ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೊಸ ರೂಪ: ಡಾ। ಬಿಳಿಮಲೆ

| Published : Jun 24 2024, 01:37 AM IST

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೊಸ ರೂಪ: ಡಾ। ಬಿಳಿಮಲೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೊಸ ಕಾಯಕಲ್ಪ ನೀಡುವುದಾಗಿ ನೂತನ ಅಧ್ಯಕ್ಷ ಡಾ। ಪುರುಷೋತ್ತಮ್‌ ಬಿಳಿಮಲೆ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಕಾಯಕ, ಸಶಕ್ತವಾದ ಭಾಷಾ ನೀತಿ ರಚನೆ, ಶತಮಾನದ ಕನ್ನಡ ಶಾಲೆಗಳ ಅಭಿವೃದ್ಧಿ, ಹೊರ ರಾಜ್ಯದವರಿಗೆ ಕನ್ನಡ ಕಲಿಕೆ, ಸೌಹಾರ್ದ ಸಾರುವ 100 ಪುಸ್ತಕ ಪ್ರಕಟಣೆ, ಪ್ರತಿ ಊರಿನಲ್ಲೂ ಆ ಗ್ರಾಮದ ಹೆಸರು ಕಾಣಿಸುವಂತೆ ಫಲಕ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.

ಶಿವರಾಮ ಕಾರಂತ ವೇದಿಕೆ ಮತ್ತು ವಿನಾಯಕ ದೇವಸ್ಥಾನ ಸಮಿತಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಪ್ರೊ.ಎಲ್‌.ಎಸ್‌.ಶೇಷಗಿರಿ ರಾವ್‌ ಶತಮಾನೋತ್ಸವ ಸಂಭ್ರಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೊಸ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಿದ್ದೇನೆ. ಸಶಕ್ತವಾದ ಭಾಷಾ ನೀತಿ ರೂಪಿಸಿ ಕೊರಗ, ಹವ್ಯಕ ಸೇರಿದಂತೆ ಅಳಿವಿನಂಚಿನತ್ತ ತೆರಳುತ್ತಿರುವ ಭಾಷೆಗಳನ್ನು ರಕ್ಷಿಸಲಾಗುವುದು. ರಾಜ್ಯದಲ್ಲಿರುವ ಶತಮಾನ ಕಂಡ ಸುಮಾರು ನೂರೈವತ್ತು ಶಾಲೆಗಳನ್ನು ದಾನಿಗಳ ಸಹಾಯದಿಂದ ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಕನ್ನಡ ಕಲಿಸಲು 15 ಕೇಂದ್ರ ಆರಂಭ:

ಬೆಂಗಳೂರು, ಮೈಸೂರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಹೊರ ರಾಜ್ಯದವರಿಗೆ ಕನ್ನಡ ಕಲಿಸಲು 10-15 ಕೇಂದ್ರಗಳನ್ನು ಆರಂಭಿಸಲಾಗುವುದು. ಸೌಹಾರ್ದತೆ ಸಾರುವ 100 ಚಿಕ್ಕ ಪುಸ್ತಕಗಳನ್ನು ಮುದ್ರಿಸಿ ರಾಜ್ಯಾದ್ಯಂತ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು. ಊರಿನ ಹೆಸರಿನಲ್ಲೇ ಕನ್ನಡ ಪದಗಳನ್ನು ಹೊಂದಿರುವ ಸುಮಾರು 65 ಸ್ಥಳಗಳು ರಾಜ್ಯದಲ್ಲಿದ್ದು ಇವುಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ಎನ್‌ಎಸ್‌ಎಸ್‌ ವಿದ್ಯಾರ್ಥಿಗಳನ್ನು ಬಳಸಿಕೊಂಡು ರಾಜ್ಯದ ಎಲ್ಲ ಗ್ರಾಮಗಳಲ್ಲೂ ಆ ಊರಿನ ಹೆಸರು ಪ್ರಮುಖ ಸ್ಥಳದಲ್ಲಿ ಕಾಣಿಸುವಂತೆ ಫಲಕ ಹಾಕಲು ಕ್ರಮ ಕೈಗೊಳ್ಳಲಾಗುವುದು. ಗಡಿನಾಡ ಮಕ್ಕಳನ್ನು ಪ್ರೋತ್ಸಾಹಿಸಲು ನೀಡುತ್ತಿರುವ ಬಹುಮಾನ ವ್ಯವಸ್ಥೆಯನ್ನು ಮುಂದುವರೆಸಲಾಗುವುದು. ಭವಿಷ್ಯದ ಕಾರ್ಯಚಟುವಟಿಕೆ ಬಗ್ಗೆ ಚರ್ಚಿಸಲು ಪ್ರಾಧಿಕಾರದ ಮಾಜಿ ಅಧ್ಯಕ್ಷರ ಸಭೆಯನ್ನು ಮೂರ್ನಾಲ್ಕು ದಿನದಲ್ಲಿ ಕರೆಯಲಾಗುವುದು ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಪುರುಷೋತ್ತಮ ಬಿಳಿಮಲೆ ಅವರನ್ನು ಅಭಿನಂದಿಸಲಾಯಿತು. ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಕ ಡಾ। ಟಿ.ಎನ್‌.ವಾಸುದೇವಮೂರ್ತಿ, ವೇದಿಕೆ ಅಧ್ಯಕ್ಷೆ ದೀಪಾ ಫಡ್ಕೆ ಉಪಸ್ಥಿತರಿದ್ದರು.ಕನ್ನಡ ಸಮೃದ್ಧಗೊಳಿಸುವ ಕಾರ್ಯ

ವಿಮರ್ಶಕ ಎಸ್‌.ಆರ್‌.ವಿಜಯಶಂಕರ ಮಾತನಾಡಿ, ಶೇಷಗಿರಿ ರಾವ್‌ ಅವರು ಕತೆ, ಕಾವ್ಯ, ಕಾದಂಬರಿ ಸೇರಿದಂತೆ ಹಲವು ಪ್ರಕಾರಗಳಲ್ಲಿ ತೊಡಗಿಕೊಂಡಿದ್ದರೂ ಅವರನ್ನು ಗಮನಿಸುವುದು, ಗುರುತಿಸುವುದು ವಿಮರ್ಶಾ ವಾಗ್ಮಯರಾಗಿ ಅನುವಾದದ ಮೂಲಕ ಕನ್ನಡ ಸಮೃದ್ಧಿಗೊಳಿಸುವ ಉದ್ದೇಶವನ್ನು ಅವರು ಹೊಂದಿದ್ದರು. ಪಾಶ್ಚಿಮಾತ್ಯರ ಚಿತ್ರಕಲೆ, ಸಂಗೀತ, ವಿಜ್ಞಾನ ಮತ್ತಿತರ ಪ್ರಕಾರಗಳನ್ನು ಕನ್ನಡಕ್ಕೆತರುವ ಮೂಲಕ ಉತ್ತಮ ಕಾರ್ಯ ಮಾಡಿದರು ಎಂದು ಸ್ಮರಿಸಿಕೊಂಡರು.