ಕಾಡು ಹಂದಿ ಬೇಟೆಗೆ ಬಂದು ಉರುಳಲ್ಲಿ ಸಿಲುಕಿದ್ದ ಚಿರತೆ ಸೆರೆ

| Published : Nov 30 2024, 12:52 AM IST

ಕಾಡು ಹಂದಿ ಬೇಟೆಗೆ ಬಂದು ಉರುಳಲ್ಲಿ ಸಿಲುಕಿದ್ದ ಚಿರತೆ ಸೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಚನ್ನೇಗೌಡನ ದೊಡ್ಡಿ ಸಮೀಪದ ಹೊರವಲಯದ ಕಬ್ಬಿನ ಗದ್ದೆಯಲ್ಲಿ ಶುಕ್ರವಾರ ಮುಂಜಾನೆ ಕಾಡು ಹಂದಿ ಬೇಟೆಯಾಡಲು ಬಂದು ತಂತಿ ಉರುಳಿನಲ್ಲಿ ಸಿಲುಕಿ ಆತಂಕ ಸೃಷ್ಟಿಸಿದ್ದ ಚಿರತೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದ ಚನ್ನೇಗೌಡನ ದೊಡ್ಡಿ ಸಮೀಪದ ಹೊರವಲಯದ ಕಬ್ಬಿನ ಗದ್ದೆಯಲ್ಲಿ ಶುಕ್ರವಾರ ಮುಂಜಾನೆ ಕಾಡು ಹಂದಿ ಬೇಟೆಯಾಡಲು ಬಂದು ತಂತಿ ಉರುಳಿನಲ್ಲಿ ಸಿಲುಕಿ ಆತಂಕ ಸೃಷ್ಟಿಸಿದ್ದ ಚಿರತೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದಾಗ ನೂರಾರು ಸಂಖ್ಯೆಯಲ್ಲಿ ಸ್ಥಳೀಯರು ಆಗಮಿಸಿದ್ದರಿಂದ ಕಾರ್ಯಾಚರಣೆಗೆ ಕೆಲಕಾಲ ಅಡ್ಡಿಯಾಗಿತ್ತು. ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು, ಜನರ ಗುಂಪು ಚದುರಿಸಿ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟರು.

ಎಂ.ಸಿ. ನಾಗೇಶ್ ಅವರ ತೋಟದ ಮನೆ ಹಿಂಭಾಗದ ದೇಶಹಳ್ಳಿ ರಸ್ತೆಯ ಕೊಲ್ಲಿ ಸೇತುವೆ ಸಮೀಪದ ನಾಗೇಂದ್ರರ ಕಬ್ಬಿನ ಗದ್ದೆಯಲ್ಲಿ ಮುಂಜಾನೆ ಕಾಡು ಹಂದಿ ಬೇಟೆಯಾಡಲು ಬಂದ ಚಿರತೆ ತಂತಿಯ ಬೇಲಿ ಉರುಳಿಗೆ ಸಿಲುಕಿ ಒದ್ದಾಡುತ್ತಿತ್ತು. ನಾಗೇಂದ್ರ ಅವರ ಕಬ್ಬಿನ ಗದ್ದೆ ಪಕ್ಕದ ರೈತನೋರ್ವ ತನ್ನ ಜಮೀನಿನ ಕಡೆ ಹೋದಾಗ ಗದ್ದೆಯಲ್ಲಿ ಸಿಲುಕಿದ್ದ ಚಿರತೆ ಗುಟುರು ಹಾಕಿದೆ.

ಇದರಿಂದ ಭಯಭೀತನಾದ ರೈತ ಸ್ಥಳದಿಂದ ಪರಾರಿಯಾಗಿ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾನೆ. ಈ ಬಗ್ಗೆ ಗ್ರಾಮಸ್ಥರು ಬೆಸಗರಹಳ್ಳಿ ಪೊಲೀಸರ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ. ನಂತರ ಸ್ಥಳಕ್ಕೆ ಧಾವಿಸಿದ ಮಂಡ್ಯ ಎಸಿಎಫ್ ಮಹದೇವಸ್ವಾಮಿ. ಆರ್‌ಎಫ್‌ಒ ಗವಿಯಪ್ಪ. ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ಗೋವಿಂದು. ಪಶುವೈದ್ಯಾಧಿಕಾರಿ ಮುಜೀಬ್. ಅರವಳಿಕೆ ತಜ್ಞ ಅಕ್ರಮ್. ಡಿ ಆರ್ ಎಫ್ ಒ ಕಾಂತರಾಜು. ಮುರಳಿ ನಾಯಕ್. ಅರಣ್ಯ ಇಲಾಖೆ ಸಿಬ್ಬಂದಿ ಸುದರ್ಶನ್ ಮತ್ತು ಚಿನ್ನಪ್ಪ ಅವರ ತಂಡ ಸುಮಾರು ನಾಲ್ಕು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಅರವಳಿಕೆ ಚುಚ್ಚುಮದ್ದು ನೀಡಿ ಚಿರತೆಯನ್ನು ಸೆರೆಹಿಡಿಯುವಲ್ಲಿ ಸಫಲರಾಗಿದ್ದಾರೆ.

ಸೆರೆ ಹಿಡಿದ ಚಿರತೆಯನ್ನು ಮೈಸೂರು ಸಮೀಪದ ಕೂರ್ಗಳ್ಳಿ ಪ್ರಾಣಿಗಳ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿದೆ. ಚನ್ನೇಗೌಡನ ದೊಡ್ಡಿ ಹೊರವಲಯದ ರಸ್ತೆ, ವಳೆಗೆರೆಹಳ್ಳಿ ಮತ್ತು ದೇಶಹಳ್ಳಿ ಹಾಗೂ ನಂಜಪ್ಪ ಕಲ್ಯಾಣ ಮಂಟಪದ ರಸ್ತೆಯಲ್ಲಿ ರಾತ್ರಿ ವೇಳೆ ಓಡಾಡುವ ಹಾಗೂ ಮುಂಜಾನೆ ವಾಯು ವಿಹಾರ ನಡೆಸುವ ಜನರು ಆದಷ್ಟು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.