ಸಸಿ ಹಬ್ಬ: ಚಿಣ್ಣರ ಅಣಕು ಮದುವೆ ಸಂಭ್ರಮ

| Published : Jun 24 2024, 01:37 AM IST

ಸಾರಾಂಶ

ಕಾರಹುಣ್ಣಿಮೆ ಮರುದಿನ ಶನಿವಾರದಂದು ಜರುಗಿದ ವೈಶಿಷ್ಟ್ಯಪೂರ್ಣ ಗ್ರಾಮೀಣ ಸಸಿ ಹಬ್ಬದಂದು ಪುಟ್ಟ ಮಕ್ಕಳು ತಮ್ಮ ನಡುವೆ ಮಾಡಿದ ಅಣುಕು ಮದುವೆಯ ಸಂತೋಷ ಮನೆ ಮಾಡಿತ್ತು.

ಅನಿಲ್ ಕೊಡೇಕಲ್

ಕನ್ನಡಪ್ರಭ ವಾರ್ತೆ ಕೊಡೇಕಲ್

ಕಾರಹುಣ್ಣಿಮೆ ಮರುದಿನ ಶನಿವಾರದಂದು ಜರುಗಿದ ವೈಶಿಷ್ಟ್ಯಪೂರ್ಣ ಗ್ರಾಮೀಣ ಸಸಿ ಹಬ್ಬದಂದು ಪುಟ್ಟ ಮಕ್ಕಳು ತಮ್ಮ ನಡುವೆ ಮಾಡಿದ ಅಣುಕು ಮದುವೆಯ ಸಂತೋಷ ಮನೆ ಮಾಡಿತ್ತು. ಮುಂಗಾರು ಹಂಗಾಮು ಆರಂಭದ ಮೊದಲ ಹಬ್ಬ ಕಾರಹುಣ್ಣಿಮೆ. ಅಂತೆಯೇ ಹುಣ್ಣಿಮೆಯ ಮರುದಿನ ಶನಿವಾರ ಕೊಡೇಕಲ್ ಹೋಬಳಿ ವಲಯದಲ್ಲಿ ಮಕ್ಕಳು ಸಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಕಾರಹುಣ್ಣಿಮೆಯ ಒಂದು ವಾರದ ಮುಂಚೆಯೆ ಮಕ್ಕಳು ಪಾತ್ರೆಯಲ್ಲಿ ಮಣ್ಣು ತುಂಬಿ ಸಜ್ಜೆ, ಗೋದಿ, ಕಡಲೆ ಸೇರಿದಂತೆ ಇನ್ನಿತರ ಬೀಜಗಳನ್ನು ಹಾಕಿ ಅವುಗಳ ಪೋಷಣೆ ಮಾಡುತ್ತಾರೆ. ಕಾರಹುಣ್ಣಿಮೆ ಆಗಮನದ ಹೊತ್ತಿಗೆ ಸಸಿಗಳು ಮೊಳಕೆಯೊಡೆದಿರುತ್ತವೆ. ಕಾರಹುಣ್ಣಿಮೆ ಆಗಮನವನ್ನೆ ಎದುರು ನೋಡುತ್ತಾ, ಕಾದು ಕುಳಿತ ಮಕ್ಕಳು ಮನೆಯಲ್ಲಿ ಮಾಡಿದ ಸಿಹಿ ಅಡುಗೆಯನ್ನು ಮತ್ತು ಮೊಳಕೆಯೊಡೆದ ಸಸಿಗಳ ಪಾತ್ರೆಗಳನ್ನು ತಲೆ ಮೇಲೆ ಹೊತ್ತುಕೊಂಡು ಹತ್ತಿರದ ಜಮೀನುಗಳಿಗೆ ತೆರಳಿ ಅಲ್ಲಿ ಹಾಡು, ನೃತ್ಯ ಸೇರಿದಂತೆ ಇನ್ನಿತರ ಮನೋರಂಜನೆ ಮಾಡಿ ಸಸಿಗಳನ್ನು ನೀರಿನಲ್ಲಿ ವಿಸರ್ಜನೆ ಮಾಡಿ ಭೋಜನ ಮಾಡುತ್ತಾರೆ. ಈ ರೀತಿಯಾಗಿ ಚಿಣ್ಣರು ಆಚರಿಸಿ ಸಂಭ್ರಮಿಸಿದ್ದಾರೆ.

ಅಣುಕು ಮದುವೆ:

ಸಣ್ಣದೊಂದು ಮದುವೆ ಹಂದರ ಅದರಲ್ಲಿ ಮದುಮಕ್ಕಳಿಗೆ ಸುರಿಗೆ, ಅರಶಿನ ಹಚ್ಚುವ ಕಾರ್ಯಕ್ರಮ ಬೀಗರ ಸಂಭ್ರಮ, ಅಕ್ಷತೆ ಹಾಕಲು ಎಲ್ಲರ ತವಕ ಗುರು ಹಿರಿಯರ ಸಮ್ಮುಖದಲ್ಲಿ ಹೊಸ ಬಾಳಿಗೆ ಕಾಲಿಟ್ಟ ಪುಟ್ಟ ದಂಪತಿಗಳು ಇದು ಮದುವೆ ಮನೆಯ ಸಂಭ್ರಮವೆಂದು ಎಲ್ಲರಿಗೂ ಗೊತ್ತು. ಆದರೆ, ನೀವು ತಿಳಿದುಕೊಂಡತೆ ಇದು ಯಾವುದೇ ನಿಜ ಬಾಲ್ಯ ವಿವಾಹ ಅಲ್ಲ. ಇದು ಚಿಣ್ಣರ ಅಣುಕು ಮದುವೆ.ಸಸಿ ಹಬ್ಬದಂದೆ ಗ್ರಾಮೀಣ ಭಾಗಗಳಲ್ಲಿ ಹಿರಿಯರು ಮತ್ತು ಮಕ್ಕಳು ಸೇರಿಕೊಂಡು ಅಣುಕು ಮದುವೆಯನ್ನು ಮಾಡಿ ಸಂಭ್ರಮಿಸುವ ಪರಿಪಾಠ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಅದರಂತೆ ಶನಿವಾರದಂದು ನಡೆದ ಸಸಿ ಹಬ್ಬದಂದು ಕೊಡೇಕಲ್ ಸಮೀಪದ ಜೋಗುಂಡಬಾವಿ ಮತ್ತು ಬೂದಿಹಾಳ ಗ್ರಾಮಗಳಲ್ಲಿ ಚಿಕ್ಕ ಮಕ್ಕಳು ಅಣುಕು ಮದುವೆಯನ್ನು ಮಾಡಿ ಸಂಭ್ರಮಪಟ್ಟರು. ಇಬ್ಬರೂ ಬಾಲಕಿಯರನ್ನು ವಧು ವರರನ್ನಾಗಿ ಮಾಡಿ ನಿಜ ಮದುವೆಯಂತೆ ಹಂದರವನ್ನು ಹಾಕಿ ಸುರಿಗೆ ಸುತ್ತಿ ಅದರೊಳಗೆ ಮದುಮಕ್ಕಳನ್ನು ಕೂಡಿಸಿ ಅವರಿಗೆ ಎಣ್ಣೆ, ಅರಶಿನ ಹಚ್ಚಿ ಸುರಿಗೆ ನೀರು ಹಾಕಿ ನಂತರ ಮದು ಮಕ್ಕಳಿಗೆ ಹೊಸ ಬಟ್ಟೆಗಳನ್ನು ಕಾಣಿಕೆ ನೀಡಿ ಆರತಿ ಮಾಡಿ ನಂತರ ಅಕ್ಷತೆಯನ್ನು ಹಾಕಿ ಸಂಭ್ರಮಿಸಿದರು. ಗ್ರಾಮದಲ್ಲಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತೆರಳಿ ಕಾಯಿ ಸಕ್ಕರೆಯನ್ನು ನೀಡಿದರು. ಇನ್ನು ಯುವಕರು ಅಣುಕು ಮದುವೆಯಲ್ಲಿ ಮದುಮಕ್ಕಳ ಜೊತೆಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.