ನೆಲ್ಯಾಡಿ: ಮದ್ಯವ್ಯಸನಿ ಯುವಕನ ಕೊಲೆ

| Published : May 11 2025, 11:52 PM IST

ಸಾರಾಂಶ

ನೆಲ್ಯಾಡಿ ಗ್ರಾಮದ ಮಾದೇರಿ ಎಂಬಲ್ಲಿ ಕ್ಷುಲ್ಲಕ ಕಾರಣಗಳನ್ನು ಮುಂದಿರಿಸಿ ಪದೇಪದೆ ಮಾರಕಾಯುಧಗಳಿಂದ ಹಲ್ಲೆಗೆ ಮುಂದಾಗುತ್ತಿದ್ದ ಯುವಕನನ್ನು ಆತನ ಸಂಬಂಧಿ ಯುವಕನೇ ಮರದ ದೊಣ್ಣೆಯಿಂದ ಹೊಡೆದು ಕೊಲೆಗೈದ ಘಟನೆ ಶುಕ್ರವಾರ ತಡ ರಾತ್ರಿ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಕಡಬ ತಾಲೂಕು ನೆಲ್ಯಾಡಿ ಗ್ರಾಮದ ಮಾದೇರಿ ಎಂಬಲ್ಲಿ ಕ್ಷುಲ್ಲಕ ಕಾರಣಗಳನ್ನು ಮುಂದಿರಿಸಿ ಪದೇಪದೆ ಮಾರಕಾಯುಧಗಳಿಂದ ಹಲ್ಲೆಗೆ ಮುಂದಾಗುತ್ತಿದ್ದ ಯುವಕನನ್ನು ಆತನ ಸಂಬಂಧಿ ಯುವಕನೇ ಮರದ ದೊಣ್ಣೆಯಿಂದ ಹೊಡೆದು ಕೊಲೆಗೈದ ಘಟನೆ ಶುಕ್ರವಾರ ತಡ ರಾತ್ರಿ ಸಂಭವಿಸಿದೆ.

ಮೃತ ವ್ಯಕ್ತಿಯನ್ನು ಶರತ್ ಕುಮಾರ್ (34) ಎಂದು ಗುರುತಿಸಲಾಗಿದೆ. ತನ್ನ ಕುಡಿತದ ಚಟದಿಂದಾಗಿ ಮನೆಯಲ್ಲಿ ಹೆತ್ತವರ ಜೊತೆ ಅಮಾನುಷವಾಗಿ ವರ್ತಿಸುತ್ತಿದ್ದ ಹಿನ್ನೆಲೆಯಲ್ಲಿ ಆತನ ಹೆತ್ತವರು ಇನ್ನೋರ್ವ ಮಗನ ಜೊತೆ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಮಾದೇರಿಯ ತನ್ನ ಸ್ವಂತ ಮನೆಯಲ್ಲಿ ಆತನೋರ್ವನೇ ವಾಸವಾಗಿದ್ದ ಎನ್ನಲಾಗಿದೆ. ಮಾತ್ರವಲ್ಲದೆ ಸನಿಹದಲ್ಲಿದ್ದ ತನ್ನ ಚಿಕ್ಕಪ್ಪ ಜನಾರ್ದನ ಗೌಡ ಅವರ ಮನೆಯಲ್ಲಿಯೇ ಊಟೋಚಾರವನ್ನು ಪಡೆಯುತ್ತಿದ್ದ ಎಂದು ಹೇಳಲಾಗಿದೆ.ಈ ಮಧ್ಯೆ ತನ್ನ ಚಿಕ್ಕಪ್ಪನ ಮನೆಯವರೊಡಗೂಡಿ ಸಂಗ್ರಹಿಸಿದ್ದ ಕಟ್ಟಿಗೆಯನ್ನು ತುಂಡರಿಸಿದ ಹಾಗೂ ಅದನ್ನು ಮನೆಗೆ ಕೊಂಡೊಯ್ಯಲು ಯತ್ನಿಸಿದ ವಿಚಾರಕ್ಕೆ ಸಂಬಂಧಿಸಿ ಚಿಕ್ಕಪ್ಪನ ಮನೆ ಮಂದಿಯೊಂದಿಗೆ ಸಂಘರ್ಷ ನಿರತನಾದ ಆತ ಗುರುವಾರದಂದು ಮಾರಕಾಯುಧದೊಂದಿಗೆ ಜಗಳಕ್ಕಿಳಿದಾಗ ನೆಲ್ಯಾಡಿ ಪೊಲೀಸರು ಮಧ್ಯ ಪ್ರವೇಶಿಸಿ ಜಗಳವನ್ನು ನಿಯಂತ್ರಿಸಿದ್ದರು.ಆದರೆ ಶುಕ್ರವಾರ ರಾತ್ರಿ ಮತ್ತೆ ಚಿಕ್ಕಪ್ಪನ ಮನೆಗೆ ಬಂದು ಜಗಳಕ್ಕಿಳಿದ ಶರತ್ ಕುಮಾರ್, ಚಿಕ್ಕಪ್ಪನ ಮಗ ಸತೀಶ್ ಎಂಬವರಿಗೆ ಬೈಯುತ್ತಿದಾಗ, ತೋಟದಿಂದ ಆಗಮಿಸಿದ ಚಿಕ್ಕಪ್ಪನ ಇನ್ನೋರ್ವ ಮಗ ಹರಿಪ್ರಸಾದ್ ತನ್ನ ಕೈಯಲ್ಲಿದ್ದ ಮರದ ದೊಣ್ಣೆಯಿಂದ ಶರತ್ ಕುಮಾರನ ತಲೆಗೆ ಬಲವಾಗಿ ಹೊಡೆದನು. ಇದರಿಂದಾಗಿ ಕುಸಿದು ಬಿದ್ದ ಆತನ ತಲೆಗೆ ಮತ್ತೆ ಬಲವಾಗಿ ಹೊಡೆದು ಕೊಲೆಗೈದಿರುವುದಾಗಿ ಎಂದು ಮೃತನ ಸಹೋದರ ಚರಣ್ ಕುಮಾರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.ಪ್ರಕರಣದ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ದ.ಕ. ಜಿಲ್ಲಾ ಎಸ್ಪಿ ಯತೀಶ್ ಎನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.