ಸಾರಾಂಶ
ಕಾರವಾರ:
ನವರಾತ್ರಿ ಹಬ್ಬ ಎಂದಾಕ್ಷಣ ಕಾರವಾರ ಭಾಗದಲ್ಲಿ ಮೊದಲು ನೆನಪಾಗುವುದೇ ದಾಂಡಿಯಾ ನೃತ್ಯ. ನವರಾತ್ರಿಯ 9 ದಿನ ನಗರ ಹಾಗೂ ಗ್ರಾಮೀಣ ಭಾಗದ ವಿವಿಧೆಡೆ ದಾಂಡಿಯಾ ಆಡುವ ಮೂಲಕ ಈ ಹಬ್ಬವನ್ನು (ಭಾನುವಾರದಿಂದ) ಅದ್ಧೂರಿಯಾಗಿ ಆಚರಿಸಲಾಗುತ್ತದೆ.ಇಲ್ಲಿನ ಪ್ರಮುಖ ದೇವತೆಗಳಾದ ದುರ್ಗಾದೇವಿ, ಸಂತೋಷಿಮಾತಾ, ಕುಂಠಿ ಮಹಾಮಾಯಿ ಸೇರಿದಂತೆ ಅನೇಕ ದೇವಾಲಯಗಳ ಆವರಣದಲ್ಲಿ ದಾಂಡಿಯಾ ಆಯೋಜಿಸಲಾಗುತ್ತದೆ. ಜತೆಗೆ ಮಕ್ಕಳು, ಮಹಿಳೆಯರು, ಬಾಲಕ-ಬಾಲಕಿಯರಿಗಾಗಿ ವಿವಿಧ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಬಹುಮಾನ ಕೂಡಾ ನೀಡಲಾಗುತ್ತದೆ.
ದೇವಸ್ಥಾನ ಹಾಗೂ ದಾಂಡಿಯಾ ನೃತ್ಯ ಮಾಡುವ ಪ್ರದೇಶವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತದೆ. ಒಂಬತ್ತು ದಿನ ರಾತ್ರಿ ಮೊದಲು ಗರ್ಬಾ ನೃತ್ಯ ನಡೆಯುತ್ತದೆ. ವಿಶೇಷವೆಂದರೆ ಅಂದು ದೇವಿಗೆ ಇಷ್ಟವಾದ ಸೀರೆ ತೊಡಿಸಿ ಪೂಜಿಸಲಾಗುತ್ತದೆ. ರಾತ್ರಿ ಗರ್ಬಾ ನೃತ್ಯದಲ್ಲಿ ಪಾಲ್ಗೊಳ್ಳುವವರೂ ಕೂಡಾ ಅದೇ ಬಣ್ಣದ ಸೀರೆ ತೊಟ್ಟಿರುತ್ತಾರೆ. ಈ ನೃತ್ಯದ ಬಳಿಕ ಆಬಾಲವೃದ್ಧರಾದಿಯಾಗಿ ಎಲ್ಲರೂ ಸಾಮೂಹಿಕವಾಗಿ ನೃತ್ಯದಲ್ಲಿ ಪಾಲ್ಗೊಳ್ಳುತ್ತಾರೆ. ಕೈಯಲ್ಲಿ ದಾಂಡಿಯಾ ಕೋಲನ್ನು ಹಿಡಿದು ಇಂಪಾದ ಗಾಯನಕ್ಕೆ ಸೊಗಸಾಗಿ ಹೆಜ್ಜೆ ಹಾಕುತ್ತಾರೆ. ಈ ನೃತ್ಯದಲ್ಲಿ ಯಾವುದೇ ಭೇದ ಭಾವವಿಲ್ಲದೇ ಮಹಿಳೆಯರು ಮಕ್ಕಳು, ಯುವಕರು ಒಟ್ಟಾಗಿ ಪಾಲ್ಗೊಂಡು ಹೆಜ್ಜೆಹಾಕಿ ಸಂತಸಪಡುತ್ತಾರೆ. ನವರಾತ್ರಿ ಬಂದರೆ 9 ದಿನ ದಾಂಡಿಯಾದಲ್ಲಿ ಪಾಲ್ಗೊಳ್ಳುವುದೇ ನಮಗೆ ಸಂತೋಷದ ಸಂಭ್ರಮದ ಕ್ಷಣವಾಗಿರುತ್ತದೆ ಎನ್ನುತ್ತಾರೆ ಸಾರ್ವಜನಿಕರು.ನಗರದ ದೇವಳಿವಾಡ, ಸೋನಾರವಾಡ, ಬಾಂಡಿಶಿಟ್ಟಾ, ತಾಲೂಕಿನ ಕೆರವಡಿ, ಹಿಂದೂವಾಡ, ಲಕ್ಷ್ಮೀನಗರ, ಅಮದಳ್ಳಿ, ಚೆಂಡಿಯಾ, ಕಿನ್ನರ, ಕಡವಾಡ, ಬಿಣಗಾ, ತೋಡೂರು ಸೇರಿದಂತೆ ಹಲವು ಭಾಗದಲ್ಲಿ ದಾಂಡಿಯಾ ನೃತ್ಯವನ್ನು ಸಮಿತಿಯವರು ಆಯೋಜಿಸಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಸಂಭ್ರಮಿಸುತ್ತಿದ್ದಾರೆ. ಕೇವಲ ರಾಜಸ್ಥಾನ, ಗುಜರಾತ್, ಪಂಜಾಬ್‌ನಂತಹ ಕೆಲವೇ ರಾಜ್ಯಗಳಿಗೆ ಸೀಮಿತ ಎನ್ನಲಾದ ದಾಂಡಿಯಾ ನೃತ್ಯವನ್ನು ಹಲವಾರು ವರ್ಷದಿಂದ ಕಾರವಾರದ ಜನರೂ ಆಡುತ್ತಾ ಬರುತ್ತಿದ್ದಾರೆ.ಯಾವುದೇ ಭೇದ-ಭಾವವಿಲ್ಲದೇ ಮಹಿಳೆಯರು, ಮಕ್ಕಳು, ಪುರುಷರು, ಯುವಕ-ಯುವತಿಯರು ಒಟ್ಟಾಗಿ ಪಾಲ್ಗೊಂಡು ದಾಂಡಿಯಾದಲ್ಲಿ ಸಂತಸಪಡುತ್ತಾರೆ. ದಾಂಡಿಯಾ ವೀಕ್ಷಣೆಗೆಂದೆ ತಾಲೂಕಿನ ವಿವಿಧೆಡೆಯಿಂದ ಜನರು ಆಗಮಿಸಿ ತಡರಾತ್ರಿವರೆಗೂ ವೀಕ್ಷಣೆ ಮಾಡುತ್ತಾರೆ. ನವರಾತ್ರಿಯ ಒಂಬತ್ತು ದಿನಕ್ಕೆ ಒಂಬತ್ತು ಬಣ್ಣವಿದ್ದು, ಅದೇ ಸೀರೆ ತೊಟ್ಟು ಮಹಿಳೆಯರು, ಹೆಣ್ಣುಮಕ್ಕಳು ಗರ್ಬಾನೃತ್ಯ ಮಾಡುತ್ತಾರೆ ಎನ್ನುತ್ತಾರೆ ದಾಂಡಿಯಾ ಆಯೋಜಕ ಶುಭಂ ಕಳಸ.
ಕಾರವಾರ ತಾಲೂಕಿನಲ್ಲಿ ೨೭ಕ್ಕೂ ಅಧಿಕ ಕಡೆ ದಾಂಡಿಯಾ ಆಯೋಜಿಸಲಾಗುತ್ತದೆ. ಮಲ್ಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ೪, ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ೮, ಕದ್ರಾ ವ್ಯಾಪ್ತಿಯಲ್ಲಿ ೭ ಹಾಗೂ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ೮ ಕಡೆ ನಡೆಯುತ್ತದೆ. ಶಿರಸಿ, ದಾಂಡೇಲಿ ಭಾಗದಲ್ಲೂ ದಾಂಡಿಯಾ ಆಯೋಜಿಸಲಾಗುತ್ತದೆ.೧೫ಕೆ೧
ಕಾರವಾರದಲ್ಲಿ ದಾಂಡಿಯಾ ನೃತ್ಯದಲ್ಲಿ ಹೆಜ್ಜೆ ಹಾಕುತ್ತಿರುವುದು.