ಜನಸಂಖ್ಯೆಯ ಶೇ.1ರಷ್ಟು ಜನರು ರಕ್ತದಾನ ಮಾಡಿದರೇ ಸಾಕಾಗುತ್ತದೆ. ಆದರೆ, ಕೊಪ್ಪಳ ಜಿಲ್ಲೆಯಲ್ಲಿ ಶೇ.001 ರಷ್ಟು ರಕ್ತದಾನಿಗಳು ಇಲ್ಲ
ಕೊಪ್ಪಳ: ಜಿಲ್ಲೆಯಲ್ಲಿ ರಕ್ತದ ಬೇಡಿಕೆ ಹೆಚ್ಚುತ್ತಿದ್ದು, ಅದಕ್ಕೆ ಅನುಗುಣವಾಗಿ ರಕ್ತದಾನಿಗಳ ಸಂಖ್ಯೆ ಹೆಚ್ಚಳ ಮಾಡುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಡಾ. ಸುರೇಶ ಬಿ.ಇಟ್ನಾಳ ಹೇಳಿದರು.
ಕೊಪ್ಪಳ ನಗರದ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಕೊಪ್ಪಳ ಶಾಖೆಯ 2024-25ನೇ ಸಾಲಿನ ವಾರ್ಷಿಕ ಸಾಮಾನ್ಯ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಡಿಯಲ್ಲಿ ನಡೆಯುತ್ತಿರುವ ಬ್ಲಡ್ ಬ್ಯಾಂಕ್ ನಿಂದ ಬಹಳ ಜನರಿಗೆ ಅನುಕೂಲವಾಗುತ್ತಿದೆ. ನಿರೀಕ್ಷೆ ಮೀರಿ ಶ್ರಮಿಸಿ ರಕ್ತ ಸಂಗ್ರಹಿಸಲಾಗುತ್ತದೆ. ಆದರೆ, ಈ ಸಮಸ್ಯೆ ನೀಗಿಸಲು ನಾವು ರಕ್ತದಾನಿಗಳ ಸಂಖ್ಯೆ ಹೆಚ್ಚಳ ಮಾಡಬೇಕಾಗಿದೆ. ಇದಕ್ಕಾಗಿ ರೂಪಿತ ಮನೆಗೊಬ್ಬ ರಕ್ತದಾನಿ ಯೋಜನೆ ಪರಿಣಾಮಕಾರಿಯಾಗಿ ಜಾರಿ ಮಾಡುವ ದಿಸೆಯಲ್ಲಿ ಪ್ರಯತ್ನ ಮಾಡೋಣ.
ಜನಸಂಖ್ಯೆಯ ಶೇ.1ರಷ್ಟು ಜನರು ರಕ್ತದಾನ ಮಾಡಿದರೇ ಸಾಕಾಗುತ್ತದೆ. ಆದರೆ, ಕೊಪ್ಪಳ ಜಿಲ್ಲೆಯಲ್ಲಿ ಶೇ.001 ರಷ್ಟು ರಕ್ತದಾನಿಗಳು ಇಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.ರೆಡ್ ಕ್ರಾಸ್ ಸಂಸ್ಥೆ ಸಾಕಷ್ಟು ಮಾನವೀಯ ಕಲ್ಯಾಣದ ಕಾರ್ಯ ಮಾಡುತ್ತಿದೆ. ಯುತ್ ರೆಡ್ ಕ್ರಾಸ್, ಜೂನಿಯರ್ ರೆಡ್ ಕ್ರಾಸ್ ನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಬೇಕಾಗಿದೆ ಎಂದರು.
ವಾರ್ಷಿಕ ವರದಿ ಬಿಡುಗಡೆ ಮಾಡಿದ ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮತ್ತು ರೆಡ್ ಕ್ರಾಸ್ ಸಂಸ್ಥೆಯ ಕೊಪ್ಪಳ ಶಾಖೆಯ ಉಪಾಧ್ಯಕ್ಷ ವರ್ಣೀತ್ ನೇಗಿ ಮಾತನಾಡಿ, ಕೊಪ್ಪಳ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅದು ಇನ್ನು ಹೆಚ್ಚು ಹೆಚ್ಚು ಆಗಬೇಕಾಗಿದೆ ಎಂದರು.ರಾಜ್ಯಕಾರ್ಯಕಾರಿ ಸಮಿತಿ ಸದಸ್ಯ ಶರದ್ ರೋಡಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೊಪ್ಪಳ ರೆಡ್ ಕ್ರಾಸ್ ಸಂಸ್ಥೆ ಇತರ ಜಿಲ್ಲೆಗಳಿಂದ ಹತ್ತು ಹೆಜ್ಜೆ ಮುಂದೆ ಇದೆ ಎಂದು ಅಂದುಕೊಂಡಿದ್ದೇವು, ಆದರೂ ಅದು ಇಲ್ಲಿಗೆ ಬಂದ ಮೇಲೆ ಗೊತ್ತಾಯಿತು ನೂರು ಹೆಜ್ಜೆ ಮುಂದೆ ಎಂದು ಅಭಿಪ್ರಾಯಪಟ್ಟರು.
ಎಲ್ಲರೂ ಯುವ ಉತ್ಸಾಹಿಗಳಾಗಿದ್ದಾರೆ. ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಕೊಪ್ಪಳದಲ್ಲಿ ರೆಡ್ ಕ್ರಾಸ್ ಸಂಸ್ಥೆ ಬೆಳೆಯುತ್ತಿರುವುದನ್ನು ನೋಡಿದರೇ ಅದು ಅಕ್ಕಪಕ್ಕದ ಜಿಲ್ಲೆ ಬೆಳೆಸುವಷ್ಟು ಶಕ್ತಿಯುತವಾಗಿದೆ ಎಂದು ಹೇಳಿದರು.ರೆಡ್ ಕ್ರಾಸ್ ಸಂಸ್ಥೆಯ ಕೊಪ್ಪಳ ಶಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಶಾಖೆಯ ಉಪಸಭಾಪತಿ ಡಾ.ಶ್ರೀನಿವಾಸ ಹ್ಯಾಟಿ ವಾರ್ಷಿಕ ವರದಿ ವಾಚನ ಮಾಡಿದರು. ಗೌರವ ಕೋಶಾಧ್ಯಕ್ಷ ಸುಧೀರ ಅವರಾದಿ ಲೆಕ್ಕಪತ್ರ ವಾಚನ ಮಾಡಿದರು. ಕೊಪ್ಪಳ ಜಿಲ್ಲಾ ಶಾಖೆಯ ಸಭಾಪತಿ ಸೋಮರಡ್ಡಿ ಅಳವಂಡಿ ಪ್ರಾಸ್ಥಾವಿಕವಾಗಿ ಮಾತನಾಡಿ ರೆಡ್ ಕ್ರಾಸ್ ಕೊಪ್ಪಳ ಶಾಖೆಯ ಸಾಧನೆ ಹಾಗೂ ಕನಸುಗಳ ಕುರಿತು ವಿವರಿಸಿದರು.
ಮಹಾಪೋಷಕರಾದ ಶ್ರೀನಿವಾಸ ಗುಪ್ತಾ, ಬಸವರಾಜ ಪುರದ, ಬಿ.ಎಸ್.ಪಾಟೀಲ್, ಆರ್.ಬಿ.ಪಾನಘಂಟಿ, ಎಸ್.ಆರ್.ಪಾಟೀಲ್, ಸುರೇಶ ಭೂಮರಡ್ಡಿ, ಕೃಷ್ಣಾ ಉಕ್ಕುಂದ, ಕೃಷ್ಣಮೂರ್ತಿ, ರಾಘವೇಂದ್ರ ಪೋತೆದಾರ, ರಾಮಣ್ಣ ಹಳ್ಳಿಗುಡಿ ಅವರನ್ನು ಹಾಗೂ ಹೆಚ್ಚು ರಕ್ತದಾನ ಶಿಬಿರ ಆಯೋಜನೆ ಮಾಡಿದ ಸಂಘ, ಸಂಸ್ಥೆ, ಕಾಲೇಜು, ಗ್ರಾಪಂ ಪ್ರತಿನಿಧಿಗಳನ್ನು ಮತ್ತು ಹೆಚ್ಚು ಬಾರಿ ರಕ್ತದಾನ ಮಾಡಿದ ರಕ್ತದಾನಿಗಳನ್ನು ಸನ್ಮಾನಿಸಲಾಯಿತು.ಉಪಸಭಾಪತಿ ಡಾ.ಸಿ.ಎಸ್. ಕರಮುಡಿ, ಮಂಜುನಾಥ ಸಜ್ಜನ, ಡಾ.ಗವಿ ಪಾಟೀಲ್, ಡಾ. ಶಿವನಗೌಡ ದಾನರಡ್ಡಿ ಇದ್ದರು. ಮಲ್ಲಿಕಾ ಪ್ರಾರ್ಥನಾ ಗೀತೆ ಹಾಡಿದರು. ರಮೇಶ ತುಪ್ಪದ ಸ್ವಾಗತಿಸಿದರೇ ರಾಜೇಶ ಯಾವಗಲ್ ಮತ್ತು ಡಾ.ಶಿವನಗೌಡ ನಿರೂಪಿಸಿದರು. ಕೊನೆಯಲ್ಲಿ ಡಾ.ರವಿ ದಾನಿ ವಂದಿಸಿದರು.