ಹೊಸ ಶಿಕ್ಷಣ ನೀತಿ ಅಪಾಯಕಾರಿ: ಪ್ರೊ.ಎಸ್. ಜಿ.ಸಿದ್ದರಾಮಯ್ಯ ಕಳವಳ

| Published : Jan 03 2024, 01:45 AM IST

ಹೊಸ ಶಿಕ್ಷಣ ನೀತಿ ಅಪಾಯಕಾರಿ: ಪ್ರೊ.ಎಸ್. ಜಿ.ಸಿದ್ದರಾಮಯ್ಯ ಕಳವಳ
Share this Article
  • FB
  • TW
  • Linkdin
  • Email

ಸಾರಾಂಶ

ಸಿಂಧನೂರಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಸುವರ್ಣ ಸಾಂಸ್ಕೃತಿಕ ಮಹೋತ್ಸವ ಕಾರ್ಯಕ್ರಮದಲ್ಲಿ ‘ಮುನ್ನುಡಿ ಮಣಿ ತೋರಣ’ ಕೃತಿ ಬಿಡುಗಡೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಸಿಂಧನೂರು

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳಲ್ಲಿ ಜಾತಿ ವ್ಯವಸ್ಥೆ, ಮೇಲು-ಕೀಳು ಎಂಬ ಭಾವನೆ, ಚಾತುರ್ವರ್ಣದ ಪುನರಾಗಮನದ ಹುನ್ನಾರ ಅಡಗಿದೆ. ಇದು ಅಪಾಯಕಾರಿ ಬೆಳವಣಿಗೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್. ಜಿ.ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು.

ಅವರು ಸರ್ಕಾರಿ ಪದವಿ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುವರ್ಣ ಸಾಂಸ್ಕೃತಿಕ ಮಹೋತ್ಸವ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಶಾಶ್ವತಸ್ವಾಮಿ ಮುಕ್ಕುಂದಿಮಠರ ‘ಮುನ್ನುಡಿ ಮಣಿ ತೋರಣ’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಗುರುಕುಲ ಪದ್ಧತಿಯ ಶಿಕ್ಷಣ ಎಂಬ ಹೆಸರಿನಲ್ಲಿ ಮತ್ತೆ ಹಳೆಯ ಪದ್ಧತಿಯನ್ನೆ ಮುಂದುವರಿಸುವ, ಮೇಲ್ವರ್ಗದ ಹಿತ ಕಾಯುವ ವ್ಯವಸ್ಥೆ ಅಡಗಿದೆ ಎಂದು ಟೀಕಿಸಿದರು.

ದ್ವೇಷದಿಂದ ದೇಶ ಕಟ್ಟಲಾಗುವುದಿಲ್ಲ. ಪ್ರೀತಿಯಿಂದ ಮಾತ್ರ ದೇಶ ಕಟ್ಟಬಹುದು. ಈ ದೇಶದಲ್ಲಿ ಜನಿಸಿದ ಪ್ರತಿಯೊಬ್ಬರು ಈ ಮಣ್ಣಿನ ಮಕ್ಕಳೆ ಆಗಿದ್ದಾರೆ. ಅದನ್ನು ಶರಣರು, ದಾಸರು ಮತ್ತು ಅವಧೂತ ಪರಂಪರೆ ಕಾಯ್ದುಕೊಂಡು ಬಂದಿದೆ. ಇಂದಿನ ದಿನಗಳಲ್ಲಿ ಇಂತಹ ಪರಂಪರೆಯನ್ನು ನಾಶಪಡಿಸುವ ಪ್ರಯತ್ನ ನಡೆಯುತ್ತಿದ್ದು, ಅಂತಹ ಶಕ್ತಿಗಳ ಬಗ್ಗೆ ಸದಾ ಎಚ್ಚರದಿಂದ ಇರಬೇಕು. ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ಉಪನ್ಯಾಸಕರು ಶ್ರಮಿಸಬೇಕಾಗಿದೆ. ಅಂದರೆ ಮಾತ್ರ ನಾವು ಪಡೆದಿರುವ ಸ್ವಾತಂತ್ರ್ಯಕ್ಕೆ ಸಾರ್ಥಕತೆ ಸಿಗುತ್ತದೆ ಎಂದರು.

ಕಾಲೇಜ್ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಕೃಷ್ಣಮೂರ್ತಿ ಬಿಳಿಗೆರೆ ಮಾತನಾಡಿ, ಜಾತಿ, ಧರ್ಮ, ಗಂಡು-ಹೆಣ್ಣು ಎನ್ನುವ ಸಂಕೋಲೆಗಳನ್ನು ದಾಟಿ ನಿಜವಾದ ಮನುಷ್ಯತ್ವವನ್ನು ಅನನ್ಯವಾಗಿ ಪ್ರತಿಪಾದಿಸುವುದೆ ಉನ್ನತ ಶಿಕ್ಷಣದ ಮೌಲ್ಯವಾಗಿದೆ ಎಂದು ಹೇಳಿದರು.

ನಿವೃತ್ತ ಪ್ರಾಧ್ಯಾಪಕ ಹನುಮಂತ ಮಾತನಾಡಿ, ಉಪನ್ಯಾಸಕರು ತರಗತಿಗಳಿಗೆ ಹೋಗುವ ಮುನ್ನ ಹೇಳುವ ಪಾಠದ ಬಗ್ಗೆ ಸರ್ವ ಸಿದ್ಧತೆ ಮಾಡಿಕೊಂಡೇ ವಿದ್ಯಾರ್ಥಿಗಳ ಮುಂದೆ ನಿಲ್ಲಬೇಕು ಎಂದು ಸಲಹೆ ನೀಡಿದರು.

ಇನ್ನೊಬ್ಬ ನಿವೃತ್ತ ಪ್ರಾಧ್ಯಾಪಕ ಜಿ.ಸಿದ್ದಪ್ಪ ಸರ್ಕಾರಿ ಕಾಲೇಜಿನಲ್ಲಿ ತಾವು ಕೆಲಸ ಮಾಡುವಾಗ ಜನರು ನೀಡಿದ ಸಹಕಾರ ಮತ್ತು ತಮ್ಮ ಅನುಭವಗಳನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಮುನ್ನುಡಿಗಳ ಮಣಿತೋರಣ ಕೃತಿ ಪತ್ರಕರ್ತ ಪ್ರಹ್ಲಾದಗುಡಿ ವಕೀಲ ಮಾತನಾಡಿದರು.

ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಸರ್ಕಾರಿ ಕಾಲೇಜು ಪ್ರಾರಂಭವಾಗುವುದಕ್ಕೆ ದಿ.ಮಾಜಿ ಶಾಸಕ ಗದ್ರಟಗಿ ಅಮರೇಗೌಡರ ಶ್ರಮವಿದೆ. ಅವರೊಂದಿಗೆ ಆಗ ತಾವು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾಗಿದ್ದು, ಸಂಸ್ಥೆಯ ಕಟ್ಟಡವನ್ನು ಕಾಲೇಜು ವಿದ್ಯಾರ್ಥಿಗಳಿಗಾಗಿ ಬಿಟ್ಟು ಕೊಟ್ಟಿದ್ದಲ್ಲದೆ ಅವರನ್ನು ಕಾಲೇಜಿಗೆ ಕರೆ ತರಲು ಪಟ್ಟ ಪ್ರಯತ್ನವನ್ನು ನೆನಪಿಸಿದರು.

ಕಾಲೇಜು ಹಳೆಯ ವಿದ್ಯಾರ್ಥಿಗಳಾದ ಶೇಖರಗೌಡ ಗುಮಗೇರಿ, ರಾಜಶೇಖರ ಪಾಟೀಲ್, ಜಾಫರ್ ಜಹಗೀರದಾರ್ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಅಧ್ಯಕ್ಷ ವೈ.ನರೇಂದ್ರನಾಥ, ಕಾರ್ಮಿಕ ಮುಖಂಡ ವೆಂಕನಗೌಡ ಗದ್ರಟಗಿ, ವಕೀಲರ ಸಂಘದ ಅಧ್ಯಕ್ಷ ಎನ್.ರಾಮನಗೌಡ, ಎಸ್.ದೇವೇಂದ್ರಗೌಡ, ಶರಣಪ್ಪ ಉಪ್ಪಲದೊಡ್ಡಿ, ಮಲ್ಲಿಕಾರ್ಜುನ ಹಟ್ಟಿ, ರಾಜೇಂದ್ರ ನಹಾರ್ ಉಪಸ್ಥಿತರಿದ್ದರು.

ಹಿರಿಯ ಉಪನ್ಯಾಸಕ ಶಿವಯ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಪ್ರಹ್ಲಾದ ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಣಿಜ್ಯ ಉಪನ್ಯಾಸಕ ಯಮನೂರ ಸ್ವಾಗತಿಸಿದರು. ಸಹ ಪ್ರಾಧ್ಯಾಪಕ ಬಸವರಾಜ್ ತಡಕಲ್ ನಿರೂಪಿಸಿದರು.