ಸಾರಾಂಶ
ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಗೆ ನ್ಯಾಯಾಧೀಶರಿಂದ ಚಾಲನೆ । ಕಾನೂನು ಅರಿವು ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಎಲ್ಲಾ ನಾಗರಿಕರಿಗೆ ಸಮಂಜಸವಾದ ನ್ಯಾಯಯುತ ಮತ್ತು ನ್ಯಾಯದ ಕಾರ್ಯವಿಧಾನವನ್ನು ಖಚಿತಪಡಿಸಿಕೊಳ್ಳಲು ಜಾಗೃತಿ ಮೂಡಿಸುವ ಅಗತ್ಯವಿದೆ. ಅದಕ್ಕಾಗಿ ನ.9ರಂದು ರಾಷ್ಟ್ರೀಯ ಕಾನೂನು ಸೇವೆಗಳ ದಿನವನ್ನು ಆಚರಿಸಲಾಗುತ್ತಿದೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಸುನಿತಾ ಹೇಳಿದರು .
ಪಟ್ಟಣದ ವಸಂತ ಕುಮಾರಿ ಬಾಳಿಕ ಪದವಿಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂಘ, ಸರ್ಕಾರಿ ಎಸ್ವಿಕೆ ಬಾಲಕಿಯರ ಪದವಿಪೂರ್ವ ಕಾಲೇಜು ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನ ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಎಲ್ಲರೂ ಕಾನೂನು ಅರಿತು ಗೌರವಿಸುವ ಕೆಲಸ ಮಾಡಬೇಕು, ಸಮಾಜದ ದುರ್ಬಲ ವರ್ಗಗಳಿಗೆ ಉಚಿತ ಮತ್ತು ಸಮರ್ಥ ಕಾನೂನು ಸೇವೆಗಳನ್ನು ಒದಗಿಸಲು ರಾಷ್ಟ್ರವ್ಯಾಪಿ ಏಕರೂಪದ ಜಾಲವನ್ನು ಸ್ಥಾಪಿಸಲು 1995ರಿಂದ ಕಾನೂನು ಸೇವೆಗಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಕಾನೂನಿನ ಸಹಾಯದ ಅನುಸ್ಥಿತಿಯಲ್ಲಿ ಅನ್ಯಾಯವು ಕಾರಣವಾಗಬಹುದು. ಅನ್ಯಾಯದ ಪ್ರತಿಯೊಂದು ಕ್ರಿಯೆಯೂ ಪ್ರಜಾಪ್ರಭುತ್ವದ ಅಡಿಪಾಯವನ್ನು ನಾಶಪಡಿಸುತ್ತದೆ, ಈ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಲ್ಲಿ ಕಾನೂನು ಸಾಕ್ಷರತಾ ಕ್ಲಬ್‌ಗಳನ್ನು ಪ್ರಾರಂಭ ಮಾಡಿ ಕಾನೂನು ಸೇವೆಗಳ ಸಮಿತಿ ಮೂಲಕ ವಿದ್ಯಾರ್ಥಿಗಳಲ್ಲಿ ಕಾನೂನು ಅರಿವನ್ನು ಮೂಡಿಸಲಾಗುತ್ತಿದೆ. ಲೋಕ ಅದಾಲತ್ ಕಾರ್ಯಕ್ರಮಗಳು ಹಾಗೂ ಮಧ್ಯಸ್ಥಿಕೆ ಪ್ರಕ್ರಿಯೆ ಮೂಲಕವೂ ವ್ಯಾಜ್ಯ ಸಹ ನ್ಯಾಯಾಲಯದ ಮೇಲಿನ ವ್ಯಾಜ್ಯಗಳ ಅವಧಿಯನ್ನು ಕಡಿಮೆ ಮಾಡಲು ನಿರಂತರ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ ಉಚಿತ ಕಾನೂನು ಅರಿವು ಮತ್ತು ನೆರವು ಯೋಜನೆಗಳ ಮಹತ್ವ ಹಾಗೂ ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವ ಕಾರ್ಯವಿಧಾನಗಳ ಬಗ್ಗೆ ಹಿರಿಯ ವಕೀಲ ವೆಂಕಟಚಲ ಮಾಹಿತಿ ನೀಡಿದರು.ಈ ವೇಳೆ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ನಂದಿನಿ, ವಸಂತ ಕುಮಾರಿ ಬಾಲಿಕ ಪದವಿಪೂರ್ವ ಕಾಲೇಜಿನ ಪ್ರಭಾರ ಪ್ರಾಂಶಪಾಲ ಜೋಸೆಫ್ ಅಲೆಕ್ಸಾಂಡರ್, ವಕೀಲರ ಸಂಘದ ಕಾರ್ಯದರ್ಶಿ ಸಿ.ಬಿ.ಮಹೇಶ್ ಕುಮಾರ್ ಇದ್ದರು.