ಉಪನ್ಯಾಸಕರಲ್ಲಿ ಕಲಿಕೆ ಮನೋಭಾವವಿರಬೇಕು: ಪ್ರೊ.ಶಿವಲಿಂಗಸ್ವಾಮಿ

| Published : Jun 24 2024, 01:37 AM IST

ಉಪನ್ಯಾಸಕರಲ್ಲಿ ಕಲಿಕೆ ಮನೋಭಾವವಿರಬೇಕು: ಪ್ರೊ.ಶಿವಲಿಂಗಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ತುಮಕೂರು ಜಿಲ್ಲೆಯ ಇತ್ತೀಚಿನ ಪಲಿತಾಂಶ ಉತ್ತಮವಾಗಿದ್ದು, ಇದಕ್ಕೆ ಮುಖ್ಯ ಕಾರಣ ಪೋರಂ ವತಿಯಿಂದ ಮಾಡಿದ, ಮಾದರಿ ಪ್ರಶ್ನೆ ಪತ್ರಿಕೆ ಬಿಡಿಸುವಿಕೆ, ನಾಲೆಡ್ಜ್ ಶೇರಿಂಗ್ ಪ್ರೋಗ್ರಾಮ್ ನಂತ ಹತ್ತು ಹಲವು ಕೆಲಸಗಳೇ ಆಗಿದ್ದು. ಇಂಗ್ಲೀಷ್ ಭಾಷೆಯಲ್ಲಿ ಶೇ. 78 ರಷ್ಟು ಫಲಿತಾಂಶಕ್ಕೆ ವೇದಿಕೆಯ ಮತ್ತು ಜಿಲ್ಲೆ ಉಪನ್ಯಾಸಕರ ಪಾತ್ರ ಮಹತ್ವದ್ದು.

ಕನ್ನಡಪ್ರಭ ವಾರ್ತೆ ತುಮಕೂರು

ಉಪನ್ಯಾಸಕರಲ್ಲಿ ಸದಾ ಕಲಿಕಾ ಮನೋಭಾವ ಜಾಗೃತವಾಗಿರಬೇಕು ಮತ್ತು ಸದಾ ಅವರು ಕಲಿಕೆಯಲ್ಲಿರಬೇಕು. ನಾವು ಪಾಠ ಮಾಡುತ್ತೇವೆ ಎಂಬುದು ಭ್ರಮೆಯೇ ಹೊರತು ನಿಜವಾಗಲು ಕಲಿಸುತ್ತಿಲ್ಲ. ಕಾಲೇಜು ಕೊಠಡಿಗಳಲ್ಲಿ ಉಪನ್ಯಾಸಕರಿಗೆ ಅಥವಾ ಶಿಕ್ಷಕರಿಗೆ ಕಲಿಕೆಯೇ ಹೆಚ್ಚಾಗುತ್ತದೆ. ಆದ್ದರಿಂದ ನಾವೆಲ್ಲಾ ಕಲಿಕಾರ್ತಿಗಳೇ ಆಗಿರುತ್ತೇವೆ ಎಂದು ತುಮಕೂರು ವಿಶ್ವವಿದ್ಯಾನಿಲಯ, ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥ ಪ್ರೊ. ಎಚ್. ಕೆ. ಶಿವಲಿಂಗಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಏಂಪ್ರೆಸ್ ಕಾಲೇಜಿನಲ್ಲಿ ತುಮಕೂರು ಇಂಗ್ಲೀಷ್ ಲೆಕ್ಚರ್ಸ್‌ ಫೋರಂನ ವತಿಯಿಂದ ಆಯೋಜಿಸಿದ್ದ ಒಂದು ದಿನದ ಕಾರ‍್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಉಪನ್ಯಾಸಕರು ಸ್ವಯಂ ಕೃಷಿ(ಸೆಲ್ಫ್ ಕಲ್ಟಿವೇಷನ್), ಸ್ವಪ್ರಗತಿ (ಸೆಲ್ಫ್ ಡೆವೆಲಪ್ಮೆಂಟ್) ಮತ್ತು ಸ್ವ ಅಭಿವ್ಯಕ್ತಿ(ಸೆಲ್ಫ್ ಎಕ್ಸ್ಪ್ರೆಷನ್) ಎಂಬ ಮೂರು ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು. ನಾವು ಪಾಠ ಮಾಡುವ ಯಾವುದೇ ವಿಷಯದಲ್ಲಿ ಹೆಚ್ಚೆಚ್ಚು ಸ್ವಯಂ ಕೃಷಿ ಮಾಡಿದಲ್ಲಿ, ಆಳವಾದ ಜ್ಞಾನ ಸಂಪಾದನೆ ಸಾಧ್ಯವಾಗುತ್ತದೆ. ಅಗಾಧವಾದ ಜ್ಞಾನದಿಂದ ವಿದ್ಯಾರ್ಥಿಗಳಿಗೆ ಹೊಸತು ಕಲಿಸಬಹುದು. ಇರುವುದನ್ನೇ ಹೊಸದಾಗಿ ಹೇಳಬಹುದು. ಆಗ ಮಾತ್ರವೇ ಕಲಿಕೆ ಸಾಧ್ಯವಾಗುತ್ತದೆ. ಉಪನ್ಯಾಸಕ ವೃತ್ತಿಯಲ್ಲಿರುವವರಿಗೂ ಪ್ರತಿದಿನ ವಿವಿಧ ವಿಚಾರಗಳನ್ನು, ಸಾಹಿತ್ಯವನ್ನು ಓದುತ್ತಾ, ತಿಳಿದುಕೊಳ್ಳುತ್ತಾ ಸ್ವಪ್ರಗತಿ ಆಗಬೇಕು. ಹಾಗೆಯೇ ತಿಳಿದ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಅಭಿವ್ಯಕ್ತಿ ಮುಖ್ಯವಾಗಿದ್ದು, ಸ್ವಅಭಿವ್ಯಕ್ತಿಯನ್ನು ರೂಢಿಸಿಕೊಳ್ಳಬೇಕು ಎಂದು ಕರೆ ಕೊಟ್ಟರು.

ಕಾರ‍್ಯಾಗಾರದಲ್ಲಿ ವಿಶೇಷ ಉಪನ್ಯಾಸ ನೀಡಿದ ಭ್ರಮರಿ ಪಾಂಡೆ ಮಾತನಾಡಿ, ಕೊರೋನೋತ್ತರ ಕಾಲಘಟ್ಟದಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಪಾಠ ಮಾಡುವುದು ಒಂದು ಸವಾಲಿನ ವಿಷಯವೇ ಆಗಿದ್ದು. ಈಗಿನ ಉಪನ್ಯಾಸಕರು ವಿವಿಧ ಕಲಿಕಾ ಸಾಮಗ್ರಿಗಳನ್ನು ಬಳಸಲು, ವಿಶೇಷ ವಿಧಾನಗಳನ್ನು ಬಳಸಲು ತಮ್ಮಷ್ಟಕ್ಕೆ ತಯಾರಾಗಬೇಕು. ಹೊಸ ಬೋಧನಾ ಕಲೆಗಳಿಗೆ ತೆರೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಂಗಾಧರ ಮಾತನಾಡಿ, ತುಮಕೂರು ಜಿಲ್ಲೆಯ ಇತ್ತೀಚಿನ ಪಲಿತಾಂಶ ಉತ್ತಮವಾಗಿದ್ದು, ಇದಕ್ಕೆ ಮುಖ್ಯ ಕಾರಣ ಪೋರಂ ವತಿಯಿಂದ ಮಾಡಿದ, ಮಾದರಿ ಪ್ರಶ್ನೆ ಪತ್ರಿಕೆ ಬಿಡಿಸುವಿಕೆ, ನಾಲೆಡ್ಜ್ ಶೇರಿಂಗ್ ಪ್ರೋಗ್ರಾಮ್ ನಂತ ಹತ್ತು ಹಲವು ಕೆಲಸಗಳೇ ಆಗಿದ್ದು. ಇಂಗ್ಲೀಷ್ ಭಾಷೆಯಲ್ಲಿ ಶೇ. 78 ರಷ್ಟು ಫಲಿತಾಂಶಕ್ಕೆ ವೇದಿಕೆಯ ಮತ್ತು ಜಿಲ್ಲೆ ಉಪನ್ಯಾಸಕರ ಪಾತ್ರ ಮಹತ್ವದ್ದು ಎಂದು ಶ್ಲಾಘಿಸಿದರು.

ಫೋರಂನ ಅಧ್ಯಕ್ಷೆ ಪಿ. ಜೆ. ಜಯಶೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂಗ್ಲೀಷ್ ಭಾಷೆಯಲ್ಲಿ ತಾಲೂಕುವಾರು ಅತಿ ಹೆಚ್ಚು ಅಂಕ ಗಳಿಸಿದ 30 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ನಗದು ಬಹುಮಾನ ವಿತರಿಸಲಾಯಿತು.

ಎಂಪ್ರೆಸ್ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಬಿ., ಪೋರಂ ಕಾರ್ಯದರ್ಶಿ ಡಾ. ನವೀನ್ ಕುಮಾರ್ ಹಳೆಮನೆ, ಸಂಘಟನಾ ಕಾರ್ಯದರ್ಶಿ ಡಾ. ಪವನಗಂಗಾಧರ, ಖಜಾಂಚಿ, ಗುರುಪ್ರಸಾದ್, ಉಪಾಧ್ಯಕ್ಷೆ ಆಶಾ ಟಿ.ಎಸ್., ಕವಿತಾ ಹಾಗೂ ತಾಲೂಕು ಪೋರಂ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕಾರ‍್ಯಾಗಾರದಲ್ಲಿ ಎಲ್ಲಾ ತಾಲೂಕುಗಳ ವಿವಿಧ ಕಾಲೇಜುಗಳ ಉಪನ್ಯಾಸಕರು ಭಾಗವಹಿಸಿದ್ದರು. ಪ್ರಾಂಶುಪಾಲೆ ಅಕ್ಕಮ್ಮ ಸ್ವಾಗತ ಗೀತೆ ಹಾಡಿದರು. ಉಪನ್ಯಾಸಕ ಬಿಆರ್ ರವಿ ಸ್ವಾಗತಿಸಿ, ಚಂದ್ರಶೇಖರ್ ವಂದಿಸಿದರು. ಶಾಂತಕುಮಾರಿ ನಿರೂಪಿಸಿದರು.