ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಪ್ರಯೋಗಾಲಯಗಳಲ್ಲಿ ಕಾರ್ಯನಿರ್ವಹಿಸುವ ವಿಜ್ಞಾನಿಗಳು ಮತ್ತು ಸಂಶೋಧನಾರ್ಥಿಗಳಿಗೆ ಸಾಮಾಜಿಕ ಪ್ರಜ್ಞೆ ಮತ್ತು ಸಮಾಜದ ಅಗತ್ಯತೆ ಕುರಿತು ತಿಳಿವಳಿಕೆ ಇರಬೇಕು. ವಿಷಯ ಆಧಾರಿತ ಮೂಲಭೂತ ಜ್ಞಾನ ಮತ್ತು ವಿಭಿನ್ನ ಆಲೋಚನೆಗಳಿಂದ ವೈಜ್ಞಾನಿಕವಾಗಿ ಹೊಸ ಆವಿಷ್ಕಾರಗಳ ಕಂಡುಕೊಳ್ಳಲು ಸಾಧ್ಯ ಎಂದು ಗುಲ್ಬರ್ಗ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಬಿ.ಜಿ.ಮೂಲಿಮನಿ ಹೇಳಿದರು.ದಾವಣಗೆರೆ ವಿಶ್ವವಿದ್ಯಾನಿಲಯದ ಎಂ.ಬಿ.ಎ ಸಭಾಂಗಣದಲ್ಲಿ ಶುಕ್ರವಾರ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶ್ರೇಷ್ಠ ವಿಜ್ಞಾನಿಗಳು ಜಗತ್ತಿನಲ್ಲಿ ನಡೆಯುತ್ತಿರುವ ಘಟನೆಗಳನ್ನು ವಿಭಿನ್ನ ಆಯಾಮ ಮತ್ತು ದೃಷ್ಟಿಕೋನದಿಂದ ನೋಡಿ ಗ್ರಹಿಸುವ ಮೂಲಕ ಹೊಸ ಸಿದ್ಧಾಂತಗಳನ್ನು ಮತ್ತು ಆವಿಷ್ಕಾರಗಳ ಬೆಳಕಿಗೆ ತಂದಿದ್ದಾರೆ. ವಿಜ್ಞಾನದ ವಿದ್ಯಾರ್ಥಿಗಳು ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬೀಳದೆ ನಿಮ್ಮ ಸ್ವಂತ ಬುದ್ಧಿಶಕ್ತಿ, ಕ್ರಿಯಾಶೀಲತೆ ಮತ್ತು ವೈಜ್ಞಾನಿಕ ಕಲಿಕೆಯಿಂದ ಹೊಸ ಆವಿಷ್ಕಾರಗಳನ್ನು ಬೆಳಕಿಗೆ ತರಲು ಸಾಧ್ಯವಾಗುತ್ತದೆ ಎಂದರು.
ಉನ್ನತ ತಂತ್ರಜ್ಞಾನ ಆಧಾರಿತ ಕೌಶಲ್ಯ ಅಧ್ಯಯನದಿಂದ ಉತ್ತಮ ಪ್ರಜೆಗಳ ನಿರ್ಮಾಣಮಾಡುವ ಬೃಹತ್ ಜವಾಬ್ದಾರಿ ದೇಶದ ಎಲ್ಲಾ ವಿಶ್ವವಿದ್ಯಾನಿಲಯಗಳ ಮೇಲಿದೆ. ವಿಜ್ಞಾನ ಜ್ಞಾನ ಸಾಗರವಾಗಿದೆ ವೈಜ್ಞಾನಿಕ ಅಲೋಚನೆಗಳಿಗೆ ಮಿತಿ ಇರುವುದಿಲ್ಲ ಪ್ರತಿಯೊಂದು ಕ್ಷೇತ್ರದಲ್ಲಿ ವೈಜ್ಞಾನಿಕ ವಿಷಯಗಳ ಅಳವಡಿಕೆಯಿಂದ ಮಾತ್ರ ಪ್ರಗತಿ ಸಾಧ್ಯ. ವಿದ್ಯಾರ್ಥಿಗಳು ಅಧ್ಯಯನ ಮಾಡುವ ಮೊದಲು ವಿಷಯದ ಸಂಪೂರ್ಣ ಮಾಹಿತಿ ತಿಳಿದುಕೊಳ್ಳುವುದು ಅವಶ್ಯಕ, ವಿಜ್ಞಾನ ಮತ್ತು ತಂತ್ರಜ್ಞಾನ ಪರಸ್ಪರ ಸಹಭಾಗಿತ್ವದಲ್ಲಿ ಇರುವುದರಿಂದ ಅಧ್ಯಯನದಲ್ಲಿ ತಂತ್ರಜ್ಞಾನ ಆಧಾರಿತ ಕೌಶಲ್ಯ ಹಾಗೂ ಬೌದ್ಧಿಕ ಜ್ಞಾನ ಬೆಳಸಿಕೊಳ್ಳುವುದರಿಂದ ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಿಕೋಳಬೇಕು ಎಂದರು.ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಡಿ. ಕುಂಬಾರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸುತ್ತಮುತ್ತಲು ನಡೆಯುತ್ತಿರುವ ಘಟನೆಗಳನ್ನು ತೆರೆದ ಕಣ್ಣಿನಿಂದ ನೋಡುವುದರಿಂದ ಸಾಮಾಜಿಕ ವೈಪರಿತ್ಯ ಮತ್ತು ಅಗತ್ಯತೆಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಾಮಾಜಿಕ ಜ್ಞಾನ ಮತ್ತು ವೈಜ್ಞಾನಿಕ ಬೆಳವಣಿಗೆಗಳ ಅರಿವು ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಇಂದಿನ ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನದ ಪ್ರಭಾವದಿಂದ ಪುಸ್ತಕಗಳನ್ನು ಓದುವ ಅಭ್ಯಾಸ ಕ್ಷಿಣಿಸುತ್ತಿದೆ. ಕೃತಕ ಬುದ್ದಿಮತೆಯಿಂದ ವಿದ್ಯಾರ್ಥಿಗಳಲ್ಲಿನ ಕ್ರೀಯಾಶೀಲ ಮನೋಭಾವಕ್ಕೆ ದಕ್ಕೆ ಉಂಟಾಗುತ್ತಿರುವುದು ಅಪಾಯಕಾರಿ ಸಂಗತಿಯಾಗಿದೆ. ವಿದ್ಯಾರ್ಥಿಗಳು ಗ್ರಂಥಾಲಯಗಳಿಗೆ ಭೇಟಿ ನೀಡಿ ವಿವಿಧ ವಿಷಯಗಳ ಕುರಿತು ಪುಸ್ತಕಗಳನ್ನು ಓದುವ ಅಭ್ಯಾಸ ಮೈಗೂಡಿಸಿಕೊಳ್ಳುವುದರಿಂದ ಸಾಮಾಜಿಕ ಪ್ರಜ್ಞೆ ಮತ್ತು ಮೂಲಭೂತ ಜ್ಞಾನ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ ಇದರಿಂದ ದಿನಗಳಲ್ಲಿ ವಿದ್ಯಾರ್ಥಿಗಳು ಯಾವುದೇ ವಿಷಯದ ಕುರಿತು ಅಧ್ಯಯನ ಮತ್ತು ಸಂಶೋಧನೆ ಕೈಗೊಳ್ಳಲು ನೆರವಾಗುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ವಿಜ್ಞಾನ ನಿಕಾಯದ ಡೀನ್ ಪ್ರೊ. ಯು.ಬಿ ಮಹಾಬಲೇಶ್ವರ, ವಿಶ್ವವಿದ್ಯಾನಿಲಯದ ಯೋಜನಾ ನಿರ್ವಹಣಾ ಮತ್ತು ಮೌಲ್ಯಮಾಪನ ಮಂಡಳಿ ನಿರ್ದೇಶಕ ಪ್ರೊ. ಡಿ.ಜಿ.ಪ್ರಕಾಶ್ ಇದ್ದರು.