ಕನ್ನಡಪ್ರಭ ವಾರ್ತೆ ಬೆಂಗಳೂರು

ಲಾಕಪ್‌ ಡೆತ್ ಅಥವಾ ಪೊಲೀಸ್ ವಶದಲ್ಲಿದ್ದಾಗ ವ್ಯಕ್ತಿಗಳ ಶಂಕಾಸ್ಪದ ಸಾವು ಪ್ರಕರಣ ಸಂಬಂಧ ತನಿಖೆಗೆ ಹೊಸ ಮಾರ್ಗಸೂಚಿ ನೀಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಸುತ್ತೋಲೆ ಹೊರಡಿಸಿದ್ದಾರೆ. ಅಲ್ಲದೆ, ಠಾಣೆಗಳಲ್ಲಿ ಆರೋಪಿ ಶಂಕಾಸ್ಪದ ಸಾವು ಕುರಿತು ಸೂಕ್ತ ತನಿಖೆಗೆ ಅಪರಾಧ ತನಿಖಾ ಇಲಾಖೆ (ಸಿಐಡಿ)ಗೆ ಡಿಜಿಪಿ ಕಟ್ಟಪ್ಪಣೆ ಮಾಡಿದ್ದಾರೆ.

ಹೊಸ ಮಾರ್ಗ ಸೂಚಿ ಹೀಗಿದೆ:

ಪೊಲೀಸ್ ವಶದಲ್ಲಿದ್ದಾಗ ವ್ಯಕ್ತಿ ಮೇಲೆ ದೌರ್ಜನ್ಯ ನಡೆದು ಸಾವು ಸಂಭವಿಸಿದರೆ ಕೂಡಲೇ ಯಾವುದೇ ವಿಳಂಬವಿಲ್ಲದೆ ಸ್ಥಳೀಯ ಠಾಣಾಧಿಕಾರಿ ಎಫ್‌ಐಆರ್ ದಾಖಲಿಸಬೇಕು. ಈ ತಕ್ಷಣವೇ ಹಿರಿಯ ಅಧಿಕಾರಿಗಳಿಗೆ ವರದಿ ರವಾನಿಸಬೇಕು.ಈ ಪ್ರಕರಣ ಸಿಐಡಿ ತನಿಖೆಗೆ ಹಸ್ತಾಂತರವಾಗುವ ಮುನ್ನವೇ ಸೆಕ್ಷನ್ 103 ಮತ್ತು 185ರಡಿ ಘಟನಾ ಸ್ಥಳದ ಮಹಜರ್ ಮಾಡಬೇಕು. ಘಟನೆ ನಡೆದ ಪೊಲೀಸ್ ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ತಕ್ಷಣವೇ ಶಪಡಿಸಿಕೊಳ್ಳಬೇಕು.ಸಂತ್ರಸ್ತರ ಹೇಳಿಕೆಯನ್ನು ಆಡಿಯೋ-ವಿಡಿಯೋ ಮೂಲಕವೇ ರೆಕಾರ್ಡ್ ಮಾಡುವುದು ಕಡ್ಡಾಯ.

ವೈದ್ಯಕೀಯ ತಪಾಸಣಾ ವರದಿ ಪಡೆದು, ಸಿಐಡಿ ಬರುವವರೆಗೂ ಸಾಕ್ಷ್ಯಗಳನ್ನು ಸುರಕ್ಷಿತವಾಗಿಡಬೇಕು. ತಮಗೆ ಪ್ರಕರಣ ವರ್ಗಾವಣೆ ಬಳಿಕ ಬಳಿಕ ಸಿಐಡಿ ತನಿಖಾಧಿಕಾರಿಗಳು ಹಳೇ ಡೈರಿಗಳನ್ನು ಪರಿಶೀಲಿಸುವುದು ಮಾತ್ರವಲ್ಲದೆ, ಖುದ್ದಾಗಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಹಜರ್ ಸರಿಯಾಗಿದೆಯೇ ಎಂದು ಮರುಪರಿಶೀಲಿಸಬೇಕು ಸಾಕ್ಷಿಗಳ ಹೇಳಿಕೆಯನ್ನು ಪುನರ್‌ ಪರಿಶೀಲಿಸಬೇಕು.


ಸಿಸಿಟಿವಿ ಡಿವಿಆರ್, ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ ಡಿವೈಸ್‌ಗಳನ್ನು ಸೀಜ್ ಮಾಡಬೇಕು. ಲಾಕಪ್ ಡೆತ್ ಆದಲ್ಲಿ ತಕ್ಷಣವೇ ಜುಡಿಷಿಯಲ್ ಮ್ಯಾಜಿಸ್ಟ್ರೇಟ್‌ಗೆ ಮಾಹಿತಿ ನೀಡಿ ಮರಣೋತ್ತರ ಪರೀಕ್ಷೆ (ಇನ್‌ಕ್ವೆಸ್ಟ್) ಹಾಗೂ ಮ್ಯಾಜಿಸ್ಟ್ರೇಟ್ ತನಿಖೆಗೆ ಕೋರಬೇಕು. ಶವಪರೀಕ್ಷೆ ಮತ್ತು ಇನ್‌ಕ್ವೆಸ್ಟ್ ಮಹಜರ್ ಸಂಪೂರ್ಣ ವಿಡಿಯೋಗ್ರಫಿ ಮಾಡಿಕೊಳ್ಳಬೇಕು. ಎಫ್‌ಎಸ್‌ಎಲ್ (FSL) ತಜ್ಞರ ತಂಡ ಭೇಟಿ ನೀಡಿದ ಎರಡು ದಿನದೊಳಗೆ ಬಯಾಲಜಿಕಲ್ ಸ್ಯಾಂಪಲ್‌ಗಳನ್ನು ಕಳುಹಿಸಬೇಕು. ಆರೋಪಿ ಪೊಲೀಸ್ ಅಧಿಕಾರಿಗಳ ವಿರುದ್ಧ ಚಾರ್ಜ್‌ಶೀಟ್ ಹಾಕುವ ಮುನ್ನ ಸೂಕ್ತ ಪ್ರಾಧಿಕಾರದಿಂದ ಪ್ರಾಸಿಕ್ಯೂಷನ್ ಅನುಮತಿ ಪಡೆಯಬೇಕು.