ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ವಿವಿಧ ಕ್ಷೇತ್ರಗಳಂತೆ ಇನ್ನು ಕರಾವಳಿಯ ಹೆಮ್ಮೆಯ ಜಾನಪದ ಕ್ರೀಡೆ ಕಂಬಳ ಕ್ಷೇತ್ರದಲ್ಲೂ ವಾರ್ಷಿಕ ಪ್ರಶಸ್ತಿಯನ್ನು ನೀಡಲು ಉದ್ದೇಶಿಸಲಾಗಿದೆ. ಶೀಘ್ರದಲ್ಲೇ ‘ನಮ್ಮ ಕಂಬಳ-2023-24 ಪ್ರಶಸ್ತಿ ಪ್ರದಾನ ಏರ್ಪಡಲಿದೆ.ಕಂಬಳ ಆಯೋಜನೆ ವೇಳೆ ಕೊಡುವ ಬಹುಮಾನಕ್ಕಿಂತ ಇದು ಭಿನ್ನ. ಇದು ಇಡೀ ವರ್ಷದ ಕಂಬಳದಲ್ಲಿ ಸಾಧನೆ ಮಾಡಿದ ಕೋಣಗಳ ಸಹಿತ ಸಾಧಕರಿಗೆ ಪ್ರಶಸ್ತಿ ನೀಡುವ ಆಲೋಚನೆ. ಈಗಾಗಲೇ ಯಾರಿಗೆಲ್ಲ ಪ್ರಶಸ್ತಿ ನೀಡಬೇಕು ಎಂಬ ಆಯ್ಕೆಯನ್ನೂ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ದಿನಾಂಕ ನಿಗದಿಯಷ್ಟೆ ಬಾಕಿಯುಳಿದಿದೆ. ಪದಕ ಗಳಿಕೆಯೇ ಪ್ರಶಸ್ತಿಗೆ ಮಾನದಂಡ: ಚಾಂಪಿಯನ್ ಮತ್ತು ರನ್ನರ್ ಅಪ್ ಪ್ರಶಸ್ತಿಯನ್ನು ಪದಕ ಗಳಿಕೆಯ ಮಾನದಂಡದಡಿ ಆಯ್ಕೆ ಮಾಡಲಾಗಿದೆ.ಕೋಣದ ಯಜಮಾನರಿಗೆ ಚಾಂಪಿಯನ್ ಅವಾರ್ಡ್ 2023-24, ರನ್ನರ್ ಅಪ್ ಕೋಣದ ಓಟಗಾರರಿಗೆ ಚಾಂಪಿಯನ್ ಅವಾರ್ಡ್, ರನ್ನರ್ ಅಪ್, ಕೋಣಗಳಿಗೆ ಚಾಂಪಿಯನ್ ಅವಾರ್ಡ್, ಅತ್ಯುತ್ತಮ ರೀತಿಯಲ್ಲಿ ಕೋಣ ಬಿಡಿಸುವ ಸಾಧಕರಿಗೆ ಗೌರವ ಸ್ಮರಣಿಕೆ ಹಾಗೂ ಸನ್ಮಾನ, ಕಂಬಳ ಉತ್ತಮ ಸಂಯೋಜಕರಿಗೆ ಗೌರವ ಸ್ಮರಣಿಕೆ ಹಾಗೂ ಸನ್ಮಾನ, ಕಂಬಳದ ತೀರ್ಪುಗಾರರಿಗೆ ಗೌರವ ಸ್ಮರಣಿಕೆ ಹಾಗೂ ಸನ್ಮಾನ ನಡೆಯಲಿದೆ.
ಯಾರ್‍ಯಾರಿಗೆ ಪ್ರಶಸ್ತಿ?ಕನೆಹಲಗೆ ವಿಭಾಗದಲ್ಲಿ ಬೋಳಾರ್ ತ್ರಿಶಾಲ್ ಕೆ. ಪೂಜಾರಿ ಚಾಂಪಿಯನ್, ಕಾಂತಾವರ ಬೇಲಾಡಿ ಬಾವ ಅಶೋಕ್ ಶೆಟ್ಟಿ/ಹವ್ಯನ್ ಪ್ರಜೋತ್ ಶೆಟ್ಟಿ ರನ್ನರ್ ಅಪ್, ಅಡ್ಡಹಲಗೆ ವಿಭಾಗದಲ್ಲಿ ಬೋಳಾರ್ ತ್ರಿಶಾಲ್ ಕೆ. ಪೂಜಾರಿ ಚಾಂಪಿಯನ್, ನಾರಾವಿ ರಕ್ಷಿತ್ ಯುವರಾಜ್ ಜೈನ್ ರನ್ನರ್ ಅಪ್, ಹಗ್ಗ ಹಿರಿಯ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ್ ಭಟ್ ಚಾಂಪಿಯನ್, ಕೊಳಕೆ ಇರ್ವತ್ತೂರು ಭಾಸ್ಕರ್ ಕೋಟ್ಯಾನ್ ರನ್ನರ್ ಅಪ್, ಹಗ್ಗ ಕಿರಿಯ ವಿಭಾಗದಲ್ಲಿ ಸುರತ್ಕಲ್ ಪಾಂಚಜನ್ಯ ಯೋಗೀಶ್ ಪೂಜಾರಿ ಚಾಂಪಿಯನ್, ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ಕೌಶಿಕ್ ದಿನಕರ್ ಶೆಟ್ಟಿ ರನ್ನರ್ ಅಪ್, ನೇಗಿಲು ಹಿರಿಯ ವಿಭಾಗದಲ್ಲಿ ಬೋಳದಗುತ್ತು ಸತೀಶ್ ಶೆಟ್ಟಿ ಚಾಂಪಿಯನ್, ಕಕ್ಕೆಪದವು ಪೆಂರ್ಗಾಲು ಕೃತಿಕ್ ಬಾಬು ತನಿಯಪ್ಪ ಗೌಡ ರನ್ನರ್ ಅಪ್, ನೇಗಿಲು ಕಿರಿಯ ವಿಭಾಗದಲ್ಲಿ ಮುನಿಯಾಲು ಉದಯ ಕುಮಾರ್ ಶೆಟ್ಟಿ ಚಾಂಪಿಯನ್, ನಿಟ್ಟೆಪರಪ್ಪಾಡಿ ಹೊಸವಕ್ಲು ಸುರೇಶ್ ಕೋಟ್ಯಾನ್ ಮತ್ತು ನಲ್ಲೂರು ಬಜಗೋಳಿ ಶಿವಪ್ರಸಾದ್ ನಿಲಯ ದಿನೇಶ್ ಭಂಡಾರಿ ರನ್ನರ್ ಅಪ್ ಪ್ರಶಸ್ತಿ ಪಡೆಯಲಿದ್ದಾರೆ.
ಕಂಬಳ ಕರೆಯ ಓಟಗಾರರಿಗೂ ಪ್ರಶಸ್ತಿ:ಕೋಣದ ಓಟಗಾರರಲ್ಲೂ ಪದಕದ ಆಧಾರದಲ್ಲಿ ಚಾಂಪಿಯನ್ ಆಯ್ಕೆ ಮಾಡಲಾಗಿದೆ.
ಕನೆಹಲಗೆ ವಿಭಾಗದಲ್ಲಿ ಬೈಂದೂರು ಮಹೇಶ್ ಪೂಜಾರಿ ಚಾಂಪಿಯನ್, ತೆಕ್ಕಟ್ಟೆ ಸುಧೀರ್ ದೇವಾಡಿಗ ರನ್ನರ್ ಅಪ್, ಅಡ್ಡಹಲಗೆ ವಿಭಾಗದಲ್ಲಿ ಭಟ್ಕಳ ಹರೀಶ್ ಚಾಂಪಿಯನ್, ಸಾವ್ಯ ಗಂಗಯ್ಯ ಪೂಜಾರಿ ರನ್ನರ್ ಅಪ್, ಹಗ್ಗ ಹಿರಿಯ ವಿಭಾಗದಲ್ಲಿ ಬಂಬ್ರಾಣಬೈಲು ವಂದಿತ್ ಶೆಟ್ಟಿ ಚಾಂಪಿಯನ್, ಕೊಳಕೆ ಇರ್ವತ್ತೂರು ಆನಂದ್ ರನ್ನರ್ ಅಪ್, ಹಗ್ಗ ಕಿರಿಯ ವಿಭಾಗದಲ್ಲಿ ಭಟ್ಕಳ ಶಂಕರ್ ನಾಯ್ಕ್ ಚಾಂಪಿಯನ್, ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ರನ್ನರ್ ಅಪ್, ನೇಗಿಲು ಹಿರಿಯ ವಿಭಾಗದಲ್ಲಿ ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ ಚಾಂಪಿಯನ್, ಬೈಂದೂರು ಮಂಜುನಾಥ ಗೌಡ ರನ್ನರ್ ಅಪ್, ನೇಗಿಲು ಕಿರಿಯ ವಿಭಾಗದಲ್ಲಿ ಮಾಸ್ತಿಕಟ್ಟೆ ಸ್ವರೂಪ್ ಚಾಂಪಿಯನ್, ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ ರನ್ನರ್ ಅಪ್ ಪ್ರಶಸ್ತಿ ಪಡೆಯಲಿದ್ದಾರೆ.ಕೋಣಗಳಿಗೂ ಗೌರವ!
ಸಾಧಕ ಕೋಣಗಳಿಗೂ ಚಾಂಪಿಯನ್ ಪ್ರಶಸ್ತಿಗೆ ಪರಿಗಣಿಸಲಾಗಿದೆ. ಬೋಳಾರ ಕಾಳೆ ಮತ್ತು ಕುಟ್ಟಿಕೋಣ (ಕನೆಹಲಗೆ), ನಾರಾವಿ ಬಾಬು ಕೋಣ (ಅಡ್ಡ ಹಲಗೆ), ನಂದಳಿಕೆ ಮೋಡ ಕೋಣ (ಹಗ್ಗ ಹಿರಿಯ), ಕಾರ್ಕಳ ನೆಕ್ಲಾಜೆ ಪಾಂಡು ಕೋಣ (ಹಗ್ಗ ಕಿರಿಯ), ಸುರತ್ಕಲ್ ಪಾಂಚಜನ್ಯ ಗಂಡುಕೋಣ (ಹಗ್ಗ ಕಿರಿಯ), ನಾವುಂದ ಪುಟ್ಟೆಕೋಣ (ನೇಗಿಲು ಹಿರಿಯ), ಮುನಿಯಾಲು ಮೋಡ ಮತ್ತು ಜಿಂಕೆ (ನೇಗಿಲು ಕಿರಿಯ) ಸಾಧಕ ಕೋಣಗಳ ವಿಭಾಗದಲ್ಲಿ ಚಾಂಪಿಯನ್ ಪ್ರಶಸ್ತಿ ಪಡೆಯಲಿದೆ.24 ಕಂಬಳ ಸಂಘಟಕರಿಗೆ ಗೌರವಾರ್ಪಣೆ:
2023-24ನೇ ಸಾಲಿನಲ್ಲಿ ನಡೆದ 24ಕಂಬಳಗಳ ಸಂಘಟಕರಿಗೂ ಈ ಸಂದರ್ಭ ಗೌರವಾರ್ಪಣೆ ನಡೆಯಲಿದೆ. ಇದು ಮಾತ್ರವಲ್ಲದೆ 27 ಮಂದಿ ತೀರ್ಪುಗಾರರಿಗೆ, 15 ಮಂದಿ ಅತ್ಯುತ್ತಮ ಕೋಣ ಬಿಡಿಸುವವರಿಗೆ ಗಣ್ಯರ ಉಪಸ್ಥಿತಿಯಲ್ಲಿ ಗೌರವ ಸನ್ಮಾನ ನಡೆಯಲಿದೆ ಎಂದು ಪ್ರಶಸ್ತಿ ತಂಡದ ಪ್ರಮುಖರು ತಿಳಿಸಿದ್ದಾರೆ.