ಸಾರಾಂಶ
300 ಜನ ವಸತಿ ಇರುವ ಗ್ರಾಮಕ್ಕೂ ಶವ ಸಂಸ್ಕಾರಕ್ಕೆ 18 ರಿಂದ 20 ಗುಂಟೆ ಜಮೀನು ರುದ್ರಭೂಮಿಗಾಗಿ ಕಡ್ಡಾಯವಾಗಿ ಕಾಯ್ದಿರಿಸಬೇಕು ಎಂದು ಸರ್ಕಾರ ಆದೇಶಿಸಿದ್ದು, ಬಹುತೇಕ ಗ್ರಾಮಗಳಲ್ಲಿ ರುದ್ರಭೂಮಿ ನಿರ್ಮಾಣಕ್ಕೆ ಸರ್ಕಾರಿ, ಕಂದಾಯ ಭೂ ಪ್ರದೇಶ, ಗೋಮಾಳ, ದರ್ಖಾಸ್ ಭೂಮಿಯನ್ನು ಮೀಸಲಿಡಲಾಗಿದೆ.
ಕನ್ನಡಪ್ರಭ ವಾರ್ತೆ ಕೆ.ಆರ್.ನಗರ
ರುದ್ರಭೂಮಿ (ಸ್ಮಶಾನ) ಅಭಿವೃದ್ಧಿ ಮತ್ತು ಹೊಸದಾಗಿ ಜಾಗ ನಿಗದಿಪಡಿಸಲು ಸರ್ಕಾರ ಹೆಚ್ಚಿನ ಆದ್ಯತೆ ಮತ್ತ ಅನುದಾನ ನೀಡುತ್ತಿದ್ದರೂ ಸಾಲಿಗ್ರಾಮ ಹಾಗೂ ಕೆ.ಆರ್. ನಗರ ತಾಲೂಕಿನಲ್ಲಿ ಅಧಿಕಾರಿಗಳು ಈ ವಿಚಾರದಲ್ಲಿ ಆಸಕ್ತಿ ತೋರುತ್ತಿಲ್ಲ.ಎರಡು ತಾಲೂಕಿನಲ್ಲಿ 34 ಗ್ರಾಪಂ ವ್ಯಾಪ್ತಿಯ 200ಕ್ಕೂ ಹೆಚ್ಚು ಗ್ರಾಮಗಳಲ್ಲಿ ರುದ್ರಭೂಮಿ ನಿರ್ಮಾಣಕ್ಕೆ ಕಂದಾಯ ಇಲಾಖೆ ಮೂಲಕ ಜಾಗ ಮೀಸಲಿರಿಸಿ ಸ್ಥಳೀಯ ಗ್ರಾಪಂಗೆ ಅಭಿವೃದ್ಧಿ ಪಡಿಸಲು ಹಸ್ತಾಂತರಿಸಲಾಗಿದೆ.
ಆದರೆ, ಗ್ರಾಪಂ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಈ ಕೆಲಸ ಮಾಡಲು ನಿರಾಸಕ್ತಿ ತೋರುತ್ತಿದ್ದು ಇದರಿಂದ ಆ ಜಾಗದಲ್ಲಿ ಗಿಡ ಗಂಟಿಗಳು ಬೆಳೆದು ನಿಂತಿದ್ದು ಅಂತ್ಯ ಸಂಸ್ಕಾರಕ್ಕೆ ತೊಂದರೆಯಾಗುತ್ತಿದೆ.300 ಜನ ವಸತಿ ಇರುವ ಗ್ರಾಮಕ್ಕೂ ಶವ ಸಂಸ್ಕಾರಕ್ಕೆ 18 ರಿಂದ 20 ಗುಂಟೆ ಜಮೀನು ರುದ್ರಭೂಮಿಗಾಗಿ ಕಡ್ಡಾಯವಾಗಿ ಕಾಯ್ದಿರಿಸಬೇಕು ಎಂದು ಸರ್ಕಾರ ಆದೇಶಿಸಿದ್ದು, ಬಹುತೇಕ ಗ್ರಾಮಗಳಲ್ಲಿ ರುದ್ರಭೂಮಿ ನಿರ್ಮಾಣಕ್ಕೆ ಸರ್ಕಾರಿ, ಕಂದಾಯ ಭೂ ಪ್ರದೇಶ, ಗೋಮಾಳ, ದರ್ಖಾಸ್ ಭೂಮಿಯನ್ನು ಮೀಸಲಿಡಲಾಗಿದೆ. ಆದರೆ ಕೆಲವು ಗ್ರಾಮದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಅವೈಜ್ಞಾನಿಕವಾಗಿ ಜಾಗ ಗುರುತಿಸಿದ್ದು ಇದರಿಂದಾಗಿ ಮೀಸಲಿಟ್ಟ ರುದ್ರಭೂಮಿಗೆ ಸಂಪರ್ಕ ರಸ್ತೆ ಇಲ್ಲದೆ ಇ ಗದ್ದೆ, ಕಾಲುವೆ ಮೂಲಕ ರುದ್ರಭೂಮಿಗೆ ಕಿ.ಮೀ. ಸುತ್ತಿ ಶವ ಸಂಸ್ಕಾರ ಮಾಡಬೇಕಿದೆ.
ರುದ್ರಭೂಮಿ ನಿರ್ಮಾಣ ಉದ್ದೇಶಕ್ಕೆ ಪ್ರತಿ ಗ್ರಾಮಗಳಲ್ಲಿಯು ಜಾಗ ನಿಗದಿ ಮಾಡಬೇಕು ಎಂದು ಸರ್ಕಾರ 14 ವರ್ಷಗಳ ಹಿಂದೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರು. ಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಈ ಬಗ್ಗೆ ಗಮನವಿಲ್ಲದಂತಾಗಿದೆ.ಪ.ಜಾತಿ ಮತ್ತು ವರ್ಗದವರಿಗೆ ಶವ ಸಂಸ್ಕಾರ ಮಾಡಲು ರುದ್ರಭೂಮಿ ಅಭಿವೃದ್ಧಿ ಪಡಿಸಿಲ್ಲ. ನಿಗದಿಯಾಗಿರುವ ಜಾಗಗಳಲ್ಲಿ ಗಿಡ ಗಂಟಕಗಳು ಬೆಳೆದಿದ್ದು, ಅಧಿಕಾರಿಗಳ ಅಸಡ್ಡೆಯಿಂದ ಶವ ಸಂಸ್ಕಾರಕ್ಕೆ ಮೂಲಭೂತ ಸವಲತ್ತು ಇಲ್ಲದಂತಾಗಿದೆ.- ಹಂಪಾಪುರ ಸುರೇಶ್, ದಲಿತ ಮುಖಂಡ.
ಮೃತಪಟ್ಟ ವ್ಯಕ್ತಿಯ ಶವ ಸಂಸ್ಕಾರ ಮಾಡುವ ರುದ್ರಭೂಮಿಗೆ ಮೂಲಭೂತ ಸೌಲಭ್ಯ ಕಲ್ಪಿಸದಿರುವುದು ಶೋಚನೀಯ. ನಮ್ಮನ್ನು ಪ್ರತಿನಿಧಿಸುವ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳಿಗೆ ಅಸಕ್ತಿ ಇಲ್ಲದಿರುವುದು ವಿಷಾದನೀಯ. ಈಗಲಾದರು ಸತ್ತ ವ್ಯಕ್ತಿಯನ್ನು ನೆಮ್ಮದಿಯಿಂದ ಶವ ಸಂಸ್ಕಾರ ಮಾಡಲು ರುದ್ರಭೂಮಿ ಅಭಿವೃದ್ಧಿ ಪಡಿಸಿ.
- ಜೆ.ಎಂ. ಕುಮಾರ್, ಗೌರವಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಪರ್ವ ಸಂಘ.