ನೇಹಾ ಹಿರೇಮಠ ಹತ್ಯೆ ಪ್ರಕರಣ ಸಿಐಡಿ ತನಿಖೆಗೆ : ಡಾ. ಜಿ. ಪರಮೇಶ್ವರ್

| Published : Apr 23 2024, 12:47 AM IST / Updated: Apr 23 2024, 09:04 AM IST

ನೇಹಾ ಹಿರೇಮಠ ಹತ್ಯೆ ಪ್ರಕರಣ ಸಿಐಡಿ ತನಿಖೆಗೆ : ಡಾ. ಜಿ. ಪರಮೇಶ್ವರ್
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ್ ಹತ್ಯೆ ಪ್ರಕರಣವನ್ನು ಸಿಐಡಿಗೆವಹಿಸುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಂಡಿದ್ದು, ಆದೇಶ ಹೊರಡಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.

 ತುಮಕೂರು :  ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ್ ಹತ್ಯೆ ಪ್ರಕರಣವನ್ನು ಸಿಐಡಿಗೆವಹಿಸುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಂಡಿದ್ದು, ಆದೇಶ ಹೊರಡಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಐಡಿ ಅಧಿಕಾರಿಗಳ ತಂಡ ಹುಬ್ಬಳ್ಳಿಗೆ ತೆರಳಿ ಪೊಲೀಸರಿಂದ ನೇಹಾ ಹತ್ಯೆ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ನೇಹಾ ಹತ್ಯೆ ಹಿಂದೆ ಯಾರ ಕೈವಾಡ ಇದ್ದರೂ, ಯಾರೇ ಭಾಗಿಯಾಗಿದ್ದರೂ ನಿಷ್ಪಕ್ಷಪಾತ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸಿಐಡಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ 10-12 ದಿನಗಳ ಒಳಗಾಗಿ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸಮಯ ನಿಗದಿಗೊಳಿಸಿದ್ದೇವೆ. ಈಗಾಗಲೇ ಈ ಸಂಬಂಧ ಆದೇಶವೂ ಹೊರಬಿದ್ದಿದೆ ಎಂದರು.

ವಿಷಾದ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್: ನೇಹಾ ತಂದೆ-ತಾಯಿಗೆ ನ್ಯಾಯ ಸಿಗುವ ವಿಶ್ವಾಸ ನನಗಿದೆ. ತನಿಖೆಯ ನಂತರ ಸತ್ಯಾಂಶವೂ ಹೊರಗೆ ಬರಲಿದೆ. ನನ್ನ ಹೇಳಿಕೆಯಿಂದ ಏನಾದರೂ ನೇಹಾ ತಂದೆ-ತಾಯಿಗಳಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಈಗಾಗಲೇ ನೇಹಾ ಹತ್ಯೆಗೈದಿರುವ ಆರೋಪಿಯನ್ನು ಪೊಲೀಸರು ಬಂಧಿಸಿ, ಕಾನೂನು ಪ್ರಕಾರ ತನಿಖೆ ಕೈಗೊಂಡಿದ್ದಾರೆ. ಇನ್ನು ಮುಂದೆ ಈ ಪ್ರಕರಣದ ತನಿಖೆ ಸಿಓಡಿ ನಡೆಸಲಿದೆ ಎಂದರು.

ಈ ಕೇಸ್‌ನ್ನು ಬಿಜೆಪಿ ರಾಜಕೀಯಕ್ಕಾಗಿ ಬಳಕೆ: ಬಿಜೆಪಿಯವರು ಈ ಪ್ರಕರಣವನ್ನು ರಾಜಕೀಯಕ್ಕೋಸ್ಕರ ಬಳಸುತ್ತಿದ್ದಾರೆ. ಬಿಜೆಪಿ ನಾಯಕರ ಟ್ವಿಟ್ಟರ್, ಹೇಳಿಕೆಗಳನ್ನು ಗಮನಿಸಿದರೆ ಇದಕ್ಕೆ ರಾಜಕೀಯ ಬಣ್ಣ ಕಟ್ಟುತ್ತಿರುವುದು ಸ್ಪಷ್ಟವಾಗುತ್ತಿದೆ. ಬಿಜೆಪಿ ನಾಯಕರು ಇದಕ್ಕೆ ರಾಜಕೀಯ ಬಣ್ಣ ಬಳಿಯುವ ಕೆಲಸ ಮಾಡಬಾರದರು ಎಂದರು.ಐಎಎಸ್ ಅಧಿಕಾರಿಯಾಗಿದ್ದ ಡಿ.ಕೆ.ರವಿ ಸಾವಿನ ಬಗ್ಗೆಯೂ ಹೀಗೆ ಆರೋಪ ಮಾಡಲಾಯಿತು. ಬಳಿಕ ಸಿಬಿಐಗೆ ವಹಿಸಲಾಯಿತು. ಅವರು ತನಿಖೆ ಮಾಡಿ ಏನೆಂದು ವರದಿ ನೀಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹುಬ್ಬಳ್ಳಿ ಪ್ರಕರಣದ ಸತ್ಯಾಸತ್ಯತೆಯನ್ನು ಜನರ ಮುಂದೆ ಇಟ್ಟಿದ್ದೇವೆ, ಅವರು ಗಮನಿಸುತ್ತಾರೆ ಎಂದು ಹೇಳಿದರು.

ಸರ್ಕಾರ ಹೇಗೆ ಶಿಕ್ಷೆ ಕೊಡಲು ಸಾಧ್ಯ: ಹುಬ್ಬಳ್ಳಿ ಯುವತಿ ಹತ್ಯೆ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ವೋಟ್ ಫಾರ್ ನೇಹಾ ಅಂತ ಬಿಜೆಪಿಯವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿಕೊಳ್ಳುತ್ತಿರುವುದು ಏನರ್ಥ? ಇನ್ನು ಯಾವ ಮಟ್ಟಕ್ಕೆ ಹೋಗುತ್ತೀರಿ. ಪ್ರಕರಣದ ತನಿಖೆಯಲ್ಲಿ ಲೋಪದೋಷಗಳಾಗಿದ್ದರೆ ಹೇಳಲಿ ಒಪ್ಪಿಕೊಳ್ಳುತ್ತೇವೆ. ನ್ಯಾಯಾಂಗ ವ್ಯವಸ್ಥೆ ಇದೆ. ಪೊಲೀಸರು ತನಿಖೆ ಮಾಡಿ ದೋಷರೋಪ ಮಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ. ಕೋರ್ಟ್ ತಪ್ಪಿತಸ್ಥನಿಗೆ ಶಿಕ್ಷೆ ವಿಧಿಸುತ್ತದೆ. ಸರ್ಕಾರ ಹೇಗೆ ಶಿಕ್ಷೆ ಕೊಡಲು ಸಾಧ್ಯ ಎಂದು ಪ್ರಶ್ನಿಸಿದರು.

ಆರ್.ಅಶೋಕ್ ಗೃಹ ಸಚಿವರಾಗಿ ಕೆಲಸ ಮಾಡಿದವರು. ಪ್ರಕರಣದ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡುವುದು ಸರಿಯಲ್ಲ. ಯಾವುದೇ ಘಟನೆ ನಡೆದ ಕೂಡಲೇ ಗೃಹ ಸಚಿವರಿಗೆ ಮಾಹಿತಿ ನೀಡುತ್ತಾರೆ. ಇದು ಆಗಿಲ್ಲ ಎಂದರೆ ನಾವೇ ವರದಿ ತರಿಸಿಕೊಳ್ಳುತ್ತೇವೆ. ಎಸ್‌ಪಿ ಕೊಟ್ಡ ವರದಿ ಆಧಾರದ ಮೇಲೆ ಹೇಳಿದ್ದೇನೆ. ಅಶೋಕ್ ಅವರಿಗೆ ಇಷ್ಟು ಗೊತ್ತಿಲ್ಲವೇ ಎಂದು ಟೀಕಿಸಿದರು.

ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ: ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಅನುಮತಿ ನೀಡಿದರೆ, ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ಚುನಾವಣೆ ನಂತರ ಪಂಚ ಗ್ಯಾರಂಟಿಗಳನ್ನು ನಿಲ್ಲಿಸಲಾಗುತ್ತದೆ. ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್‌ನವರು ವದಂತಿ ಹಬ್ಬಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ. ಬಿಜೆಪಿಯವರ ಅಪಪ್ರಚಾರಗಳು ಪ್ರಾಮುಖ್ಯ ಎನಿಸುವುದಿಲ್ಲ ಎಂದರು.

ಮಾಜಿ ಶಾಸಕರಾದ ಎಸ್. ಷಫಿಅಹಮದ್, ಡಾ. ರಫೀಕ್‌ಅಹಮದ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್. ರಾಮಕೃಷ್ಣ, ಇಕ್ಬಾಲ್ ಅಹಮದ್ ಮತ್ತಿತರರು ಉಪಸ್ಥಿತರಿದ್ದರು.