ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
ಪಟ್ಟಣದ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಯಲ್ಲಿ ನೂತನ ಡಯಾಲಿಸಿಸ್ ಕೇಂದ್ರವನ್ನು ಶಾಸಕ ಸಿಮೆಂಟ್ ಮಂಜುನಾಥ್ ಬುಧವಾರ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ತಾಲೂಕಿನಲ್ಲಿ ಮೂತ್ರಕೋಶದ ತೊಂದರೆಯಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಈ ಕೇಂದ್ರ ಹೆಚ್ಚು ಅನುಕೂಲವಾಗಲಿದೆ. ರಾಜ್ಯ ಸರ್ಕಾರ ತಾಲೂಕು ಕೇಂದ್ರದ ಆಸ್ಪತ್ರೆಗಳಲ್ಲಿ ಬಡವರಿಗೆ ಡಯಾಲಿಸಿಸ್ ಸೌಲಭ್ಯ ದೊರಕಿಸಿಕೊಡುವ ಸಲುವಾಗಿ ಈ ಸೇವೆಯನ್ನು ಆರಂಭಿಸಿದೆ. ಕೇಂದ್ರಕ್ಕೆ ಅಗತ್ಯವಿರುವ ಸೌಲಭ್ಯ ಹಾಗೂ ಸಿಬ್ಬಂದಿಯನ್ನು ಒದಗಿಸಲಾಗಿದ್ದು , ಅಗತ್ಯವಿರುವವರು ಇದರ ಸದುಪಯೋಗ ಮಾಡಿಕೊಂಡು ಆರೋಗ್ಯ ಸುಧಾರಿಸಿಕೊಳ್ಳಬೇಕು. ಆಸ್ಪತ್ರೆಯನ್ನು ಶುಚಿಯಾಗಿಡುವ ಜತೆಗೆ ರೋಗಿಗಳಿಗೆ ಸ್ಪಂದಿಸಿ ಚಿಕಿತ್ಸೆ ನೀಡಬೇಕು ಎಂದರು.
ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಜಯಪ್ರಕಾಶ್ ಮಾತನಾಡಿ, ಡಯಾಲಿಸಿಸ್ ಕೇಂದ್ರದ ನೂತನ ಕಟ್ಟಡ ಹಾಗೂ ಯಂತ್ರೋಪಕರಣ ಸೇರಿ ಒಟ್ಟು 85 ಲಕ್ಷ ರು. ವೆಚ್ಚದಲ್ಲಿ ಸ್ಥಾಪಿಸಲಾಗಿದೆ. ಕಟ್ಟಡವನ್ನು ಸರ್ಕಾರದ ಅನುದಾನದಲ್ಲಿ ಕಟ್ಟಲಾಗಿದೆ, ಯಂತ್ರೋಪಕರಣಗಳನ್ನು ನೆಪ್ರೋಪ್ಲೆಸ್ ಸಂಸ್ಥೆ ವತಿಯಿಂದ ನೀಡಲಾಗಿದೆ. ಇಲ್ಲಿ ಪ್ರತಿ ದಿನ 6 ಜನರಿಗೆ ಡಯಾಲಿಸಿಸ್ ಮಾಡಲು ಅವಕಾಶವಿದೆ. ನೋಂದಣಿ ಅಗತ್ಯವಾಗಿರುತ್ತದೆ. ಒಬ್ಬರಿಗೆ 1575 ರು.ಗಳು ವೆಚ್ಚ ತಗುಲಲ್ಲಿದ್ದು ಇದನ್ನು ಸರ್ಕಾರವೇ ಭರಿಸುತ್ತದೆ ಎಂದರು.ತಾಲೂಕು ಆರೋಗ್ಯ ಅಧಿಕಾರಿ ನಿಸಾರ್ ಫಾತೀಮಾ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸ್ಟೀಫನ್ ಪ್ರಕಾಶ್, ಆಲೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗಂಗಾಧರ್, ನೆಪ್ರೋಪ್ಲೆಸ್ ವ್ಯವಸ್ಥಾಪಕ ರವಿ, ಪಟ್ಟಣ ಪಂಚಾಯಿತಿ ಸದಸ್ಯ ಹರೀಶ್, ಟಿಎಪಿಸಿಎಂಎಸ್ ನಿರ್ದೇಶಕ ಮಾವನೂರು ಮೋಹನ್, ತಾಲೂಕು ಬಿಜೆಪಿ ಅಧ್ಯಕ್ಷೆ ಉಮಾ ರವಿಪ್ರಕಾಶ್, ನಗರ ಅಧ್ಯಕ್ಷ ಲೋಹಿತ್ ಸೇರಿ ಬಿಜೆಪಿ ಮುಖಂಡರು ಹಾಗೂ ಸಾರ್ವಜನಿಕರು ಹಾಜರಿದ್ದರು.