- ಎರಡು ಪರೀಕ್ಷಾ ಕೇಂದ್ರದಲ್ಲಿ 1,421 ವಿದ್ಯಾರ್ಥಿಗಳಿಗೆ ಪರೀಕ್ಷೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಮರು ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು ಭಾನುವಾರ ಚಿಕ್ಕಮಗಳೂರಿನ ಎರಡು ಪರೀಕ್ಷಾ ಕೇಂದ್ರದಲ್ಲಿ 1,421 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಕಳೆದ ಮೇ ನಲ್ಲಿ ನಡೆಸಲಾದ ಪರೀಕ್ಷೆ ರದ್ದುಗೊಳಿಸಿದ್ದ ಕೇಂದ್ರ ಸರ್ಕಾರ ಭಾನುವಾರ ಮರು ಪರೀಕ್ಷೆ ನಡೆಸಲು ಮುಂದಾಗಿದೆ. ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.15ರ ವರೆಗೆ ನೀಟ್‌ ಮರು ಪರೀಕ್ಷೆ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು 11 ಗಂಟೆಯಿಂದಲೇ ಪರೀಕ್ಷಾ ಕೇಂದ್ರ ಪ್ರವೇಶಕ್ಕೆ ಅವಕಾಶ ನೀಡಲಾ ಗುತ್ತದೆ. ಭದ್ರತಾ ಸಿಬ್ಬಂದಿ ತಪಾಸಣೆ ಮಾಡಲಿದ್ದಾರೆ.

ಈಗಾಗಲೇ ಯಾವ ವಿದ್ಯಾರ್ಥಿಗಳು ಯಾವ ಸಮಯದಿಂದ ಯಾವ ಸಮಯಕ್ಕೆ ಪರೀಕ್ಷಾ ಕೇಂದ್ರ ಪ್ರವೇಶಿಸಬೇಕೆಂದು ಸ್ಪಷ್ಟ ವಾಗಿ ತಿಳಿಸಲಾಗಿದೆ. ಆ ಪ್ರಕಾರ ವಿದ್ಯಾರ್ಥಿಗಳನ್ನು ತಪಾಸಣೆ ಮಾಡಿ ಪರೀಕ್ಷಾ ಕೇಂದ್ರದ ಪ್ರವೇಶಿಸುವುದಕ್ಕೆ ಅವಕಾಶ ನೀಡಲಾಗುತ್ತದೆ. ಮಧ್ಯಾಹ್ನ 1.30ರ ವರೆಗೆ ಮಾತ್ರ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ನೀಡಲಾಗುವುದು. ಒಂದು ನಿಮಿಷ ತಡವಾದರೂ ಅವಕಾಶ ನೀಡುವುದಿಲ್ಲ ಎಂದು ನೀಟ್‌ ಪರೀಕ್ಷೆ ಜಿಲ್ಲಾ ಸಂಯೋಜನಾಧಿಕಾರಿ ಜಗದೀಶ್‌ ನಾಯಕ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.


2 ಪರೀಕ್ಷಾ ಕೇಂದ್ರ 1421 ವಿದ್ಯಾರ್ಥಿ

ಚಿಕ್ಕಮಗಳೂರು ನಗರ ವ್ಯಾಪ್ತಿಯ ಬಸವನಹಳ್ಳಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ನಗರದ ಬೇಲೂರು ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷೆ ನಡೆಯಲಿದೆ. ಬಸವನಹಳ್ಳಿ ಕಾಲೇಜಿನಲ್ಲಿ 581 ವಿದ್ಯಾರ್ಥಿ ಗಳು, ಬೇಲೂರು ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 840 ವಿದ್ಯಾರ್ಥಿಗಳು ಮರು ಪರೀಕ್ಷೆ ಬರೆಯಲಿದ್ದಾರೆ.

60 ಕೊಠಡಿಯಲ್ಲಿ ಪರೀಕ್ಷೆಬಸವನಹಳ್ಳಿ ಕಾಲೇಜಿನಲ್ಲಿ 25 ಕೊಠಡಿ, ಬೇಲೂರು ರಸ್ತೆ ಕಾಲೇಜಿನಲ್ಲಿ 35 ಕೊಠಡಿ ಸೇರಿದಂತೆ 2 ಪರೀಕ್ಷಾ ಕೇಂದ್ರದಲ್ಲಿ ಒಟ್ಟು 60 ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ತಲಾ ಒಂದು ಕೊಠಡಿ ಯಲ್ಲಿ 24 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ತಲಾ ಇಬ್ಬರು ಕೊಠಡಿ ಮೇಲ್ವಿಚಾರಕರನ್ನು ನಿಯೋಜಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ಪೆನ್‌ನಿಂದ ಕುಡಿಯುವ ನೀರಿನವರೆಗೆ ವ್ಯವಸ್ಥೆ ಮಾಡಲಾಗಿದೆ.

ಪೊಲೀಸ್‌ ಭದ್ರತೆಯಲ್ಲಿ ಪರೀಕ್ಷೆ

ಕೇಂದ್ರ ಸರ್ಕಾರ ನೀಟ್‌ ಪರೀಕ್ಷೆಗೆ ಈ ಬಾರಿ ಹೆಚ್ಚಿನ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಬಸವನಹಳ್ಳಿ ಕಾಲೇಜು ಬಳಿ 10, ಬೇಲೂರು ರಸ್ತೆ ಕಾಲೇಜಿಗೆ 18 ಪೊಲೀಸ್‌ ಇಲಾಖೆ ಸಿಬ್ಬಂದಿ ನಿಯೋಜಿಸಿದೆ. ಇನ್ನೂ ಪ್ರಶ್ನೆ ಪತ್ರಿಕೆಯನ್ನು ಲಾಕರ್‌ನಿಂದ ಪರೀಕ್ಷಾ ಕೇಂದ್ರ ತಲುಪಿಸುವುದಕ್ಕೆ ಕೇಂದ್ರ ಮೀಸಲು ಪಡೆ ನಾಲ್ವರು ಯೋಧರನ್ನು ನಿಯೋಜಿಸಲಾಗಿದೆ. ಬ್ಯಾರಿಕೇಡ್‌, ಭದ್ರತಾ ತಪಾಸಣೆಗೆ ಬೇಕಾದ ಸಾಧನಗಳ ಅಳವಡಿಸಲಾಗಿದೆ.

ಜಾಮರ್‌ ಅಳವಡಿಕೆಪರೀಕ್ಷಾ ಕೇಂದ್ರ ಬಳಿ ನೆಟ್‌ವರ್ಕ್‌ ಜಾಮರ್ ಅಳವಡಿಸಲಾಗುತ್ತಿದೆ. ಪರೀಕ್ಷಾ ಕೇಂದ್ರದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಮೊಬೈಲ್‌ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಪರೀಕ್ಷಾ ಕೇಂದ್ರದ ಒಳಗೆ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಇನ್ನು ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೊದಲಾದ ಮೂಲಸೌಕರ್ಯ ಒದಗಿಸಲಾಗಿದೆ.

----ಬಾಕ್ಸ್‌---

ಶನಿವಾರ ಅಣಕು ಪ್ರದರ್ಶನಎರಡೂ ಪರೀಕ್ಷಾ ಕೇಂದ್ರದಲ್ಲಿ ಅಣಕು ಪ್ರದರ್ಶನ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಸೂಚನೆಯಂತೆ ಭಾನುವಾರ ನಗರದ ಎರಡು ಪರೀಕ್ಷಾ ಕೇಂದ್ರದಲ್ಲಿ ಅಣಕು ಪ್ರದರ್ಶನ (ಮಾರ್ಕ್‌ ಡ್ರಿಲ್‌) ನಡೆಸಲಾಯಿತು. ಈ ವೇಳೆ ಸಿಸಿಟಿವಿ ಪರಿಶೀಲನೆ, ಭದ್ರತಾ ಸಿಬ್ಬಂದಿ ಎಲ್ಲೆಲ್ಲಿ ನಿಯೋಜನೆ ಮಾಡಬೇಕು. ತಪಾಸಣೆ ಬಗ್ಗೆ ಪರಿಶೀಲನೆ ನಡೆಸಲಾಯಿತು. ಜತೆಗೆ, ಕೊಠಡಿ ಮೇಲ್ವಿಚಾರಕರಿಗೆ ತರಬೇತಿ ಸಹ ಶನಿವಾರ ನೀಡಲಾಯಿತು. ಪೊಲೀಸ್‌ ಇಲಾಖೆ ಸೇರಿದಂತೆ ಪರೀಕ್ಷೆ ಜವಾಬ್ದಾರಿ ವಹಿಸಿಕೊಂಡಿರುವ ಏಜೆನ್ಸಿಯ ಅಧಿಕಾರಿಗಳು ಖುದ್ದು ಹಾಜರಾಗಿ ಪರಿಶೀಲನೆ ನಡೆಸಿದರು.

-- ಬಾಕ್ಸ್‌ --

ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಕಳದೆ ಮೇ ತಿಂಗಳಿನಲ್ಲಿ ನಡೆದ ನೀಟ್‌ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 1250 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದೀಗ ಮರು ಪರೀಕ್ಷೆಯಲ್ಲಿ 171 ವಿದ್ಯಾರ್ಥಿಗಳು ಹೆಚ್ಚಾಗಿದ್ದು, ಒಟ್ಟು ಸಂಖ್ಯೆ 1421ಕ್ಕೆ ಏರಿಕೆಯಾಗಿದೆ. ಕಳೆದ ಬಾರಿ ಹೊರ ಜಿಲ್ಲೆ ಗಳಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಇದೀಗ ಚಿಕ್ಕಮಗಳೂರಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುವುದಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ, ಸಂಖ್ಯೆ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

---ಕೋಟ್‌---

ನೀಟ್‌ ಮರು ಪರೀಕ್ಷೆಗೆ ಸಂಬಂಧಿಸಿದಂತೆ ಎಲ್ಲಾ ರೀತಿ ಸಿದ್ಧತೆ ನಡೆಸಲಾಗಿದೆ. ಕಳೆದ ಮೂರು ದಿನಗಳಿಂದ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನೀಟ್‌ ಪರೀಕ್ಷೆ ಕುರಿತು ಸಭೆ ನಡೆಸಿ ವ್ಯವಸ್ಥಿತವಾಗಿ ಪರೀಕ್ಷೆ ನಡೆಸಲು ಸಿದ್ಧತೆ ಮಾಡಲಾಗಿದೆ.

- ಜಗದೀಶ್‌ ನಾಯಕ್‌, ನೀಟ್‌ ಮರು ಪರೀಕ್ಷೆಯ ಚಿಕ್ಕಮಗಳೂರು ಜಿಲ್ಲಾ ಸಂಯೋಜಕರು

--ಫೋಟೋ

ಚಿಕ್ಕಮಗಳೂರು ನಗರದ ಬೇಲೂರು ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನೀಟ್‌ ಪರೀಕ್ಷೆಯ ಮೇಲ್ವಿಚಾರಕರಿಗೆ ತರಬೇತಿ ನಡೆಸಲಾಯಿತು.

ಫೋಟೋ

ಭಾನುವಾರ ನೀಟ್‌ ಪರೀಕ್ಷೆ ನಡೆಯುವ ಚಿಕ್ಕಮಗಳೂರಿನ ಬೇಲೂರು ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು.