ಸಾರಾಂಶ
ಅಧಿಕಾರಿಗಳು ಹಾಗೂ ರಾಜಕಾರಣಿಗಳ ನಿರ್ಲಕ್ಷ್ಯದಿಂದ ಪ್ರತಿಬಾರಿ ಕೊಡೇಕಲ್ ಬಳಿ ಬಸವಸಾಗರ ಜಲಾಶಯ ಭರ್ತಿಯಾದಾಗ ಹೆಚ್ಚುವರಿ ನೀರು ವ್ಯರ್ಥವಾಗುತ್ತಲೇ ಇದೆ. ನೀರಿನ ಕ್ರೂಢಿಕರಣ ಸಮಸ್ಯೆ ಇರುವುದರಿಂದ 2ನೇ ಬೆಳೆಗೆ ಜಲಾಶಯದ ನೀರು ಸಮರ್ಪಕವಾಗಿ ಸಾಕಾಗುತ್ತಿಲ್ಲ.
ಅನಿಲ್ ಬಿರಾದರ್
ಕೊಡೇಕಲ್ : ಕಾವೇರಿ ಭಾಗದ ಮಕ್ಕಳಿಗೆ ಇದ್ದ ಹೋರಾಟದ ಕಿಚ್ಚು ಕೃಷ್ಣಾ ಭಾಗದ ರೈತರ ಮಕ್ಕಳಿಗೆ ಆ ಕಿಚ್ಚು ಇಲ್ಲ, ಇದನ್ನು ರೈತರ ದೌರ್ಭಾಗ್ಯವೆಂದೇ ಹೇಳಬಹುದು. ನೀರಾವರಿಯ ಮೂಲ ಉದ್ದೇಶ ರೈತರಿಗೆ ಸಕಾಲದಲ್ಲಿ ನೀರು ಒದಗಿಸಿ ನೆರವಾಗುವುದು. ಆದರೆ, ಇಲ್ಲಿ ಅಧಿಕಾರಿಗಳು ಹಾಗೂ ರಾಜಕಾರಣಿಗಳ ನಿರ್ಲಕ್ಷ್ಯದಿಂದ ಪ್ರತಿಬಾರಿ ಕೊಡೇಕಲ್ ಬಳಿ ಬಸವಸಾಗರ ಜಲಾಶಯ ಭರ್ತಿಯಾದಾಗ ಹೆಚ್ಚುವರಿ ನೀರು ವ್ಯರ್ಥವಾಗುತ್ತಲೇ ಇದೆ. ನೀರಿನ ಕ್ರೂಢಿಕರಣ ಸಮಸ್ಯೆ ಇರುವುದರಿಂದ 2ನೇ ಬೆಳೆಗೆ ಜಲಾಶಯದ ನೀರು ಸಮರ್ಪಕವಾಗಿ ಸಾಕಾಗುತ್ತಿಲ್ಲ.
ನೀರಾವರಿ ಸಂಬಂಧ ರೈತ ಸಂಘಟನೆ, ರಾಜಕೀಯ ನಾಯಕರು ಮೌನದಿಂದ ಹೊಸ ಯೋಜನೆ ಅನುಷ್ಠಾನಕ್ಕೆ ಬರುತ್ತಿಲ್ಲ. ಮೈಸೂರು ಭಾಗದ ರೈತರಲ್ಲಿ ಕಾವೇರಿಯ ಮೇಕೆದಾಟು ಯೋಜನೆಯ ‘ನಮ್ಮ ನೀರು ನಮ್ಮ ಹಕ್ಕು’ ಎಂದು ಸದಾಕಾಲ ಕಾವೇರಿ ನದಿಗಿರುವ ಹೋರಾಟದ ಕಾವು ಕೃಷ್ಣಾ ನದಿಯ ಬಗ್ಗೆ ಸರ್ಕಾರಕ್ಕೆ ಇಲ್ಲದಿರುವುದು ದುರ್ದೈವವೇ ಸರಿ. ಬೇಸಿಗೆಯಲ್ಲಿ ಗಿರಿಜಿಲ್ಲೆಯ ಸಾಕಷ್ಟು ಗ್ರಾಮಗಳಲ್ಲಿ ಕುಡಿವ ನೀರಿಗೂ ಹಾಹಾಕಾರ. ಅಂತರ್ಜಲ ಮಟ್ಟ ಕುಸಿತ ಸಹ ಇದಕ್ಕೆ ಮೂಲ ಕಾರಣ. ಕೆರೆ ವೃದ್ಧಿಸಿ ನೀರು ಶೇಖರಿಸುವ ಕೆಲಸ ಮಾಡಬೇಕಿದೆ.ಇದಕ್ಕೆ ಜಲಾಶಯವೇ ಜಲಮೂಲ.
ಕೃಷ್ಣಾ ಕಣಿವೆಯಿಂದ ಹೆಚ್ಚು ನೀರು ನದಿಗೆ:
ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿದ ಮಳೆಯಿಂದ ಈ ಬಾರಿ ರಾಜ್ಯದ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾದ ಆಲಮಟ್ಟಿ ಲಾಲಬಹ್ಧೂರ ಶಾಸ್ತ್ರಿ ಹಾಗೂ ನಾರಾಯಣಪುರ ಬಸವಸಾಗರ ಜಲಾಶಯ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿದೆ. ರಾಜ್ಯದ ಜಲವಿದ್ಯುತ್ ಸ್ಥಾವರದ ಆಣೆಕಟ್ಟುಗಳಾದ ಲಿಂಗನಮಕ್ಕಿ, ಸುಫಾ, ವರಾಹಿ ಆಣೆಕಟ್ಟಿನಿಂದ ಇಲ್ಲಿಯವರೆಗೆ 36 ಟಿಎಂಸಿ, ಕಾವೇರಿ ವಿಭಾಗದ ಹಾರಂಗಿ, ಹೇಮಾವತಿ, ಕೆ.ಅರ್.ಎಸ್, ಕಬಿನಿ ಜಲಾಶಯಗಳಿಂದ 184ಟಿ.ಎಂ.ಸಿ ನೀರು ನದಿಗೆ ಬಟ್ಟಿದ್ದರೆ ಕೃಷ್ಣಾ ಜಲಾನಯನ ವಿಭಾಗದಿಂದಲೇ ಒಟ್ಟು 637 ಟಿಎಂಸಿ ನದಿಗೆ ಹರಿಸಲಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯಲ್ಲಿದೆ. ಹಾಗಂತ ನದಿಯ ನೀರನ್ನು ಹಿಡಿದಿಟ್ಟುಕೊಳ್ಳಲು ಆಗುವುದಿಲ್ಲ. ನದಿಯ ನೀರು ಸಮುದ್ರ ಸೇರಲೇಬೇಕು. ಇದು ನೈಸರ್ಗಿಕ ಕ್ರಿಯೆ. ಆದರೆ, ಸಾಧ್ಯವಾದಷ್ಟು ನೀರಿನ ಸದ್ಭಳಕೆ ಯಾಕೆ ಮಾಡಲಾಗುತ್ತಿಲ್ಲ ಎಂಬುದು ರೈತರ ಪ್ರಶ್ನೆ.ಕೆಆರ್‌ಎಸ್, ತುಂಗಭದ್ರಾ ರೈತರ ನಿರಂತರ ಹೋರಾಟ:
ಕಾವೇರಿಯ ನದಿಯ ನೀರಿಗಾಗಿ ಮೈಸೂರು ಭಾಗದ ರೈತರು ತಮ್ಮ ನೀರಿಗಾಗಿ ನಿರಂತರ ಹೋರಾಟ ಮಾಡುತ್ತಲೇ ಇರುತ್ತಾರೆ. ರಾಜಕೀಯ ನಾಯಕರು ಸಹ ಅವರೊಟ್ಟಿಗೆ ಕೈ ಜೋಡಿಸಿ, ''''''''ನಮ್ಮ ನೀರು ನಮ್ಮ ಹಕ್ಕು'''''''' ಎಂಬ ಘೋಷವಾಕ್ಯಗಳೊಂದಿಗೆ ಸದಾ ಹೋರಾಟ ನಡೆಯುತ್ತಲೇ ಇರುತ್ತವೆ. ಇದರೊಟ್ಟಿಗೆ ತುಂಗಭದ್ರ ಜಲಾಶಯದಲ್ಲಿ ಇದೀಗ ಶೇ. 30ರಷ್ಟು ಹುಳು ತುಂಬಿರುವುದರಿಂದ, ಜಲಾಶಯದ ಸಮನಾಂತರ ನವಲಿ ಬಳಿ ಮಿನಿ ಜಲಾಶಯ ನಿರ್ಮಿಸಿ ಎಂದು ‘ಸೇವ್ ತುಂಗಭದ್ರಾ’ ಎಂಬ ಅಭಿಯಾನ ಆರಂಭಿಸಿದ್ದಾರೆ. ಆದರೆ, ಕೃಷ್ಣಾ ನದಿಯ ಕುರಿತು ಯಾವ ಜನಪ್ರತಿನಿಧಿಗಳು ಧ್ವನಿ ಎತ್ತರದಿರುವುದು ವಿಪರ್ಯಾಸ. ಕಾವೇರಿ ಹೋರಾಟಕ್ಕೆ ಸ್ಪಂದಿಸುವ ರಾಜ್ಯದ ಜನ ಕೃಷ್ಣೆಯ ನದಿಯ ನೀರಿನ ಉಳಿವಿಗೆ ಕಿವಿಗೊಡುತ್ತಿಲ್ಲ. ಇದಕ್ಕೆ ಪ್ರಮುಖವಾಗಿ ಈ ಭಾಗದ ಶಾಸಕರು, ಸಂಸದರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
ನೀರು ಸದ್ಭಳಕೆಗಾಗಿ ಯೋಜನೆ ರೂಪಿಸಿ
ಮಳೆಗಾಲದಲ್ಲಿ ಜಲಾಶಯವು ಭರ್ತಿಯಾಗಿ ನದಿಗೆ ನೀರು ಬಿಡುವ ಬದಲು ಸರ್ಕಾರವು ಯೋಜನೆಗಳನ್ನು ರೂಪಿಸಿ ನೀರಾವರಿ ಪ್ರದೇಶವಾದ ಯಾದಗಿರಿ ಜಿಲ್ಲಿಯಲ್ಲಿ ಅತ್ಯಧಿಕ ಜಲಾಶಯಗಳಿದ್ದು, ಅವುಗಳನ್ನು ತುಂಬಿಸಿ ನೀರಿನ ಸಧ್ಬಳಕೆ ಮಾಡಬೇಕಿದ್ದು, ಅಗತ್ಯವಿರುವೆಡೆ ನೂತನ ನೀರಾವರಿ ಯೋಜನೆಗಳನ್ನು ರೂಪಿಸಿ ನೀರು ವ್ಯರ್ಥವಾಗುವುದನ್ನು ತಡೆಯಬೇಕಿದೆ ಎನ್ನುತ್ತಿದೆ ರೈತಾಪಿ ವರ್ಗ.
ಜಲಾಶಯದ ಹಿರಿಮೆ
ಕೃಷ್ಣಾ ಮೇಲ್ದಂಡೆ ಯೋಜನೆ ಅಡಿಯಲ್ಲಿ 1982ರಲ್ಲಿ ನಿರ್ಮಿಸಲಾದ ಬಸವಸಾಗರ ಜಲಾಶಯವು 33.13 ಟಿ.ಎಂ.ಸಿ ಸಾಮರ್ಥ್ಯ ಹೊಂದಿದ್ದು, ಕೃಷ್ಣಾ ಅಚ್ಚುಕಟ್ಟು ಪ್ರದೇಶ ಸುಮಾರು 6 ಲಕ್ಷ ಹೆಕ್ಟೇರ್ ಪ್ರದೇಶದ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುತ್ತಿದೆ. ಯಾದಗಿರಿ ಮಾತ್ರವಲ್ಲದೇ, ಕಲಬುರಗಿ, ವಿಜಯಪುರ, ರಾಯಚೂರು ಜಿಲ್ಲೆಗಳು ಸೇರಿದಂತೆ ಬಸವಸಾಗರ ಹಿನ್ನೀರನ್ನು ಕುಡಿವ ನೀರು, ಬೃಹತ್ ನೀರಾವರಿ ಯೋಜನೆ ಅಡಿಯಲ್ಲಿ ಕಾಲುವೆ ಮತ್ತು ಏತ ನೀರಾವರಿಯಿಂದ ನೀರು ಬಳಸಿಕೊಂಡು ಕೃಷಿಗೆ ನೀರಾವರಿ ಸೇರಿದಂತೆ ಉದ್ಯಮಗಳಿಗೆ ಬೇಡಿಕೆ ಹಾಗೂ ಅಗತ್ಯ ನೀರನ್ನು ಒದಗಿಸಲು ಈ ಬೃಹತ್ ಜಲಾಶಯವೇ ಜಲಮೂಲವಾಗಿದೆ.