ಕನ್ನಡಪ್ರಭ ವಾರ್ತೆ ಮಂಡ್ಯ

ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಅದರ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡುವ ಮೂಲಕ ಗೌರವ ಪಡೆದುಕೊಳ್ಳಬೇಕು ಎಂದು ವಾಟಾಳ್ ಪಕ್ಷದ ಮುಖ್ಯಸ್ಥ ವಾಟಾಳ್ ನಾಗರಾಜ್ ಒತ್ತಾಯಿಸಿದರು.

ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಬೇಡಿಕೆ ಈಡೇರಿಸಬೇಕು. ನೀಟ್ ಪರೀಕ್ಷೆಯಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಸುಮಾರು ೨೦ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಇನ್ನೂ ಕಾಣದ ರೀತಿಯಲ್ಲಿ ಮೋಸ ಆಗಿದೆ. ಇದೆಲ್ಲದರ ಹೊಣೆ ಹೊತ್ತು ವಿದ್ಯಾಮಂತ್ರಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ರೈಲು ದುರಂತದಲ್ಲಿ ಸಾಕಷ್ಟು ಮಂದಿ ಸತ್ತುಹೋದರು ಎಂಬ ಕಾರಣಕ್ಕೆ ಹಿಂದೆ ರೈಲ್ವೆ ಸಚಿವರಾಗಿದ್ದ ಲಾಲ್‌ಬಹದ್ದೂರ್ ಶಾಸ್ತ್ರಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಗೌರವಕ್ಕೆ ಪಾತ್ರರಾದರು. ಅದೇ ರೀತಿ ಮಧುಗಿರಿಯಲ್ಲಿ ಪೊಲೀಸ್ ಲಾಕಪ್‌ನಲ್ಲೇ ಮಹಿಳೆ ಮೇಲೆ ಅತ್ಯಾಚಾರ ಆಗಿದೆ ಎಂಬ ಕಾರಣಕ್ಕೆ ನಿಜಲಿಂಗಪ್ಪನವರ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಎಂ.ವಿ.ರಾಮರಾವ್ ಅವರು ಸದನದಲ್ಲೇ ರಾಜೀನಾಮೆ ನೀಡುವ ಮೂಲಕ ಮಾದರಿಯಾದರು. ಅದೇ ರೀತಿ ಕೇಂದ್ರ ಸರ್ಕಾರ ಪ್ರತಿಷ್ಠೆ ಬಿಟ್ಟು ಶಿಕ್ಷಣ ಮಂತ್ರಿಯಿಂದ ರಾಜೀನಾಮೆ ಪಡೆದು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ವಿದ್ಯಾರ್ಥಿಗಳನ್ನೇ ಮುಂದಿಟ್ಟುಕೊಂಡು ಕೆಲವರು ಇಲ್ಲದ ಪಿತೂರಿ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ನಾನು ವಿದ್ಯಾರ್ಥಿಗಳ ಬೆಂಬಲಕ್ಕಿದ್ದೇನೆ. ಅವರ ಚಳವಳಿಯಲ್ಲಿ ಭಾಗವಹಿಸುತ್ತೇನೆ ಎಂದರು.


ಪ್ರಸ್ತುತ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ವಿದೇಶದಿಂದ ತಜ್ಞರನ್ನು ಕರೆಸಿಕೊಂಡು ಪಾಠ ಮಾಡಿಸುತ್ತೇವೆ ಎಂದು ಮೋಸ ಮಾಡಿ ವ್ಯಾಪಾರ ಮಾಡಿಕೊಂಡು ದರೋಡೆಗಿಳಿದಿವೆ. ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡು ಶಿಕ್ಷಣ ಕ್ಷೇತ್ರವನ್ನು ಆಮೂಲಾಗ್ರ ಬದಲಾವಣೆ ಮಾಡುವ ಮೂಲಕ ಸರಿದಾರಿಗೆ ತರಬೇಕು ಎಂದು ಆಗ್ರಹಿಸಿದರು.

ರೈತರ ಮೇಲೆ ಗದಾ ಪ್ರಹಾರ:

ಬಿಡದಿ ಮತ್ತು ಆನೆಕಲ್‌ನಲ್ಲಿ ರೈತರ ಮೇಲೆ ಈ ಸರ್ಕಾರ ಗದಾ ಪ್ರಹಾರ ನಡೆಸುತ್ತಿದೆ. ಇಡೀ ರಾಜ್ಯದ ಮುಕ್ಕಾಲು ಭಾಗ ಮಳೆ ಇಲ್ಲದೆ ರೈತರು ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ಯಾವ ಪುರುಷಾರ್ಥಕ್ಕಾಗಿ ರೈತರ ಜಮೀನು ಕಬಳಿಸಿ ಜನವಿರೋಧಿ ಯೋಜನೆ ರೂಪಿಸುತ್ತಿದ್ದಾರೆ. ರೈತರು, ಸಾರ್ವಜನಿಕರಿಗೆ ಅನುಕೂಲವಾಗುವ ಯೋಜನೆಗಳನ್ನು ರೂಪಿಸಬೇಕು. ರೈತರು, ಬಡ ವ್ಯಾಪಾರಿಗಳಿಗೆ ತೊಂದರೆ ಕೊಡುತ್ತಿರುವ ಮುಖ್ಯಮಂತ್ರಿ, ಸಚಿವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಕನ್ನಡ ಸೇನೆ ಮಂಜುನಾಥ್, ದಸಂಸ ಮುಖಂಡ ಎಂ.ವಿ.ಕೃಷ್ಣ, ಮುಖಂಡರಾದ ಪಂಚೇಗೌಡ, ಪಾರ್ಥಸಾರಥಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.