ಸಾರಾಂಶ
ಬೆಂಗಳೂರು : ಬುದ್ಧಿಮಾಂದ್ಯತೆ(ಡಿಮೆನ್ಷಿಯಾ)ಯು ಸಂಕೀರ್ಣ ಆರೋಗ್ಯ ಸಮಸ್ಯೆಯಾಗಿದ್ದು ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.
ಸರ್ಕಾರೇತರ ಸಂಸ್ಥೆ ಡಿಮೆನ್ಷಿಯಾ ಇಂಡಿಯಾ ಅಲೈಯನ್ಸ್(ಡಿಐಎ)ನಿಂದ ಶುಕ್ರವಾರ ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್.ಟಾಟಾ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ‘ಡೆಮ್‌ಕಾನ್-2024’ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯ ಕ್ಷೇತ್ರದಲ್ಲಿರುವ ಆಧುನಿಕ ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಬುದ್ಧಿಮಾಂದ್ಯತೆಗೆ ಚಿಕಿತ್ಸೆ ನೀಡಬೇಕಿದೆ. ಬುದ್ಧಿಮಾಂದ್ಯತೆಯು ಕೇವಲ ಒಂದು ರೋಗವಾಗಿಲ್ಲ. ಆ ಕುಟುಂಬದ ಮೇಲೆ ಪ್ರತೀಕೂಲ ಪರಿಣಾಮ ಉಂಟು ಮಾಡುವ ಸಂಕೀರ್ಣ ಆರೋಗ್ಯ ಸಮಸ್ಯೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ನೆನಪಿನ ಶಕ್ತಿಗೆ ಕುತ್ತು: ಬುದ್ಧಿಮಾಂದ್ಯತೆಯು ನೆನಪಿನ ಶಕ್ತಿಗೆ ಕುಂದು ತರುತ್ತದೆ. ಮೆದುಳಿನ ಕಾರ್ಯಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಉಂಟು ಮಾಡಲಿದ್ದು ನರವ್ಯವಸ್ಥೆಯು ಮೇಲೆ ದುಷ್ಪರಿಣಾಮ ಬೀರಲಿದೆ. ಭವಿಷ್ಯದಲ್ಲಿ ವೈದ್ಯಕೀಯ ಕ್ಷೇತ್ರವು ಬುದ್ಧಿಮಾಂದ್ಯತೆಯ ಬಗ್ಗೆ ಬಗ್ಗೆ ಸಾಕಷ್ಟು ಪ್ರಯೋಗಗಳನ್ನು ಕೈಗೊಳ್ಳಲಿರುವುದು ಭರವಸೆ ಮೂಡಿಸಿದೆ. ಆದರೂ ಬುದ್ಧಿಮಾಂದ್ಯತೆ ಇರುವವರು ಮತ್ತು ಅವರ ಕುಟುಂಬದ ಅಗತ್ಯತೆಗಳನ್ನು ಪೂರೈಸಬೇಕಿದೆ ಎಂದು ತಿಳಿಸಿದರು.
ಪರಿಹಾರ ಚರ್ಚಿಸಲು ಸಹಕಾರಿ: ಡಿಮೆನ್ಷಿಯಾ ಇಂಡಿಯಾ ಅಲೈಯನ್ಸ್ ಅಧ್ಯಕ್ಷೆ ಡಾ.ರಾಧಾ ಎಸ್.ಮೂರ್ತಿ ಮಾತನಾಡಿ, ಬುದ್ಧಿಮಾಂದ್ಯತೆಯ ಬಗ್ಗೆ ಜಾಗೃತಿ, ಶೀಘ್ರ ರೋಗ ನಿರ್ಣಯ, ಸಂಶೋಧನೆ ಮತ್ತು ಆರೈಕೆಯಲ್ಲಿ ಅಂತರವನ್ನು ಕಡಿಮೆ ಮಾಡುವ ಉದ್ದೇಶವನ್ನು ಸಂಸ್ಥೆ ಹೊಂದಿದ್ದು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದೇವೆ. ಆರೈಕೆದಾರರು, ಆರೋಗ್ಯ ವೃತ್ತಿಪರರು, ಸಂಶೋಧಕರು, ನೀತಿ ನಿರೂಪಕರು ಒಂದೆಡೆ ಸೇರಿ ಪರಿಹಾರೋಪಾಯ ಚರ್ಚಿಸಲು ಸಮ್ಮೇಳನ ಸಹಕಾರಿಯಾಗಿದೆ ಎಂದು ವಿವರಿಸಿದರು. ಮಾನವ ನಡವಳಿಕೆ ಮತ್ತು ಸಂಬಂಧಿತ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ.ರಾಜೇಂದರ್ ಕೆ.ಧಮಿಜ ಮತ್ತಿತರರಿದ್ದರು.