ಸಾರಾಂಶ
ದಾಬಸ್‍ಪೇಟೆ: ಸರ್ಕಾರದ ಹಣ ಗ್ಯಾರಂಟಿ ಯೋಜನೆಗಳಿಗೆ ಮಾತ್ರ ಸೀಮಿತವಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿದ್ದು, ಗ್ಯಾರಂಟಿ ಯೋಜನೆಗೆ ಬೇರೆಯದ್ದೇ ಹಣ ಸೀಮಿತವಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವುದಕ್ಕೆ ನೆಲಮಂಗಲ ವಿಧಾನಸಭಾ ಕ್ಷೇತ್ರವೂ ಸಾಕ್ಷಿಯಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ತ್ಯಾಮಗೊಂಡ್ಲು ಪಟ್ಟಣದ ದೇವರಾಜು ವೃತ್ತದಲ್ಲಿ 31.36 ಕೋಟಿ ವೆಚ್ಚದ ಟಿ.ಬೇಗೂರು-ತ್ಯಾಮಗೊಂಡ್ಲುವರೆಗಿನ ಚತುಷ್ಪಥ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಶಾಸಕರ ಕನಸು ನನಸಾಗಿದೆ. ಟಿ.ಬೇಗೂರಿನಿಂದ ತ್ಯಾಮಗೊಂಡ್ಲುವರೆಗಿನ ನಾಲ್ಕು ಪಥದ ರಸ್ತೆ ನಿರ್ಮಾಣ ಮಾಡುವುದು ಶ್ರೀನಿವಾಸ್ ಕನಸಾಗಿತ್ತು. ಈ ಕನಸನ್ನು ನಮ್ಮ ಸರ್ಕಾರ ಈಡೇರಿಸುತ್ತಿದೆ. 7 ಗ್ರಾಪಂಗಳು ಸೇರುವ ಈ ರಸ್ತೆಯೂ ವಾಹನಗಳ ದಟ್ಟನೆಯಿಂದ ಕೂಡಿದ್ದು, ಬೆಂಗಳೂರಿಗೆ ಸೇರುವ ಈ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿರುವುದಾಗಿ ತಿಳಿಸಿದರು.ನಮ್ಮ ಸರ್ಕಾರ ಬಂದ ಮೇಲೆ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಆದರೆ ಅವುಗಳಿಗೆ ಪ್ರಚಾರ ಸಿಗುತ್ತಿಲ್ಲ. ಎಷ್ಟೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದರೂ ಗ್ಯಾರಂಟಿಗೆ ದುಡ್ಡು ಹೋಗುತ್ತಿದೆ ಎನ್ನು ವಿರೋಧಿಗಳ ಆರೋಪ. ನಮ್ಮ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎಂದರು.
ಸರ್ಕಾರ ಶಾಸಕರ ಪರವಿದೆ: ನೆಲಮಂಗಲದಲ್ಲಿ 30 ವರ್ಷದಿಂದ ನಮ್ಮ ಶಾಸಕರು ಇರಲಿಲ್ಲ. ಆದರೂ ಪಕ್ಷವನ್ನು ಗಟ್ಟಿಗೊಳಿಸಿ ಈ ಬಾರಿ ನಮ್ಮ ಪಕ್ಷದ ಅಭ್ಯರ್ಥಿಯನ್ನೇ ಶಾಸಕರಾಗಿ ಮಾಡಿದ್ದೀರಾ. ಯುವ ಶಾಸಕ ಶ್ರೀನಿವಾಸ್ ತಾನು ಹಿಡಿದ ಕೆಲಸ ಆಗುವವರೆಗೂ ಬಿಡುವುದಿಲ್ಲ. ಕೆಲಸ ಮಾಡುವ ಉತ್ಸಾಹ, ತಿಳಿವಳಿಕೆಯಿರುವ ಕೆಲಸ ಮಾಡಿಯೇ ತೀರುವ ಶಾಸಕರನ್ನು ನೀವು ನೀವು ಆಯ್ಕೆ ಮಾಡಿಕೊಂಡಿದ್ದೀರಿ. ನಿಮ್ಮ ನಿರೀಕ್ಷಗೆ ತಕ್ಕಂತೆ ಕೆಲಸ ಮಾಡುವ ವಿಶ್ವಾಸವಿದೆ. ಅವರ ಜೊತೆ ಸಿಎಂ, ಡಿಸಿಎಂ ಸೇರಿ ಇಡೀ ಸರ್ಕಾರವೇ ಅವರ ಜೊತೆಗಿದ್ದು ಸಹಕಾರ ನೀಡಲಿದೆ. ಈ ರಸ್ತೆಯನ್ನು ತುಮಕೂರು ಗ್ರಾಮಾಂತರ ಗಡಿಯವರೆಗೆ ವಿಸ್ತರಿಸುವ ಬಗ್ಗೆ ಶಾಸಕರು ಮನವಿ ಮಾಡಿದ್ದು, ಮುಂದಿನ ಆರ್ಥಿಕ ವರ್ಷದಲ್ಲಿ ವಿಸ್ತರಣೆ ಮಾಡಿಕೊಡುತ್ತೇನೆ ಎಂದು ಹೇಳಿದರು.ನೆಲಮಂಗಲದಲ್ಲಿ ಅಭಿವೃದ್ಧಿ ಪರ್ವ: ವಿಧಾನಪರಿಷತ್ ಸದಸ್ಯ ಎ.ರವಿ ಮಾತನಾಡಿ, ಬೆಂಗಳೂರಿಗೆ ಅತ್ಯಂತ ಹತ್ತಿರವಿರುವ ನೆಲಮಂಗಲ ಕಳೆದ 30 ವರ್ಷಗಳಿಂದ ಅಭಿವೃದ್ಧಿಯಲ್ಲಿ ಕುಂಠಿತಗೊಂಡಿತ್ತು. ಇಡೀ ಜಿಲ್ಲೆಯಲ್ಲೇ ನೆಲಮಂಗಲ ಅಭಿವೃದ್ಧಿಯಲ್ಲಿ ಮೂಲೆಗುಂಪಾಗಿತ್ತು. ಆದರೆ ಶ್ರೀನಿವಾಸ್ ಗೆದ್ದು ಶಾಸಕರಾದ ಮೇಲೆ ನೆಲಮಂಗಲದಲ್ಲಿ ಅಭಿವೃದ್ಧಿ ಪರ್ವವೇ ಆರಂಭವಾಗಿದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂಬ ವಿರೋಧಿಗಳ ಆರೋಪಕ್ಕೆ ನೆಲಮಂಗಲ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ನೋಡಿ ಆಮೇಲೆ ಮಾತನಾಡಬೇಕು. ಭಷ್ಟಾಚಾರಕ್ಕೆ ಕಡಿವಾಣ ಹಾಕಿ 224 ವಿಧಾನಸಭಾ ಕ್ಷೇತ್ರಗಳ ಶಾಸಕರ ಪೈಕಿ ಅತ್ಯಂತ ಪ್ರಾಮಾಣಿಕ, ಅತ್ಯುತ್ತಮ ಶಾಸಕ ಎಂಬ ಹೆಗ್ಗಳಿಕೆಗೆ ಶಾಸಕ ಶ್ರೀನಿವಾಸ್ ಪಾತ್ರರಾಗಿದ್ದಾರೆ ಎಂದು ತಿಳಿಸಿದರು.ನುಡಿದಂತೆ ನಡೆದಿದ್ದೇನೆ: ಹಿಂದಿನ ಶಾಸಕರು ಎರಡು ಬಾರಿ ಶಾಸಕರಾಗಿದ್ದು, 1 ವರ್ಷ 4 ತಿಂಗಳು ಅವರ ಪಕ್ಷದವರೇ ಸಿಎಂ ಆಗಿದ್ದರೂ ರಸ್ತೆ ನಿರ್ಮಾಣ ಮಾಡಿಸಲು ಆಸಕ್ತಿ ವಹಿಸಲಿಲ್ಲ. ನಾನು ಶಾಸಕನಾದ 9 ತಿಂಗಳಲ್ಲೇ ರಸ್ತೆ ಅಗಲೀಕರಣಕ್ಕೆ ಅನುಮೋದನೆ ಪಡೆದು ಅನುದಾನ ಬಿಡುಗಡೆ ಮಾಡಿಸಿ, ಇದೀಗ ಸಚಿವರ ಕೈಯಲ್ಲೇ ಭೂಮಿಪೂಜೆ ಮಾಡಿಸಿ ನುಡಿದಂತೆ ನಡೆದಿದ್ದೇನೆ ಎಂದು ಶಾಸಕ ಶ್ರೀನಿವಾಸ್ ಹೇಳಿದರು.
ಇದೇ ವೇಳೆ ಸಚಿವ ಸತೀಶ್ ಜಾರಕಿಹೊಳಿ ಹಾಗೂ ವಿಧಾನ ಪರಿಷತ್ ಸದಸ್ಯ ರವಿ ಅವರಿಗೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಬೆಳ್ಳಿಗದೆ ನೀಡಿ ಸನ್ಮಾನಿಸಿದರು.ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ, ಎನ್‌ಡಿಎ ಅಧ್ಯಕ್ಷ ನಾರಾಯಣಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗರಾಜು, ಜಗದೀಶ್, ಬಗರ್ ಹುಕುಂ ಸಮಿತಿ ಸದಸ್ಯರಾದ ಹನುಮಂತೇಗೌಡ್ರು, ವಾಸು, ಎನ್‍ಪಿಎ ಸದಸ್ಯ ಪ್ರಕಾಶ್ ಬಾಬು ಸೇರಿದಂತೆ 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಂಡಿದ್ದರು.
(ಪೋಟೋ 5 )ತ್ಯಾಮಗೊಂಡ್ಲು ಪಟ್ಟಣದಲ್ಲಿ ಟಿ.ಬೇಗೂರು-ತ್ಯಾಮಗೊಂಡ್ಲುವರೆಗಿನ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಎಂಎಲ್ಸಿ ರವಿ, ಶಾಸಕ ಶ್ರೀನಿವಾಸ್ ಭೂಮಿಪೂಜೆ ನೆರವೇರಿಸಿದರು.