ಯುಗಾದಿಗೆ ರಾಜ್ಯ ಸರ್ಕಾರದಿಂದ ಬೇವಿನ ಉಡುಗೊರೆ : ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶ ಗೌಡ

| N/A | Published : Mar 30 2025, 03:02 AM IST / Updated: Mar 30 2025, 09:11 AM IST

ಯುಗಾದಿಗೆ ರಾಜ್ಯ ಸರ್ಕಾರದಿಂದ ಬೇವಿನ ಉಡುಗೊರೆ : ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಯುಗಾದಿ ಹಬ್ಬಕ್ಕೆ ಬೆಲೆ ಏರಿಕೆಯ ಬರೆಯನ್ನು ಹಾಕಿರುವ ಸರ್ಕಾರ ಬಡವರ ಬಗ್ಗೆ ಯಾವುದೇ ಕಾಳಜಿಯಿಲ್ಲ. ಪಂಚ ಗ್ಯಾರಂಟಿ ಯೋಜನೆಗಳ ಹೊರೆಯನ್ನು ರಾಜ್ಯದ ಜನರು ನೇರವಾಗಿ ಈಗ ಎದುರಿಸುತ್ತಿರುವುದರ ಸಂಕೇತವೇ ಬೆಲೆ ಏರಿಕೆ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶ ಗೌಡ ಟೀಕಿಸಿದ್ದಾರೆ.

 ತುಮಕೂರು ಯುಗಾದಿ ಹಬ್ಬಕ್ಕೆ ಬೆಲೆ ಏರಿಕೆಯ ಬರೆಯನ್ನು ಹಾಕಿರುವ ಸರ್ಕಾರ ಬಡವರ ಬಗ್ಗೆ ಯಾವುದೇ ಕಾಳಜಿಯಿಲ್ಲ. ಪಂಚ ಗ್ಯಾರಂಟಿ ಯೋಜನೆಗಳ ಹೊರೆಯನ್ನು ರಾಜ್ಯದ ಜನರು ನೇರವಾಗಿ ಈಗ ಎದುರಿಸುತ್ತಿರುವುದರ ಸಂಕೇತವೇ ಬೆಲೆ ಏರಿಕೆ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶ ಗೌಡ ಟೀಕಿಸಿದ್ದಾರೆ. 

ಯುಗಾದಿ ಬೇವು ಬೆಲ್ಲದ ಹಬ್ಬ. ಆದರೆ, ಈ ಸರ್ಕಾರ ರಾಜ್ಯದ ಜನರಿಗೆ ಕೇವಲ ಬೇವು ಕೊಟ್ಟು ಕಹಿ ತಿಂದು ಹಬ್ಬ ಆಚರಿಸಿ ಎಂದು ಹೇಳಿದೆ. ಯುಗಾದಿಯ ಮರುದಿನ ಏಪ್ರಿಲ್‌ 1 ರಿಂದ ಹಾಲಿನ ಬೆಲೆ ಏರಿಕೆ ಜಾರಿಗೆ ಬರಲಿದೆ. ಜನರನ್ನು ಹೇಗೆ ಸಿದ್ದರಾಮಯ್ಯ ಸರ್ಕಾರ ಏಪ್ರಿಲ್‌ 1 ರ ಮೂರ್ಖರ ದಿನವೇ ಮೂರ್ಖರನ್ನಾಗಿ ಮಾಡುತ್ತಿದೆ ಎನ್ನುವುದಕ್ಕೆ ಇದು ನಿದರ್ಶನ ಎಂದರು.

ಈ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಎರಡು ವರ್ಷ ಆಗಿಲ್ಲ. ಇದರೊಳಗೆ ಪೆಟ್ರೋಲ್‌ ಮತ್ತು ಡೀಸಲ್‌ ದರ ಏರಿಸಿದರು, ವಿದ್ಯುತ್‌ ದರ ಎರಡು ಸಾರಿ ಏರಿಸಿದರು. ಈಗ ಒಂದು ಯೂನಿಟ್‌ ವಿದ್ಯುತ್‌ಗೆ 36 ಪೈಸೆ ಹೆಚ್ಚಿಗೆ ಕೊಡಬೇಕಾಗಿದೆ. 

ಹಾಲಿನ ದರ ಮೂರು ಸಾರಿ ಏರಿಸಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.ಇಡೀ ದೇಶಕ್ಕೆ ಸಿದ್ದರಾಮಯ್ಯನವರು ಚುನಾವಣೆ ಗೆಲ್ಲುವ ಒಂದು ತಪ್ಪು ಮಾದರಿ ಹಾಕಿಕೊಟ್ಟರು. ಅವರು ಇತಿಹಾಸದಲ್ಲಿ ಉಳಿಯುವುದು ಒಂದು ಸಮೃದ್ಧ ರಾಜ್ಯವನ್ನು ಹೇಗೆ ದಿವಾಳಿ ಮಾಡಬೇಕು ಎಂಬ ʻಸಿದ್ದರಾಮಯ್ಯ ಎಕನಾಮಿಕ್ಸ್‌ʼಗಾಗಿ ಎಂದರು.4 ಲಕ್ಷ ಕೋಟಿ ರೂಪಾಯಿಗಳ ಬಜೆಟ್‌ ಮಂಡಿಸಿರುವ ಮುಖ್ಯಮಂತ್ರಿಗಳಿಗೆ 50 ಸಾವಿರ ಕೋಟಿ ರೂಪಾಯಿಗಳ ಗ್ಯಾರಂಟಿಗಳ ವೆಚ್ಚವನ್ನು ನಿಭಾಯಿಸಲು ಆಗುತ್ತಿಲ್ಲ. 

ಈ ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸದ ಮೇಲೆ ಹೊರೆ ಆಗಿಲ್ಲ ಎನ್ನುವುದಾದರೆ ಆ ಮೊತ್ತವನ್ನು ಅವರು ಸಕಾಲದಲ್ಲಿ ಬಿಡುಗಡೆ ಮಾಡಬೇಕಿತ್ತು. ಗೃಹಲಕ್ಷ್ಮೀ ಯೋಜನೆಯ ಹಣ ಈ ತಿಂಗಳ 31 ರ ನಂತರ ಪಾವತಿ ಆಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದ್ದಾರೆ. ಇದು ಬೊಕ್ಕಸದಲ್ಲಿ ಹಣ ಇಲ್ಲ ಎನ್ನುವುದನ್ನೇ ತೋರಿಸುತ್ತದೆ ಎಂದರು.

ಜನರಿಗೆ ಅತ್ಯಂತ ಅಗತ್ಯವಾದ ಮತ್ತು ಕನಿಷ್ಠವಾದ ಆರೋಗ್ಯ ಸೇವೆ ಕೊಡುವ ಯೋಗ್ಯತೆ ಈ ಸರ್ಕಾರಕ್ಕೆ ಇಲ್ಲ. ಬಾಣಂತಿಯರು ಆಸ್ಪತ್ರೆಗಳಲ್ಲಿ ಸಾಯುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕುಸಿದು ಹೋಗಿದೆ, ಆಡಳಿತ ಯಂತ್ರ ಶಿಥಿಲವಾಗಿದೆ. ಆಂತರಿಕ ಬಿಕ್ಕಟ್ಟು ಮೇರೆ ಮೀರಿದೆ. ಕಾಂಗ್ರೆಸ್‌ ಪಕ್ಷ ಮಾತು ಎತ್ತಿದರೆ ಹೈಕಮಾಂಡ್‌ ಎನ್ನುತ್ತದೆ. ಈಗ ಆ ಹೈಕಮಾಂಡ್‌ ಎಲ್ಲಿದೆ ಎಂದು ನಾವು ಕಂದೀಲು ಹಿಡಿದುಕೊಂಡು ನೋಡಬೇಕಾಗಿದೆ ಎಂದರು.ಬೆಲೆ ಏರಿಕೆ ಕೈ ಬಿಡದೇ ಇದ್ದರೆ ರಾಜ್ಯ ಬಿಜೆಪಿ ಮತ್ತು ಮಿತ್ರ ಪಕ್ಷ ಜೆಡಿಎಸ್‌ ಯುಗಾದಿ ಹಬ್ಬ ಮುಗಿದ ಕೂಡಲೇ ಬೀದಿಗೆ ಇಳಿದು ಹೋರಾಟ ಮಾಡುವುದಾಗಿ ಅವರು ಎಚ್ಚರಿಸಿದ್ದಾರೆ.