ಇಲ್ಲಿ ಕನಿಷ್ಠ ಮೂಲಭೂತ ಸೌಕರ್ಯ ಒದಗಿಸಲು ಪ್ರವಾಸೋದ್ಯಮ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂಬ ಆರೋಪ ಕೇಳಿಬರುತ್ತಿವೆ.
ಕನಿಷ್ಠ ಮೂಲಭೂತ ಸೌಕರ್ಯ ಒದಗಿಸಲು ಪ್ರವಾಸೋದ್ಯಮ ಇಲಾಖೆ ಸಂಪೂರ್ಣ ವಿಫಲ: ಆರೋಪ
ರಾಘು ಕಾಕರಮಠಕನ್ನಡಪ್ರಭ ವಾರ್ತೆ ಅಂಕೋಲಾ
ತಾಲೂಕಿನ ಅಚವೆ ಗ್ರಾಪಂ ವ್ಯಾಪ್ತಿಯ ವಿಭೂತಿ ಜಲಪಾತ ಇಂದು ಪ್ರವಾಸಿಗರ ಹಾಟ್‌ಸ್ಪಾಟ್ ಆಗಿದೆ. ಇಲ್ಲಿ ಕನಿಷ್ಠ ಮೂಲಭೂತ ಸೌಕರ್ಯ ಒದಗಿಸಲು ಪ್ರವಾಸೋದ್ಯಮ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂಬ ಆರೋಪ ಕೇಳಿಬರುತ್ತಿವೆ. ಸೌಕರ್ಯಗಳ ಕೊರತೆಯಿಂದಾಗಿ ಪ್ರವಾಸಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಇದು ಆಕ್ರೋಶಕ್ಕೂ ಕಾರಣವಾಗುತ್ತಿದೆ.ಯಾಣ ಪ್ರದೇಶದ ಹತ್ತಿರವಿರುವ ಈ ನಿಸರ್ಗ ಸೊಬಗಿಗೆ ಕಿರೀಟದಂತಿರುವ ಈ ಜಲಪಾತವನ್ನು ವೀಕ್ಷಿಸಲು ರಾಜ್ಯದ ವಿವಿಧ ಭಾಗಗಳ ಜೊತೆಗೆ ಹೊರ ರಾಜ್ಯಗಳಿಂದಲೂ ತಂಡೋಪತಂಡವಾಗಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ವಿಭೂತಿ ಜಲಪಾತದ ಕೆಳಭಾಗಕ್ಕೆ ಇಳಿದು ನೀರಿನಲ್ಲಿ ಈಜಾಡಿ ಸಂತೋಷ ಪಡುವ ಅವಕಾಶವಿದ್ದರೂ, ಸ್ಥಳಾವಕಾಶ ಚಿಕ್ಕದಾಗಿರುವುದರಿಂದ ಪ್ರವಾಸಿಗರ ಸಂಖ್ಯೆಯನ್ನು ನಿಯಂತ್ರಿಸುವುದು ಹರಸಾಹಸದ ಕೆಲಸವಾಗಿದೆ. ಯಾವುದೇ ಸುರಕ್ಷತಾ ವ್ಯವಸ್ಥೆ ಇಲ್ಲದೆ ಜನಸಂದಣಿ ಹೆಚ್ಚುತ್ತಿರುವುದು ಅಪಾಯಕ್ಕೂ ಆಹ್ವಾನ ನೀಡುವಂತಿದೆ.ಈ ಜಲಪಾತಕ್ಕೆ ‘ವಿಭೂತಿ’ ಎಂಬ ಹೆಸರು ಬರಲು ಕೂಡ ವಿಶೇಷ ಹಿನ್ನೆಲೆ ಇದೆ. ಹಲವು ವರ್ಷಗಳ ಹಿಂದೆ ಸ್ಥಳೀಯರು ಹಾಗೂ ಪ್ರಾಂಶುಪಾಲರಾಗಿದ್ದ ಫಾಲ್ಗುಣ ಗೌಡ ಅವರು ಇಲ್ಲಿ ನಿಸರ್ಗದ ಅಪೂರ್ವ ಸೌಂದರ್ಯಕ್ಕೆ ಮನಸೋತು ‘ವಿಭೂತಿ ಜಲಪಾತ’ ಎಂದು ನಾಮಕರಣ ಮಾಡಿದ್ದರು. ಯಾಣದ ಭಸ್ಮಾಸುರನ ಪೌರಾಣಿಕ ಕಥೆಯ ಹಿನ್ನೆಲೆಯಲ್ಲಿ ಯಾಣದ ವಿಭೂತಿಯನ್ನು ಆಧಾರವಾಗಿಟ್ಟುಕೊಂಡು ಈ ಹೆಸರು ನೀಡಲಾಗಿದೆ ಎಂದು ತಿಳಿದುಬಂದಿದೆ.ಮೂಲಭೂತ ಸೌಕರ್ಯಗಳ ಕೊರತೆ:
ವಿಭೂತಿ ಜಲಪಾತ ಇರುವ ಪ್ರದೇಶ ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದೆ. ಇಲ್ಲಿ ಗ್ರಾಮ ಅರಣ್ಯ ಸಮಿತಿಯವರು ಪ್ರವಾಸಿಗರಿಂದ ರಸೀದಿ ನೀಡಿ ಶುಲ್ಕವನ್ನು ವಸೂಲಿ ಮಾಡುತ್ತಾರಾದರೂ, ಈ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತಿದೆಯೇ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಮೂಡಿದೆ. ಪ್ರತಿದಿನ ಸಾವಿರಾರು ರೂಪಾಯಿ ಸಂಗ್ರಹವಾಗುತ್ತಿದ್ದರೂ, ಆ ಹಣ ಎಲ್ಲಿ ಬಳಸಲಾಗುತ್ತಿದೆ ಎಂಬುದು ತಿಳಿಯದಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.ವಾಹನ ಪಾರ್ಕಿಂಗ್‌ಗೆ ಸಂಕಷ್ಟ:ಜಲಪಾತದ ಬಳಿ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಪ್ರವಾಸಿಗರು ಖಾಸಗಿ ಜಮೀನಿನಲ್ಲಿ ಹಣ ನೀಡಿ ವಾಹನಗಳನ್ನು ನಿಲ್ಲಿಸಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಕೆಲವರು ರಸ್ತೆಯ ಬದಿಯಲ್ಲೇ ವಾಹನಗಳನ್ನು ನಿಲ್ಲಿಸುವುದರಿಂದ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದು, ಎದುರಿನಿಂದ ವಾಹನಗಳು ಬಂದರೆ ಗಂಟೆಗಟ್ಟಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ವಿಭೂತಿಗೆ ತೆರಳುವ ದಾರಿಯಲ್ಲೂ ಸಮಸ್ಯೆಗಳೇ ಸಮಸ್ಯೆ. ರಸ್ತೆ ಪಕ್ಕದಲ್ಲಿ ಕಲ್ಲುಗಳು, ಬೇರಿನ ಮರದ ಪೊದೆಗಳು ಅಡ್ಡಲಾಗಿ ಇದ್ದು, ಕಾಲಿಗೆ ತಾಗಿ ಗಾಯಗೊಂಡು ಪ್ರವಾಸಿಗರು ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ ಹಿಂತಿರುಗುತ್ತಿರುವುದು ಸಾಮಾನ್ಯವಾಗಿದೆ.ಜೀವರಕ್ಷಕ ಸಿಬ್ಬಂದಿಗೆ ಉಳಿಯಲು ವ್ಯವಸ್ಥೆಯಿಲ್ಲ:ವಿಭೂತಿ ಜಲಪಾತ ಕಾಡಿನ ಮಧ್ಯೆ ಇದೆ. ಅಲ್ಲಿ ಪ್ರವಾಸೋದ್ಯಮ ಇಲಾಖೆ ಓರ್ವ ಜೀವರಕ್ಷಕ ಸಿಬ್ಬಂದಿಯನ್ನು ನೇಮಿಸಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಈ ಜಲಪಾತದ ವೀಕ್ಷಣೆಗೆ ಬರುವುದರಿಂದ ಜೀವರಕ್ಷಕ ಸಿಬ್ಬಂದಿ ಸಾಮಗ್ರಿಗಳನ್ನು ಇಡಲು ಒಂದು ಚಿಕ್ಕ ಕೊಠಡಿಯ ಅಗತ್ಯವಿದೆ. ಜೀವರಕ್ಷಕ ಸಿಬ್ಬಂದಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ನಿರ್ವಹಣೆ ಕಾರ್ಯ ಕೈಗೊಂಡಿರುವ ಗ್ರಾಮ ಅರಣ್ಯ ಸಮಿತಿ ಮಾಡಬೇಕೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಉಪನಿರ್ದೇಶಕರು ಪತ್ರ ಬರೆದಿದ್ದಾರೆ. ಆದರೆ ಅರಣ್ಯ ಇಲಾಖೆ, ಗ್ರಾಮ ಅರಣ್ಯ ಸಮಿತಿ ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿದುಬಂದಿದೆ.
ಇಂತಹ ಅಪೂರ್ವ ನಿಸರ್ಗದ ಜಲಪಾತವನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿ ಸರ್ಕಾರದ್ದು. ಅದು ಸಾಧ್ಯವಾಗದಿದ್ದರೆ ಖಾಸಗಿಯವರಿಗೆ ಒಪ್ಪಿಸಿದರೂ ಕನಿಷ್ಠ ಮೂಲಭೂತ ಸೌಕರ್ಯಗಳನ್ನಾದರೂ ಒದಗಿಸಬಹುದಿತ್ತು. ಜನರಿಂದ ಹಣ ವಸೂಲಿ ಮಾಡುವುದಷ್ಟೇ ಅಲ್ಲ, ಸೌಕರ್ಯವನ್ನೂ ನೀಡಬೇಕು ಎಂದು ಸ್ಥಳೀಯ ಹಿಲ್ಲೂರುನ ನಾಗರಾಜ್ ಬಾಂದೇಕರ ಆಗ್ರಹಿಸಿದ್ದಾರೆ.