ರಾಘು ಕಾಕರಮಠ
ಅಂಕೋಲಾ: ಏಳು ವರ್ಷದಿಂದ ಆಮೆಗತಿಯಲ್ಲಿ ಸಾಗಿದ್ದ, ಇಲ್ಲಿಯ ಮಂಜುಗುಣಿ-ಗಂಗಾವಳಿ ನದಿಗೆ ಸೇತುವೆ ಫೆ. 22ರಂದು ಲೋಕಾರ್ಪಣೆಗೊಳ್ಳಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇತುವೆ ಉದ್ಘಾಟಿಸಲಿದ್ದು, ಬಹು ಬೇಡಿಕೆಯ ಕನಸು ಈಡೇರಲಿದೆ.2018ರಲ್ಲಿ ಸೇತುವೆ ನಿರ್ಮಿಸುವ ಯೋಜನೆಗೆ ಚಾಲನೆ ನೀಡಲಾಗಿತ್ತು. ಕುಮಟಾ ತಾಲೂಕಿನ ಗೋಕರ್ಣ ಮತ್ತು ಅಂಕೋಲಾ ತಾಲೂಕನ್ನು ಸಂಪರ್ಕಿಸಲು ಸೇತುವೆ ನಿರ್ಮಿಸಬೇಕೆಂಬ ಬೇಡಿಕೆ ಇತ್ತು. ಆದರೆ, ಸರ್ಕಾರ ಬದಲಾದಂತೆ ಹಾಗೂ ಕೋವಿಡ್ ಕಾರಣದಿಂದ 18 ತಿಂಗಳ ವರೆಗೆ ಸೇತುವೆ ಕಾಮಗಾರಿ ಸ್ಥಗಿತವಾಗಿತ್ತು. ಏಳು ವರ್ಷಗಳ ಬಳಿಕ, ಎರಡು ತಿಂಗಳ ಹಿಂದೆಯಷ್ಟೇ ಸೇತುವೆಯ ಸಂಪರ್ಕ ರಸ್ತೆ ನಿರ್ಮಿಸುವ ಕೆಲಸ ಪುನಾರಂಭಗೊಂಡಿತ್ತು.
315 ಮೀ. ಉದ್ದದ ಸೇತುವೆಯು 10 ಮೀ. ಅಗಲದ ರಸ್ತೆ ಹೊಂದಿದೆ. ಅಂದಾಜು ₹28.71 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಗಂಗಾವಳಿ ಗ್ರಾಮದ ಕಡೆಗೆ 148 ಮೀ. ಮತ್ತು ಮಂಜಗುಣಿಯ ಕಡೆಗೆ 149 ಮೀ. ಸಂಪರ್ಕ ರಸ್ತೆ ನಿರ್ಮಿಸಲಾಗಿದೆ. ಇದರಿಂದ ಗಂಗಾವಳಿ ಮತ್ತು ಅಂಕೋಲಾ ನಡುವೆ 10 ಕಿ.ಮೀ.ನಷ್ಟು ಅಂತರ ಕಡಿಮೆಯಾಗಲಿದೆ.ಮಂಜಗುಣಿಯಿಂದ ಅಂಕೋಲಾ ವರೆಗಿನ ರಸ್ತೆ ಕಿರಿದಾಗಿದ್ದು, ಎರಡು ವಾಹನ ಸಂಚರಿಸಲು ಸ್ವಲ್ಪ ಅಡಚಣೆಯಾಗಲಿದೆ. ಈ ಸಮಸ್ಯೆಯನ್ನೂ ಪರಿಹರಿಸಿದರೆ ವಾಹನ ಸವಾರರಿಗೆ ಕಾರವಾರ, ಗೋವಾ ಸಮೀಪವಾಗಲಿದೆ ಎಂದೂ ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಂತರ ಕಡಿಮೆ: ಅಂಕೋಲಾದಿಂದ ಗೋಕರ್ಣಕ್ಕೆ 26 ಕಿಮೀ ಅಂತರವಿದೆ. ಮಂಜಗುಣಿ-ಗಂಗಾವಳಿ ಸೇತುವೆಯ ನಿರ್ಮಾಣದಿಂದ ಕೇವಲ 15 ಕಿಮೀ ಅಂತರದಲ್ಲಿ ಗೋಕರ್ಣ ತಲುಪಬಹುದಾಗಿದೆ.
ಬಾಂಧವ್ಯದ ಕೊಂಡಿ: ಸೇತುವೆ ಮಂಜೂರು ಮಾಡಿಸಿದ್ದರೂ ಕೆಲಸ ಪೂರ್ಣಗೊಳ್ಳದ ಬೇಸರವಿತ್ತು. ಆದ್ಯತೆ ಮೇರೆಗೆ ಕಾಮಗಾರಿ ಮುಗಿಸಲು ಮುತುವರ್ಜಿ ವಹಿಸಿದ್ದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇತುವೆ ಉದ್ಘಾಟಿಸಲಿದ್ದಾರೆ. ಈ ಸೇತುವೆಯಿಂದ ಎರಡು ತಾಲೂಕುಗಳ ಸಂಪರ್ಕ ಹಾಗೂ ಬಾಂಧವ್ಯದ ಕೊಂಡಿ ಇನ್ನಷ್ಟು ಗಟ್ಟಿಗೊಳ್ಳಲಿದೆ ಎಂದು ಶಾಸಕ ಸತೀಶ ಸೈಲ್ ಹೇಳಿದರು.ಮಂಜಗುಣಿ-ಗಂಗಾವಳಿ ಸೇತುವೆಯ ನಿರ್ಮಾಣದಿಂದ ಇಲ್ಲಿನ ಪ್ರವಾಸೋಧ್ಯಮ ಚಟುವಟಿಕೆಗೆ ಇನ್ನಷ್ಟು ಹುರುಪು ಸಿಗಲಿದೆ. ಅಂಕೋಲಾ- ಕುಮಟಾ ತಾಲೂಕಿನ ಗೋಕರ್ಣದ ಆರ್ಥಿಕ ಚಟುವಟಿಕೆಯ ಪ್ರಗತಿಯು ಸಹ ಇನ್ನಷ್ಟು ಸುಧಾರಿಸಲಿದೆ ಎಂದು ಮಂಜಗುಣಿಯ ಶ್ರೀಪಾದ ನಾಯ್ಕ ಹೇಳಿದರು.