ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಬಹುದೊಡ್ಡ ಹಗರಣವಾಗಿದ್ದು, ಪರೀಕ್ಷೆ ಎದುರಿಸಿದ್ದ 24 ಲಕ್ಷ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ಪ್ರಶ್ನೆಗಳಿಗೆ ಕೇಂದ್ರ ಸರಕಾರ ಉತ್ತರಿಸಬೇಕಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಒತ್ತಾಯಿಸಿದ್ದಾರೆ.ನಗರದ ರವೀಂದ್ರ ಕಲಾನೀಕೇತನದಲ್ಲಿ ಎಐಡಿಎಸ್‌ಒ,ಎನ್.ಎಸ್.ಯುಐ ಹಾಗೂ ಇತರೆ ಸಂಘ, ಸಂಸ್ಥೆಗಳು ಆಯೋಜಿಸಿದ್ದ ನೀಟ್ ಪರೀಕ್ಷೆಯಲ್ಲಿ ಅಕ್ರಮ-ಮುಂದೇನು ? ಎಂಬ ವಿಷಯದ ಕುರಿತು ಸಮಾಲೋಚನೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೀಟ್ ಪರೀಕ್ಷೆ ಅಕ್ರಮ ಬಯಲಾಗಿರುವ ಹಿನ್ನೆಲೆಯಲ್ಲಿ ಕೇಂದ್ರದ ಮಾನವ ಸಂಪನ್ಮೂಲ ಇಲಾಖೆಯ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ಮರು ನೀಟ್ ಪರೀಕ್ಷೆ ನಡೆಸಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.
ದೇಶದ ಸುಮಾರು 24 ಲಕ್ಷ ಜನ ವಿದ್ಯಾರ್ಥಿಗಳು ವೈದ್ಯಕೀಯ ಸೀಟು ಪಡೆಯುವ ಘನ ಆಶಯದೊಂದಿಗೆ ವರ್ಷಾನುಗಟ್ಟಲೆ ಕಷ್ಟಪಟ್ಟು ಓದಿ, ಪರೀಕ್ಷೆ ಬರೆದಿದ್ದಾರೆ. ಆದರೆ ಪರೀಕ್ಷೆಯಲ್ಲಿ ಕೆಲವೇ ರಾಜ್ಯಗಳ, ಕೋಚಿಂಗ್ ಸೆಂಟರ್‌ಗೆ ಸೇರಿದ ಮಕ್ಕಳು ಪರೀಕ್ಷೆಯಲ್ಲಿ ಮೊದಲ ಸ್ಥಾನ ಬರುವಂತೆ ಮಾಡುವ ಉದ್ದೇಶದಿಂದ ಪ್ರಶ್ನೆ ಪತ್ರಿಕೆಯನ್ನು ಲೀಕ್ ಮಾಡಿ, ಅನುಕೂಲ ಮಾಡಿಕೊಡುವ ಮೂಲಕ ಲಕ್ಷಾಂತರ ಮಕ್ಕಳ ಆತ್ಮವಿಶ್ವಾಸ ಕುಸಿಯುವಂತೆ ಮಾಡಿದೆ. ಇದು ನಿಜಕ್ಕೂ ಅಕ್ಷಮ್ಯ ಅಪರಾಧ. ಈ ವಿಚಾರದಲ್ಲಿ ಪ್ರಧಾನಮಂತ್ರಿಯವರು ಮೌನಕ್ಕೆ ಶರಣಾಗುವ ಬದಲು ಉತ್ತರದಾಯಿತ್ವರಾಗಿ ಮಕ್ಕಳು ಮತ್ತು ಅವರ ಪೋಷಕರ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಪರೀಕ್ಷಾ ಪೇ ಚರ್ಚಾ ರೀತಿ ಪ್ರಧಾನಿಯವರು ನೀಟ್ ಅಕ್ರಮದ ಕುರಿತು ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಬೇಕೆಂದರು.ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ನೀಟ್ ಪರೀಕ್ಷೆಯ ಅಕ್ರಮ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ವ್ಯಕ್ತಿಗಳಿಗೆ ಕಾನೂನಿನ ಅಡಿ ಸಾಕ್ಷಿಗಳ ಕೊರತೆಯಿಂದ ಕಠಿಣ ಶಿಕ್ಷೆಯಾಗುತ್ತಿಲ್ಲ. ಇದರಿಂದಾಗಿ ಇಂತಹ ಅಕ್ರಮಗಳು ಪುನರಾವರ್ತನೆಯಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಪಾವನ ಅಸ್ಪತ್ರೆಯ ವೈದ್ಯೆ ಡಾ.ಪಾವನ ಮಾತನಾಡಿ, ಹಲವಾರು ಬದಲಾವಣೆಗಳ ನಂತರ ಸರಕಾರ ಸಿಇಟಿ ಪರೀಕ್ಷೆಯನ್ನು ಜಾರಿಗೆ ತಂದಿತ್ತು. ಆದರೆ ಒಂದು ದೇಶ, ಒಂದು ಪರೀಕ್ಷೆ ಎಂಬ ಧೋರಣೆಯಿಂದ 2018ರಿಂದ ನೀಟ್ ಪರೀಕ್ಷೆಯನ್ನು ಜಾರಿಗೆ ತಂದು ಎನ್.ಟಿ.ಎ ಎಂಬ ಸಂಸ್ಥೆಗೆ ಪರೀಕ್ಷೆಗೆ ನಡೆಸುವ ಜವಾಬ್ದಾರಿಯನ್ನು ಕೇಂದ್ರ ಸರಕಾರ ನೀಡಿದೆ. ಈ ಹಿಂದಿನ ನೀಟ್ ಪರೀಕ್ಷೆಗಳಲ್ಲಿಯೂ ಅಕ್ರಮ ನಡೆದಿರುವ ಶಂಕೆ ಇದ್ದರೂ ಪುರಾವೆ ದೊರೆತಿರಲಿಲ್ಲ. ಆದರೆ ಈ ವರ್ಷದ ಪರೀಕ್ಷೆಯಲ್ಲಿ ಅಕ್ರಮ ನಡೆಸಿ, ಪುರಾವೆಗಳೊಂದಿಗೆ ಸಿಕ್ಕಿಬಿದ್ದಿದೆ. ಹಾಗಾಗಿ ನೀಟ್ ಪರೀಕ್ಷೆ ರದ್ದುಗೊಳಿಸಿ, ಈ ಹಿಂದಿನಂತೆ ಸಿಇಟಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.ಎಐಡಿಎಸ್ ಒನ ಲಕ್ಕಪ್ಪ, ಕಲ್ಯಾಣಿ, ಮಂಜುಳ ಗೋನಾವರ,ವಕೀಲರಾದ ಪೃಥ್ವಿ ಹಾಲಪ್ಪ ಸೇರಿ ವಿವಿಧ ವಿದ್ಯಾರ್ಥಿಗಳು, ವಿದ್ಯಾರ್ಥಿಗಳಿಗೆ ಆಗುತ್ತಿರುವ ಬಸ್ ತೊಂದರೆ, ಹಾಸ್ಟಲ್ ಸಮಸ್ಯೆ ಸೇರಿದಂತೆ ಹಲವಾರು ವಿಚಾರಗಳ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ನಿವೃತ್ತ ಬಿಇಒ ಕೆಂಚಮಾರಯ್ಯ,ಆಡಿಟರ್ ಸುಲ್ತಾನ್ ಮೊಹಮದ್, ನಿವೃತ್ತ ಪ್ರಾಂಶುಪಾಲ ಸಿ.ಯತಿರಾಜು, ಹೋರಾಟಗಾರರಾದ ಪಂಡಿತ ಜವಾಹರ್ ಸೇರಿ ಹಲವರು ಪಾಲ್ಗೊಂಡಿದ್ದರು.ಎಲ್ಲಾ ಮಕ್ಕಳಿಗೂ ಮರು ಪರೀಕ್ಷೆ ನಡೆಸಿ:
ಮೊದಲಿಗೆ ನೀಟ್ ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ವಾದಿಸುತ್ತಿದ್ದ ಕೇಂದ್ರ ಸರಕಾರ, ಸುಪ್ರಿಂಕೋರ್ಟು ಚಾಟಿ ಬೀಸಿದ ನಂತರ ಆಗಿರುವ ತಪ್ಪನ್ನು ಒಪ್ಪಿಕೊಂಡು, ಗ್ರೆಸ್ ಮಾರ್ಕ್ಸ್ ನೀಡಿರುವ 1536 ಮಕ್ಕಳಿಗೆ ಮಾತ್ರ ಮರುಪರೀಕ್ಷೆ ನಡೆಸುವ ಮಾತುಗಳನ್ನಾಡುತ್ತಿದೆ. ಪ್ರಶ್ನೆಪತ್ರಿಕೆ ಲೀಕ್ ಆಗಿದೆ ಎಂಬುದು ಸಾಭೀತಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಮಕ್ಕಳಿಗೂ ಮರು ಪರೀಕ್ಷೆ ನಡೆಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ವಿದ್ಯಾರ್ಥಿ ಸಂಘಟನೆಗಳ ಜೊತೆ ಸೇರಿ ಪ್ರತಿಭಟನೆ ನಡೆಸುವುದಲ್ಲದೆ, ಇಂದೊಂದು ಆಂದೋಲನವಾಗಿ ಪರಿವರ್ತಿಸಲಾಗುವುದು ಎಂದು ನುಡಿದರು.