ಸಾರಾಂಶ
ನಯಂಪಳ್ಳಿಯ ಕಾಶೀಮಠದ ಶ್ರೀ ಗೋಪಾಲ ಕೃಷ್ಣ ದೇವಸ್ಥಾನದ ಶ್ರೀ ದೇವರ ಸನ್ನಿಧಿಯಲ್ಲಿ ಹಾಗೂ ಜಿ.ಎಸ್.ಬಿ. ಸಮಾಜ ಬಾಂಧವರಿಗೆ ಪ್ರಿಯವಾದ ಮಳೆಗಾಲ (ಆಟಿ ಅಥವಾ ಅಷಾಢ)ದ 51 ಬಗೆಯ ವಿಶೇಷ ಖಾದ್ಯಗಳ ಭೋಜನ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ನಯಂಪಳ್ಳಿಯ ಕಾಶೀಮಠದ ಶ್ರೀ ಗೋಪಾಲ ಕೃಷ್ಣ ದೇವಸ್ಥಾನದ ಶ್ರೀ ದೇವರ ಸನ್ನಿಧಿಯಲ್ಲಿ ಭಾನುವಾರ ಭಜನಾ ಸಂಕೀರ್ತನಾ ಸೇವೆ ಹಾಗೂ ಜಿ.ಎಸ್.ಬಿ. ಸಮಾಜ ಬಾಂಧವರಿಗೆ ಪ್ರಿಯವಾದ ಮಳೆಗಾಲ (ಆಟಿ ಅಥವಾ ಅಷಾಢ)ದ 51 ಬಗೆಯ ವಿಶೇಷ ಖಾದ್ಯಗಳ ಭೋಜನ ನಡೆಯಿತು.ದೇವರ ಸನ್ನಿಧಿಯಲ್ಲಿ ಅರ್ಚಕ ಶ್ರೀಜಿತ್ ಶರ್ಮಾ ಸಾಮೂಹಿಕ ಪ್ರಾರ್ಥನೆ ನೆಡೆಸಿಕೊಟ್ಟರು. ಈ ಸಂದರ್ಭ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಕಾರ್ಕಳ ತಾಲೂಕಿನ ವರಂಗದ ಶ್ರೀ ರಾಮ ಭಜನಾ ಮಂಡಳಿಯವರು ಭಕ್ತಿಪೂರ್ಣ ಭಜನಾ ಸಂಕೀರ್ತನೆ ನಡೆಸಿಕೊಟ್ಟರು.
ಸೇವಾದಾರ ಶಿರಿಯಾರ ಗಣೇಶ್ ನಾಯಕ್ ಮತ್ತು ಕುಟುಂಬಸ್ಥರು, ಲಕ್ಷ್ಮೀನಗರದ ದಿ. ಸುರೇಶ ಭಟ್ ಅವರ ಸ್ಮರಣಾರ್ಥ ಅವರ ಮಕ್ಕಳು ಈ ಸೇವೆಯನ್ನು ನೀಡಿ ಸಹಕರಿಸಿದರು.ಆಟಿಯ ವಿಶೇಷ ಭೋಜನ ಕೂಟದಲ್ಲಿ 500ಕ್ಕೂ ಹೆಚ್ಚಿನ ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದರು. ನಯಂಪಳ್ಳಿ ಕಾಶೀಮಠದ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಗಣೇಶ್ ನಾಯಕ್, ಕಾರ್ಯದರ್ಶಿ ಅರವಿಂದ್ ಭಟ್, ಜಿ.ಎಸ್.ಬಿ. ಯುವಕ ಹಾಗೂ ಮಹಿಳಾ ಮಂಡಳಿಯ ಸದಸ್ಯರು ಸಹಕರಿಸಿದರು. ನೂರಾರು ಸಮಾಜ ಬಾಂಧವರು ಉಪಸ್ಥಿತರಿದ್ದರು.