಾತೃತ್ವ ರಾಷ್ಟ್ರವಾಗಿ ಮುನ್ನಡೆಯಬೇಕು. ಅದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ಕಾರ್ಯಕರ್ತೆಯರಾದ ವಿಜಯ ರಾಧಾಕೃಷ್ಣ, ಪದ್ಮಾಮೋಹನ್, ಪ್ರತಿಮಾ, ಗುಣ, ಜಯಲಕ್ಷ್ಮೀ, ಅನುರಾಧಾ, ಶಬರೀನ್‌ತಾಜ್ ಇತರರಿದ್ದರು.

ಇಂದು ಪೌರಕಾರ್ಮಿಕರ ದಿನಾಚರಣೆ, ಸ್ವಚ್ಛತೆ ಸ್ಥಗಿತ

ಮಂಡ್ಯ:

ಪೌರಕಾರ್ಮಿಕರ ದಿನಾಚರಣೆ ಪ್ರಯುಕ್ತ ಸೆ.23 ರಂದು ಬೆಳಗ್ಗೆ ನಗರಸಭೆಯಿಂದ ಮೆರವಣಿಗೆ ಕಾರ್ಯಕ್ರಮ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಬೆಳಗ್ಗೆ 11.45 ಗಂಟೆಗೆ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸರ್ಕಾರದ ಆದೇಶದ ಮೇರೆಗೆ ಪೌರ ಕಾರ್ಮಿಕರ ದಿನಾಚರಣೆಗಾಗಿ ಪೌರಕಾರ್ಮಿಕರಿಗೆ ರಜೆಯನ್ನು ಸೆ.23 ರಂದು ಘೋಷಣೆ ಮಾಡಲಾಗಿದೆ. ಮಂಡ್ಯ ನಗರಸಭಾ ವ್ಯಾಪ್ತಿ ಎಲ್ಲಾ ಸ್ವಚ್ಛತಾ ಕೆಲಸಗಳನ್ನು ಸ್ಥಗಿತಗೊಳಿಸಬೇಕಾಗಿದೆ. ಸಾರ್ವಜನಿಕರು ಸಹಕರಿಸುವಂತೆ ಪ್ರಪೌರಯುಕ್ತರು ಕೋರಿದ್ದಾರೆ.